ADVERTISEMENT

ಗುಬ್ಬಚ್ಚಿ ಗೂಡುಗಳ ರಕ್ಷಣೆ ಅಭಿಯಾನ; ಪ್ರಾಣಿ, ಪಕ್ಷಿಗಳ ಕಡೆಗಣನೆಗೆ ವಿಷಾದ

​ಪ್ರಜಾವಾಣಿ ವಾರ್ತೆ
Published 21 ಜನವರಿ 2026, 6:20 IST
Last Updated 21 ಜನವರಿ 2026, 6:20 IST
<div class="paragraphs"><p>ಮುಂಡರಗಿಯ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಗುಬ್ಬಚ್ಚಿ ಸಂರಕ್ಷಣಾ ಅಭಿಯಾನದಲ್ಲಿ ಶಾಲಾ ಮಕ್ಕಳಿಗೆ ಕೃತಕ ಗುಬ್ಬಚ್ಚಿ ಗೂಡುಗಳನ್ನು ವಿತರಿಸಲಾಯಿತು</p></div>

ಮುಂಡರಗಿಯ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಗುಬ್ಬಚ್ಚಿ ಸಂರಕ್ಷಣಾ ಅಭಿಯಾನದಲ್ಲಿ ಶಾಲಾ ಮಕ್ಕಳಿಗೆ ಕೃತಕ ಗುಬ್ಬಚ್ಚಿ ಗೂಡುಗಳನ್ನು ವಿತರಿಸಲಾಯಿತು

   

ಮುಂಡರಗಿ: ‘ಇತ್ತೀಚಿನ ದಿನಗಳಲ್ಲಿ ನಾವೆಲ್ಲ ವೈಜ್ಞಾನಿಕ ಹಾಗೂ ತಂತ್ರಜ್ಞಾನಗಳ ಬೆಳವಣಿಯತ್ತ ಮಾತ್ರ ಹೆಚ್ಚು ಗಮನ ಹರಿಸುತ್ತಿದ್ದು, ನಮ್ಮ ಸುತ್ತಮುತ್ತಲಿನ ಸಣ್ಣ, ಪುಟ್ಟ ಪ್ರಾಣಿ, ಪಕ್ಷಿಗಳ ಜೀವನ ನಿರ್ವಹಣೆ ಹಾಗೂ ಅವುಗಳ ಸಂರಕ್ಷಣೆಯತ್ತ ಗಮನ ಹರಿಸದಿರುವುದು ತುಂಬಾ ದುರ್ದೈವದ ಸಂಗತಿಯಾಗಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಗಂಗಾಧರ ಅಣ್ಣಿಗೇರಿ ವಿಷಾದಿಸಿದರು.

ಸುಜಲಾನ್ ಫೌಂಡೇಷನ್, ನವೋದಯ ಶಿಕ್ಷಣ ಮತ್ತು ಪರಿಸರ ಅಭಿವೃದ್ಧಿ ಸೇವಾ ಸಂಸ್ಥೆಗಳು ಮಂಗಳವಾರ ಇಲ್ಲಿಯ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಗುಬ್ಬಚ್ಚಿ ಗೂಡುಗಳ ರಕ್ಷಣೆ ಅಭಿಮಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ADVERTISEMENT

ಪರೋಪಕಾರಿಯಾಗಿರುವ ಗುಬ್ಬಿಗಳು ಇಂದು ಕಣ್ಮರೆಯಾಗುತ್ತಲಿವೆ. ಗುಬ್ಬಚ್ಚಿ ಗೂಡುಗಳನ್ನು ಈಗ ಚಿತ್ರಪಟದಲ್ಲಿ ತೋರಿಸುವ ಪರಿಸ್ಥಿತಿ ಉಂಟಾಗಿದ್ದು, ಮುಂದೊಂದು ದಿನ ಗುಬ್ಬಚ್ಚಿಗಳು ಕಣ್ಮರೆಯಾಗುವ ಸಾಧ್ಯತೆ ಇದೆ. ಮಕ್ಕಳು ತಮ್ಮ ಕಣ್ಣಿಗೆ ಬೀಳುವ ಪ್ರಾಣಿ, ಪಕ್ಷಿಗಳನ್ನು ಸಂರಕ್ಷಿಸಬೇಕು. ಈ ನಿಟ್ಟಿನಲ್ಲಿ ನಾವೆಲ್ಲ ಮಕ್ಕಳಿಗೆ ಬಾಲ್ಯದಲ್ಲಿಯೇ ಪರಿಸರ ಪ್ರಜ್ಞೆ ಮೂಡಿಸಬೇಕು ಎಂದು ಸಲಹೆ ನೀಡಿದರು.

ಆಯುಷ್ಮಾನ್ ಇಲಾಖೆಯ ಡಾ.ಪಿ.ಬಿ. ಹಿರೇಗೌಡರ ಮಾತನಾಡಿ, ಪರಿಸರಕ್ಕೆ ಪೂರಕವಾಗಿರುವ ಹಕ್ಕಿ, ಪಕ್ಷಿಗಳ ಉಳುವಿಗಾಗಿ ಶ್ರಮಿಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕು. ಪರಿಸರ ಸಂರಕ್ಷಿಸುವ ಕುರಿತ ಬಾಯಿ ಮಾತಿನ ಕಾಳಜಿಗಿಂತ ನೈಜ ಕಾಳಜಿ ಹೊಂದಬೇಕು. ಗುಬ್ಬಿ ಸೇರಿದಂತೆ ಇತರ ಪಕ್ಷಿಗಳು ಮನುಷ್ಯರ ಭಾವನೆಗಳನ್ನು ಅರಿತುಕೊಳ್ಳುವ ಶಕ್ತಿ ಹೊಂದಿವೆ ಎಂದು ತಿಳಿಸಿದರು.

ಜಿಲ್ಲಾ ವನ್ಯಜೀವಿ ಪರಿಪಾಲಕ ಸಿ.ಎಸ್. ಅರಸನಾಳ ಮಾತನಾಡಿ, ಗುಬ್ಬಿಗಳ ಗಾತ್ರ, ತೂಕ ಅತೀ ಕಡಿಮೆ ಇದ್ದು, ಅವುಗಳ ನಾಶಕ್ಕೆ ಮೊಬೈಲ್ ಗೋಪುರಗಳಿಂದ ಹೊರಸೂಸುವ ವಿಕಿರಣ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಆಹಾರ ಕೊರತೆಯಿಂದ ಗುಬ್ಬಿಗಳು ಸಾಯುತ್ತಿದ್ದು, ಮಕ್ಕಳು ತಮಗೆ ನೀಡಿದ ಕೃತಕ ಗೂಡುಗಳಲ್ಲಿ ಗುಬ್ಬಿಗಳಿಗೆ ಕಾಳು, ಕಡಿಗಳನ್ನು ಹಾಕಬೇಕು ಎಂದು ತಿಳಿಸಿದರು.

ಶಾಲಾ ಮಕ್ಕಳಿಗೆ ಕೃತಕ ಗುಬ್ಬಚ್ಚಿ ಗೂಡುಗಳನ್ನು ವಿತರಿಸಲಾಯಿತು. ಡಿ.ಟಿ. ಇಮ್ರಾಪುರ ಸ್ವಾಗತಿಸಿದರು. ನೀಡ್ಸ್ ಸಂಸ್ಥೆಯ ಸಿಇಒ ಎಚ್.ಎಫ್.ಅಕ್ಕಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗುಡದಪ್ಪ ಲಿಂಗಶೆಟ್ಟರ ನಿರೂಪಿಸಿದರು. ಎಂ.ಕರಿಬಸಪ್ಪ ವಂದಿಸಿದರು.

ಪ್ರಗತಿಪರ ರೈತ ಈಶ್ವರಪ್ಪ ಹಂಚಿನಾಳ, ಸಾಮಾಜಿಕ ವಲಯ ಅರಣ್ಯಾಧಿಕಾರಿ ಸುನಿತಾ ಪೂಜಾರ, ಸಿಡಿಪಿಒ ಮಹಾದೇವ ಇರಸನಾಳ, ಪರಮೇಶ ನಾಯಕ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.