ADVERTISEMENT

ಲಕ್ಷ್ಮೇಶ್ವರ: ಬರಗಾಲ ದೂರವಾಗಿಸಿದ ಶೆಟ್ಟಿಕೇರಿ ಕೆರೆ

ಪ್ರಾಣಿ–ಪಕ್ಷಿಗಳ ದಾಹ ಇಂಗಿಸುವ ಸಂಜೀವಿನಿ: ಮೀನು ಸಾಕಣೆ ನಿರಂತರ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2024, 5:45 IST
Last Updated 14 ಏಪ್ರಿಲ್ 2024, 5:45 IST
ಲಕ್ಷ್ಮೇಶ್ವರ ಸಮೀಪದ ಶೆಟ್ಟಿಕೇರಿ ಗ್ರಾಮದ ಕೆರೆಯಲ್ಲಿ ನೀರು ತುಂಬಿದೆ
ಲಕ್ಷ್ಮೇಶ್ವರ ಸಮೀಪದ ಶೆಟ್ಟಿಕೇರಿ ಗ್ರಾಮದ ಕೆರೆಯಲ್ಲಿ ನೀರು ತುಂಬಿದೆ   

ಲಕ್ಷ್ಮೇಶ್ವರ: ನೂರಾರು ವರ್ಷಗಳ ಹಿಂದೆ ಹಿರಿಯರು ಕಟ್ಟಿಸಿದ ಕೆರೆಗಳು ಜನತೆಗೆ ಹೇಗೆ ಉಪಯೋಗ ಆಗುತ್ತವೆ ಎಂಬುದನ್ನು ತಾಲ್ಲೂಕಿನ ಶೆಟ್ಟಿಕೇರಿ ಕೆರೆ ಸಾಬೀತು ಮಾಡಿದೆ. ಕಳೆದ ವರ್ಷ ಮಳೆ ಇಲ್ಲದೆ ಇಡೀ ತಾಲ್ಲೂಕು ಬರಗಾಲ ಪೀಡಿತವಾಗಿ ದನ ಕರುಗಳಿಗೆ ಕುಡಿಯಲು ನೀರು ಸಿಗದ ಪರಿಸ್ಥಿತಿ ತಲೆದೋರಿದೆ. ಆದರೆ ಶೆಟ್ಟಿಕೇರಿ ಕೆರೆ ಮಾತ್ರ ಇನ್ನೂ ನೀರು ತುಂಬಿಕೊಂಡಿದ್ದು ಸಮಾಧಾನ ನೀಡುತ್ತಿದೆ.

ಅಂದಾಜು 120 ಎಕರೆ ವಿಶಾಲವಾದ ಕೆರೆ ಎರಡು ವರ್ಷಗಳ ಹಿಂದೆ ಸುರಿದ ಭಾರೀ ಮಳೆಗೆ ಸಂಪೂರ್ಣ ತುಂಬಿಕೊಂಡಿತ್ತು. ಅಂದು ತುಂಬಿದ ಕೆರೆ ಈಗ ಜಾನುವಾರುಗಳಿಗೆ ಕುಡಿಯುವ ನೀರಿಗೆ ಆಸರೆಯಾಗಿದೆ.

ಶೆಟ್ಟಿಕೇರಿ ಕೆರೆ ನೀರಾವರಿ ಉದ್ದೇಶದ್ದಾಗಿದ್ದು, ಕೆಲ ದಶಕಗಳ ಹಿಂದೆ ಇದೇ ಕೆರೆ ನೀರನ್ನು ಬಳಸಿಕೊಂಡು ರೈತರು ನೀರಾವರಿ ಮಾಡುತ್ತಿದ್ದರು. ಆದರೆ ಕೊಳವೆ ಬಾವಿಗಳು ಪರಿಚಯವಾದ ನಂತರ ಕೆರೆಯ ನೀರಿನಿಂದ ನೀರಾವರಿ ಮಾಡುವುದು ತಪ್ಪಿದೆ.

ADVERTISEMENT

ಕೆರೆಯಲ್ಲಿ ಮೀನು ಸಾಕಾಣಿಕೆ ಇಂದಿಗೂ ನಡೆಯುತ್ತಿದೆ. ಪ್ರತಿವರ್ಷ ಲಕ್ಷಾಂತರ ರೂಪಾಯಿ ಮೌಲ್ಯದ ಮೀನುಗಳು ಮಾರಾಟವಾಗುತ್ತಿದೆ. ಅಲ್ಲದೆ ಅಪರೂಪದ ನೀರು ನಾಯಿಗಳು ಈ ಕೆರೆಯಲ್ಲಿ ಇರುವುದು ಮತ್ತೊಂದು ವಿಶೇಷ. ಎರಡು ವರ್ಷಗಳ ಹಿಂದೆ ಸುರಿದ ಮಳೆಗೆ ತುಂಗಭದ್ರಾ ನದಿ ನೀರಿನಲ್ಲಿ ಈ ನೀರು ನಾಯಿಗಳು ಕೆರೆಗೆ ಬಂದಿರಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಕೆರೆಯಲ್ಲಿ ನೀರು ಇರುವ ಕಾರಣ ಸುತ್ತಮುತ್ತಲಿನ ರೈತರ ಕೊಳವೆ ಬಾವಿಗಳಲ್ಲಿ ನೀರು ಕಡಿಮೆ ಆಗಿಲ್ಲ. ಪ್ರತಿದಿನ ನೂರಾರು ದನಕರುಗಳು, ಪ್ರಾಣಿ–ಪಕ್ಷಿಗಳು ಇದೇ ಕೆರೆಯ ನೀರನ್ನು ಕುಡಿದು ದಾಹ ನೀಗಿಸಿಕೊಳ್ಳುತ್ತಿವೆ. ಸುತ್ತಲಿನ ವಾತಾವರಣ ಹಸಿರಿನಿಂದ ಕಂಗೊಳಿಸುತ್ತಿದೆ.

ಮಾಗಡಿ ಕೆರೆಗೆ ಬರುವ ವಿದೇಶಿ ಪಕ್ಷಿಗಳು ಈ ಕೆರೆಗೂ ಬರುತ್ತವೆ. ಈಗಲೂ ಹತ್ತಾರು ಬಗೆಯ ಪಕ್ಷಿಗಳು ಕೆರೆಯಲ್ಲಿ ಬೀಡು ಬಿಟ್ಟಿವೆ.

‘ಕೆರೆ ದಂಡೆಗುಂಟ ಜಾಲಿ ಗಿಡಗಳು ಬೆಳೆದಿದ್ದು ಅವುಗಳ ಎಲೆಗಳು ನೀರಲ್ಲಿ ಬಿದ್ದು ಕೆರೆ ಹೊಲಸಾಗುತ್ತಿದೆ. ಕೆರೆಯನ್ನು ಆಗಾಗ ಸ್ವಚ್ಛಗೊಳಿಸಬೇಕು’ ಎಂಬುದು ಗ್ರಾಮದ ಮಹಾದೇವಗೌಡರ ಅಭಿಪ್ರಾಯವಾಗಿದೆ.

ನಮ್ಮೂರಿನ ಕೆರೆ ತುಂಬಿರುವುದರಿಂದ ನಮ್ಮ ಹೊಲದಲ್ಲಿನ ಕೊಳವೆ ಬಾವಿಗಳು ಬತ್ತಿಲ್ಲ. ಎಲ್ಲ ಕೆರೆಗಳು ತುಂಬಿದರೆ ಬರಗಾಲ ಇದ್ದರೂ ತೊಂದರೆ ಆಗುವುದಿಲ್ಲ
-ದೀಪಕ ಲಮಾಣಿ ಶೆಟ್ಟಿಕೇರಿ ಗ್ರಾಮದ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.