ADVERTISEMENT

ಲಿಂಗಾಯತವು ಪ್ರಗತಿಪರ ಚಿಂತನೆಯ ಧರ್ಮ: ತೋಂಟದ ಸಿದ್ಧರಾಮ ಶ್ರೀಗಳು

​ಪ್ರಜಾವಾಣಿ ವಾರ್ತೆ
Published 8 ಜನವರಿ 2021, 14:02 IST
Last Updated 8 ಜನವರಿ 2021, 14:02 IST
ಸಿದ್ಧರಾಮ ಸ್ವಾಮೀಜಿ
ಸಿದ್ಧರಾಮ ಸ್ವಾಮೀಜಿ   

ಗದಗ: ವಿಶ್ವಗುರು ಬಸವಣ್ಣನವರ ಕಾರ್ಯಕ್ಷೇತ್ರವಾಗಿದ್ದ ಬಸವಕಲ್ಯಾಣದಲ್ಲಿ ನೂತನ ‘ಅನುಭವ ಮಂಟಪ’ ನಿರ್ಮಿಸಲು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಶಿಲಾನ್ಯಾಸ ನೆರವೇರಿಸಿರುವುದು ಸಂತೋಷದ ಸಂಗತಿ. ಆದರೆ, ಆ ನೆಪದಲ್ಲಿ ಸರ್ಕಾರ ನಾಡಿನ ಬಹುತೇಕ ದಿನಪತ್ರಿಕೆಗಳಿಗೆ ನೀಡಿದ ಜಾಹಿರಾತಿನಲ್ಲಿ ಗಂಭೀರ ದೋಷವಾಗಿರುವುದು ಆಘಾತಕಾರಿಯಾಗಿದೆ ಎಂದು ಗದಗ-ಡಂಬಳ ಮಠದ ತೋಂಟದ ಸಿದ್ಧರಾಮ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದ್ದಾರೆ.

ಸರ್ಕಾರ ದಿನಪತ್ರಿಕೆಗಳಿಗೆ ನೀಡಿದ ಜಾಹೀರಾತಿನಲ್ಲಿ ‘ಸನಾತನ ಪ್ರಗತಿಪರ ಚಿಂತನೆಯ ಮರುಸೃಷ್ಟಿ’ ಎಂಬ ಮೊದಲ ವಾಕ್ಯವೇ ಗಂಭೀರ ದೋಷದಿಂದ ಕೂಡಿದೆ. ಸನಾತನಕ್ಕೂ- ಪ್ರಗತಿಪರ ಚಿಂತನೆಗೂ ಎಣ್ಣೆ-ಸೀಗೇಕಾಯಿ ಸಂಬಂಧ. ಅವೆರಡೂ ಒಂದೆಡೆ ಇರಲಾರವು. ಆದರೆ ಜಾಹೀರಾತಿನ ಮೂಲಕ ಅವೆರಡನ್ನೂ ಒಂದುಗೂಡಿಸುವ ಪವಾಡವನ್ನೇ ಮಾಡಿದೆ. ಸನಾತನ ಮತ್ತು ಪ್ರಗತಿಪರ ಎಂಬ ಶಬ್ದಗಳನ್ನು ಒಂದುಗೂಡಿಸಬಹುದೇ ಹೊರತು ಸನಾತನ ಮತ್ತು ಪ್ರಗತಿಪರ ವಿಚಾರಧಾರೆಗಳನ್ನು ಒಂದುಗೂಡಿಸಲಾಗದು ಎಂದು ಹೇಳಿದ್ದಾರೆ.

12ನೇ ಶತಮಾನದಲ್ಲಿ ಸನಾತನದ ವರ್ಣವ್ಯವಸ್ಥೆ, ಜಾತಿಭೇದ, ಲಿಂಗಭೇದಗಳನ್ನು ವಿರೋಧಿಸಿ ಪ್ರಗತಿಪರ ಚಿಂತನೆಗೆ ಹೆಸರಾದ ಲಿಂಗಾಯತ ಧರ್ಮವನ್ನು ಸ್ಥಾಪಿಸಿರುವುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ಆದರೆ ಪ್ರಗತಿಪರ ವಿಚಾರಧಾರೆಯ ಪ್ರತಿಪಾದಕರಾದ ಬಸವಣ್ಣನವರನ್ನು ಸನಾತನದ (ಧರ್ಮ) ಪ್ರತಿಪಾದಕರೆಂಬಂತೆ ಬಿಂಬಿಸಿ ಅವರಿಗೆ ಹಿಂದುತ್ವವನ್ನು ಆರೋಪಿಸಿರುವುದು ಬಸವಣ್ಣನವರಿಗೆ, ಬಸವ ತತ್ವ– ಆದರ್ಶಗಳಿಗೆ ಮಾಡಿದ ಅಪಚಾರ ಎಂದು ಹೇಳಿದ್ದಾರೆ.

ADVERTISEMENT

ಜಾಹೀರಾತಿನಲ್ಲಿ ಸನಾತನ ಶಬ್ದವನ್ನು ಪ್ರಯೋಗಿಸುವ ಮೂಲಕ ಲಿಂಗಾಯತವೆಂಬ ಸ್ವತಂತ್ರ ಧರ್ಮದ ಅಸ್ತಿತ್ವವನ್ನು ಅಲ್ಲಗಳೆಯುವ, ಲಿಂಗಾಯತರನ್ನು ಹಿಂದೂಗಳನ್ನಾಗಿಸುವ ತನ್ನ ಕಾರ್ಯಸೂಚಿಯನ್ನು ಸರ್ಕಾರ ಪ್ರಕಟಿಸಿದೆ. ಲಿಂಗಾಯತ ಧರ್ಮವು ಪ್ರಗತಿಪರ ಚಿಂತನೆಯ ಧರ್ಮವಾಗಿದೆ. ಅನುಭವ ಮಂಟಪವೆಂಬುದು ಈ ಧರ್ಮದ ಪ್ರಗತಿಪರ ಚಿಂತನೆಗಳನ್ನು ನಡೆಸುತ್ತಿದ್ದ ಕಮ್ಮಟವಾಗಿತ್ತು. ನೂತನವಾಗಿ ನಿರ್ಮಿಸಲಾಗುವ ಅನುಭವ ಮಂಟಪದಲ್ಲಿಯೂ ಪ್ರಗತಿಪರ ಚಿಂತನೆಗಳು ನಡೆಯಬೇಕೇ ಹೊರತು ಲಿಂಗಭೇದ, ಜಾತಿಭೇದ, ವರ್ಣಭೇದಗಳನ್ನು ಪ್ರತಿಪಾದಿಸುವ ಸನಾತನದ ಮರುಸೃಷ್ಟಿ ಯಾಗಬಾರದು ಎಂಬುದು ನಾಡಿನ ಸಮಸ್ತ ಪ್ರಗತಿಪರ ಚಿಂತಕರ ಅಭಿಪ್ರಾಯವಾಗಿದೆ ಎಂದು ತಿಳಿಸಿದ್ದಾರೆ.

ಲಿಂಗಾಯತ ಧರ್ಮ ಸನಾತನವಾದುದಲ್ಲ, ಅದು 12ನೇ ಶತಮಾನದಲ್ಲಿ ಉದಯಿಸಿದ ಪ್ರಗತಿಪರ ಚಿಂತನೆಯ ಧರ್ಮವಾಗಿದೆ. ಅದರ ಜನ್ಮಸ್ಥಳ ಆಗಿನ ಅನುಭವಮಂಟಪ. ನೂತನವಾಗಿ ನಿರ್ಮಾಣಗೊಳ್ಳುವ ಅನುಭವ ಮಂಟಪವನ್ನು ಪ್ರಗತಿಪರ ಚಿಂತನೆಗೆ ಮಾತ್ರ ಮೀಸಲಾಗಿ ಇರಿಸಬೇಕೆಂಬ ಆಶಯವನ್ನು ಶ್ರೀಗಳು ಪ್ರಕಟಣೆಯಲ್ಲಿ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.