
ಪ್ರಜಾವಾಣಿ ವಾರ್ತೆ
ಲಕ್ಷ್ಮೇಶ್ವರ: ‘ವೈಜ್ಞಾನಿಕ ಮನೋಭಾವ ಮತ್ತು ವೈಚಾರಿಕತೆಯನ್ನು ಅಳವಡಿಸಿಕೊಳ್ಳುವುದೇ ವಿಜ್ಞಾನದ ಉದ್ದೇಶ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಪಟ್ಟಣದ ಚಂದನ ಎಜುಕೇಶನ್ ಸೊಸೈಟಿ ವತಿಯಿಂದ ಶನಿವಾರ ಆಯೋಜಿಸಿದ್ದ ಪ್ರೊ. ಸಿ.ಎನ್.ಆರ್.ರಾವ್ 10ನೇ ವರ್ಷದ ವಿಜ್ಞಾನ ವಿಸ್ಕೃತ ಕಾರ್ಯಕ್ರಮ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಬಿ.ಎಸ್.ಪಾಟೀಲ ಅವರಿಗೆ 2025ನೇ ಸಾಲಿನ ‘ಚಂದನ ಶ್ರೀ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಪ್ರೊ. ಸಿ.ಎನ್.ಆರ್.ರಾವ್ ಈ ದೇಶ ಕಂಡ ಅಪರೂಪದ ವಿಜ್ಞಾನಿ. ಅವರು 10ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲೇ ವ್ಯಾಸಂಗ ಮಾಡಿದ್ದರು. ಮುಂದೆ ವಿಜ್ಞಾನವನ್ನೇ ಉಸಿರಾಗಿಸಿಕೊಂಡು; ಸಂಶೋಧನೆಯನ್ನೇ ಜೀವನವಾಗಿಸಿಕೊಂಡು ಈ ಕ್ಷೇತ್ರದಲ್ಲಿ ಅತ್ಯಂತ ಎತ್ತರಕ್ಕೆ ಬೆಳೆದರು’ ಎಂದರು.
‘ಬಸವಣ್ಣನವರ ನಾಡಿನಲ್ಲಿ ಹುಟ್ಟಿದ ನಾವು ಇಂದಿಗೂ ಕೂಡ ಮೌಢ್ಯಗಳನ್ನು ಆಚರಿಸುತ್ತಿರುವುದು ದುರ್ದೈವದ ಸಂಗತಿ. ಮೌಢ್ಯ ಹಾಗೂ ಕಂದಾಚಾರಗಳನ್ನು ಕೊನೆಗಾಣಿಸಬೇಕು ಮೌಢ್ಯ ವಿರೋಧಿ ಕಾಯ್ದೆಯನ್ನು ಜಾರಿಗೆ ತಂದೆವು. ಆದರೆ, ಸುಶಿಕ್ಷಿತರಲ್ಲೇ ಜಾತೀಯತೆ ಹೆಚ್ಚು. ಕಲಿತವರು ಕಂದಾಚಾರ, ಮೌಢ್ಯಗಳನ್ನು ಬಿಡದೇ ಹೋದರೆ ಮನುಷ್ಯ ಸಮಾಜ ಕಟ್ಟಲು ಸಾಧ್ಯವಿಲ್ಲ’ ಎಂದರು.
ನಿವೃತ್ತ ಮುಖ್ಯ ಕಾರ್ಯದರ್ಶಿ ಬಿ.ಎಸ್. ಪಾಟೀಲರ ಕಾರ್ಯ ಶ್ಲಾಘಿಸಿದ ಸಿಎಂ ಸಿದ್ದರಾಮಯ್ಯ, ‘ಶಿಕ್ಷಣ ಒಂದು ವರ್ಗಕ್ಕೆ ಸೀಮಿತವಾದುದಲ್ಲ. ಪ್ರಾಮಾಣಿಕ ಪ್ರಯತ್ನ ಮತ್ತು ಅವಕಾಶಗಳ ಸದುಪಯೋಗ ಪಡೆದು, ಉನ್ನತ ಸ್ಥಾನಕ್ಕೆ ತಲುಪಬಹುದು ಎಂಬುದಕ್ಕೆ ಬಿ.ಎಸ್.ಪಾಟೀಲರೇ ಉದಾಹರಣೆ. ಬೆಂಗಳೂರನ್ನು ಆಡಳಿತ ದೃಷ್ಟಿಯಿಂದ ವಿಭಜಿಸಲು ಬಿ.ಎಸ್.ಪಾಟೀಲರ ವರದಿ ಕಾರಣ. ಜೆ.ಎಚ್.ಪಟೇಲ್ ಸರ್ಕಾರದಲ್ಲಿ ಬಿ.ಎಸ್.ಪಾಟೀಲ ಅವರು ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು. ಜೆ.ಎಚ್.ಪಟೇಲರ ಕಾರ್ಯ ಒತ್ತಡವನ್ನು ಬಿ.ಎಸ್.ಪಾಟೀಲ ನಿಭಾಯಿಸುತ್ತಿದ್ದರು’ ಎಂದು ಹೇಳಿದರು.
ಕಾನೂನು ಸಚಿವ ಎಚ್.ಕೆ.ಪಾಟೀಲ ಮಾತನಾಡಿ, ‘ರಾಜ್ಯದಲ್ಲಿ ಇನ್ಫೋಸಿಸ್ ಸ್ಥಾಪಿಸಲು, ಬೆಳೆಯಲು ಮುಖ್ಯ ಕಾರಣವೇ ಬಿ.ಎಸ್.ಪಾಟೀಲರು. ಈ ವಿಷಯವನ್ನು ಸ್ವತಃ ನಾರಾಯಣ ಮೂರ್ತಿಯವರೇ ತಮ್ಮ ಪುಸ್ತಕದಲ್ಲಿ ನಮೂದಿಸಿದ್ದಾರೆ’ ಎಂದರು.
‘ಎಷ್ಟೇ ಸವಾಲು ಇದ್ದರೂ ಮೆಕ್ಕೆಜೋಳಕ್ಕೆ ₹2400 ಬೆಂಬಲ ಬೆಲೆ ನೀಡಿ, ರೈತರ ಕಷ್ಟಕ್ಕೆ ಸಿಎಂ ಸ್ಪಂದಿಸಿದ್ದಾರೆ. ಪ್ರತಿ ರೈತರಿಂದ 50 ಕ್ವಿಂಟಲ್ ಖರೀದಿಗೆ ಸರ್ಕಾರ ನಿರ್ದೇಶನ ನೀಡಿದೆ’ ಎಂದರು.
ಕಾರ್ಯಕ್ರಮದಲ್ಲಿ ಬಿ.ಎಸ್. ಪಾಟೀಲ ಅವರಿಗೆ ಪ್ರಸಕ್ತ ಸಾಲಿನ ‘ಚಂದನ ಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಚಂದನ ಶಾಲೆ ಮುಖ್ಯಸ್ಥ ಟಿ. ಈಶ್ವರ ಸ್ವಾಗತಿಸಿದರು.
ಶಾಸಕರಾದ ಜಿ.ಎಸ್.ಪಾಟೀಲ, ಡಾ.ಚಂದ್ರು ಲಮಾಣಿ, ಮಾಜಿ ಶಾಸಕರಾದ ಬಿ.ಆರ್.ಯಾವಗಲ್, ಜಿ.ಎಸ್.ಗಡ್ಡದೇವರಮಠ, ರಾಮಣ್ಣ ಲಮಾಣಿ, ರಾಮಕೃಷ್ಣ ದೊಡ್ಡಮನಿ, ಕಾಂಗ್ರೆಸ್ ನಾಯಕಿ ಸುಜಾತಾ ದೊಡ್ಡಮನಿ, ಬೈಲಹೊಂಗಲದ ವಿಜಯಾನಂದ ಸ್ವಾಮೀಜಿ, ಆನಂದಸ್ವಾಮಿ ಗಡ್ಡದೇವರಮಠ, ಪ್ರೊ.ಶಿವಪ್ರಸಾದ್, ಗುರುನಾಥ ದಾನಪ್ಪನವರ, ಎಸ್.ಪಿ. ಬಳಿಗಾರ ಸೇರಿದಂತೆ ಹಲವರು ಇದ್ದರು.
ಪ್ರೊ. ಸಿ.ಎನ್.ಆರ್.ರಾವ್ ಅವರು 1800 ಸಂಶೋಧನಾ ಪ್ರಬಂಧಗಳನ್ನು ಮಂಡಿಸಿ ದಾಖಲೆ ಬರೆದಿದ್ದಾರೆ. ಅವರಿಗೆ ಬರೋಬ್ಬರಿ 86 ಡಾಕ್ಟರೇಟ್ ಪದವಿಗಳು ಲಭಿಸಿವೆ. ಅವರ ವೈಜ್ಞಾನಿಕ ಸಾಧನೆ ದೊಡ್ಡದುಎಚ್.ಕೆ.ಪಾಟೀಲ ಸಚಿವ
ಡಿಸಿ ಎಸ್‌ಪಿಗೆ ಕುರ್ಚಿ ಇಲ್ಲ
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ವೇದಿಕೆ ಮೇಲೆ ಸ್ಥಳವಕಾಶ ನೀಡದ ಕಾರಣ ಕಾರ್ಯಕ್ರಮ ಮುಗಿಯುವವರೆಗೂ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ಹಾಗೂ ಎಸ್‌ಪಿ ರೋಹನ್ ಜಗದೀಶ್ ವೇದಿಕೆ ಪಕ್ಕದಲ್ಲೇ ನಿಂತು ಕಾರ್ಯಕ್ರಮ ವೀಕ್ಷಿಸಿದರು.