
ಶಿರಹಟ್ಟಿ: ‘ರೇಷ್ಮೆ ಇಲಾಖೆ ಅಧಿಕಾರಿಗಳು ಲಂಚ ಪಡೆದು ರೈತರಿಗೆ ಸರ್ಕಾರದ ಸಹಾಯಧನ ನೀಡುತ್ತಿದ್ದು, ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ತಾಲ್ಲೂಕಿನ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಅಂತಹ ಅಧಿಕಾರಿಗಳನ್ನು ಜಿಲ್ಲೆಯಿಂದ ವರ್ಗಾವಣೆ ಮಾಡಬೇಕು’ ಎಂದು ಆರೋಪಿಸಿ ರೈತರು ಸ್ಥಳೀಯ ರೇಷ್ಮೆ ಇಲಾಖೆ ಕಚೇರಿ ಆವರಣದಲ್ಲಿ ಸೋಮವಾರ ಧರಣಿ ನಡೆಸಿದರು.
‘ಸರ್ಕಾರದಿಂದ ರೈತರಿಗೆ ನೀಡಲಾಗುತ್ತಿರುವ ರೇಷ್ಮೆ ಸಸಿ ನಾಟಿಯ ಸಹಾಯಧನ ಸ್ಥಗಿತಗೊಳಿಸಲಾಗಿದೆ. ರೇಷ್ಮೆ ಬೆಳೆಯದಿರುವ ರೈತರಿಗೆ ಹಣ ಪಡೆದು ಸಹಾಯಧನ ನೀಡುತ್ತಿದ್ದಾರೆ. ಲಂಚ ನೀಡದ ರೈತರ ಅರ್ಜಿಗಳನ್ನು ತಿರಸ್ಕರಿಸುತ್ತಿದ್ದಾರೆ. ಹಣ ಕೊಡದೇ ಪ್ರಶ್ನಿಸುವ ರೈತರನ್ನು ನಿತ್ಯ ಸತಾಯಿಸುತ್ತಿದ್ದಾರೆ. ಅವರು ಹಣ ಪಡೆದ ವಿಡಿಯೊಗಳು ಈಗಾಗಲೇ ವೈರಲ್ ಆಗಿವೆ’ ಎಂದು ರೈತರು ಆರೋಪಿಸಿದರು.
‘ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲ್ಲೂಕಿನ ರೈತರಿಗೆ ಕಳೆದ ನಾಲ್ಕೈದು ವರ್ಷಗಳಿಂದ ನಾಟಿವೆಚ್ಚ ಹಾಗೂ ಚಾಕಿವೆಚ್ಚ ನೀಡದೇ ದೊಡ್ಡ ಅನ್ಯಾಯ ಮಾಡುತ್ತಿದ್ದಾರೆ. ಈ ಹಿಂದೆ ಈ ಅನ್ಯಾದ ಕುರಿತು ಪ್ರತಿಭಟನೆ ಕೈಗೊಂಡಾಗ ಅಧಿಕಾರಿಗಳ ಭರವಸೆಗೆ ಹಿಂತೆಗೆದುಕೊಳ್ಳಲಾಗಿತ್ತು. ಸದ್ಯ ಈ ಡಿಡಿ ಅವರ ಬೇಜವಾಬ್ದಾರಿಂದ ಮತ್ತೆ ಅದನ್ನೇ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ರೈತರಲ್ಲಿ ಗುಂಪುಗಾರಿಕೆ ಹುಟ್ಟು ಹಾಕಿ ತಾಲ್ಲೂಕಿನ ರೈತರಲ್ಲಿಯೇ ಜಗಳ ತಂದಿಡುತ್ತಿದ್ದಾರೆ. ರೈತರಲ್ಲದ ಕೆಲವು ವ್ಯಕ್ತಿಗಳನ್ನು ಮೇಲಾಧಿಕಾರಿ ಹತ್ತಿರ ಕರೆದೊಯ್ದು, ಅವರ ಪರವಾಗಿ ಮಾತನಾಡಿಸುತ್ತಿದ್ದಾರೆ. ಇಂತಹ ಅಧಿಕಾರಿಗಳು ಜಿಲ್ಲೆಯಲ್ಲಿದ್ದರೆ ರೈತರು ನಮ್ಮ ನಮ್ಮಲ್ಲಿಯೇ ಜಗಳವಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು, ಮಂತ್ರಿಗಳು ಹಾಗೂ ಶಾಸಕರು ಕ್ರಮ ವಹಿಸಿ ಅವರನ್ನು ವರ್ಗಾಯಿಸಿ, ಎರಡೂ ತಾಲ್ಲೂಕಿನ ರೈತರಿಗೆ ನ್ಯಾಯಯುತವಾಗಿ ಸಿಗಬೇಕಾದ ಅನುದಾನವನ್ನು ನೀಡಬೇಕು’ ಎಂದು ಒತ್ತಾಯಿಸಿದರು.
ರೈತರಾದ ಮಲ್ಲಿಕಾರ್ಜುನ ದೊಡ್ಡಮನಿ, ರವಿಸ್ವಾಮಿ ಚೆನ್ನಸಪುರಮಠ, ನಿಂಗಪ್ಪ ಮಲ್ಲೂರ, ಸಣ್ಣಹನುಮಪ್ಪ ತಿರಕಣ್ಣವರ, ಇಸ್ಮಾಯಿಲ್ ಢಾಲಾಯತ, ಚಂದ್ರು ಬಂಡಿ, ರವಿರೊಡ್ಡನವರ ಸೇರಿದಂತೆ ಮುಂತಾದವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.