
ಗದಗ: ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಿಸುವ ದಿಸೆಯಲ್ಲಿ ಶಾಲೆ ಹಾಗೂ ಮನೆ ಭೇಟಿ ಕಾರ್ಯಕ್ರಮ ಮಹತ್ವದ ಹೆಜ್ಜೆಯಾಗಿದೆ ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪ ನಿರ್ದೇಶಕ ಜಿ.ಎಂ.ಮುಂದಿನಮನಿ ಹೇಳಿದರು.
ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆ ಮತ್ತು ಕಲಿಕೆಯಲ್ಲಿ ನಿಧಾನಗತಿಯ ವಿದ್ಯಾರ್ಥಿಗಳಿಗೆ ನೆರವಾಗುವ ಉದ್ದೇಶದಿಂದ ಗದಗ ಜಿಲ್ಲಾ ಉಪ ನಿರ್ದೇಶಕರು ಹಾಗೂ ಅಭಿವೃದ್ಧಿ ತಂಡವು ಹಾತಲಗೇರಿ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದರು.
‘ಪರೀಕ್ಷಾ ಅವಧಿಯಲ್ಲಿ ವಿದ್ಯಾರ್ಥಿಗಳು ವೈಯಕ್ತಿಕ ಆರೋಗ್ಯ ಕಾಪಾಡಿಕೊಳ್ಳಬೇಕು. ಉಳಿದ 44 ದಿನಗಳನ್ನು ಕ್ರಿಯಾ ಯೋಜನೆಯಂತೆ ಸಮರ್ಪಕವಾಗಿ ಬಳಸಿಕೊಳ್ಳಬೇಕು’ ಎಂದು ತಿಳಿಸಿದರು.
ಟಿವಿ ಮತ್ತು ಮೊಬೈಲ್ ಬಳಕೆ ನಿಯಂತ್ರಿಸಿ, ಜಾತ್ರೆ–ಹಬ್ಬಗಳಲ್ಲಿ ಕಾಲಹರಣ ಮಾಡದೆ ವೇಳಾಪಟ್ಟಿಯಂತೆ ಅಭ್ಯಾಸ ನಡೆಸಬೇಕು ಎಂದು ತಿಳಿಸಿದರು.
ಶಿಕ್ಷಕರಾದ ಎಸ್.ಆರ್.ನದಾಫ, ಜಿ.ಡಿ.ದಾಸರ, ವೈ.ಕೆ.ಹಂದ್ರಾಳ, ಸುಧಾ ಬನ್ನಿಕಲ್ ಹಾಗೂ ಹಿರಿಯ ಉಪನ್ಯಾಸಕ ಬಿ.ಎಫ್. ಅರವಟಗಿ ಉಪಸ್ಥಿತರಿದ್ದು, ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಪ್ರಶ್ನೋತ್ತರಗಳ ಮೂಲಕ ಮಕ್ಕಳ ಆತ್ಮವಿಶ್ವಾಸ ಹೆಚ್ಚಿಸಿ, ಪರೀಕ್ಷೆಗೆ ಸಜ್ಜಾಗುವಂತೆ ಪ್ರೇರೆಪಿಸಿದರು.
ಮನೆವಾರ್ಷಿಕ ಪರೀಕ್ಷೆಯನ್ನು ನಿರ್ಭಯವಾಗಿ ಎದುರಿಸಿ, ‘40+’ ಗುರಿ ಸಾಧಿಸುವಂತೆ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಲಾಯಿತು. ರಾಜ್ಯ ಮಟ್ಟದ ಮೂರನೇ ಪೂರ್ವ ಸಿದ್ಧತಾ ಪರೀಕ್ಷೆಗೆ ಗಂಭೀರವಾಗಿ ತಯಾರಿ ನಡೆಸುವಂತೆ ಮಾರ್ಗದರ್ಶನ ನೀಡಲಾಯಿತು.
ನಂತರ ತಂಡವು ಊರಿನ ಹಿರಿಯರು ಮತ್ತು ಶಿಕ್ಷಣ ಪ್ರೇಮಿಗಳೊಂದಿಗೆ ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ ನೀಡಿ, ಮಕ್ಕಳ ಶೈಕ್ಷಣಿಕ ಪ್ರಗತಿ ಕುರಿತು ಪಾಲಕರೊಂದಿಗೆ ಚರ್ಚಿಸಿತು.
ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಮುಖ್ಯಶಿಕ್ಷಕರು, ಶಿಕ್ಷಕರು, ಪಾಲಕರು ಹಾಗೂ ವಿದ್ಯಾರ್ಥಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.