ADVERTISEMENT

ರಾಜ್ಯಮಟ್ಟದ ಆಟೊ ಚಾಲಕರು, ಮಾಲೀಕರ ಸಮಾವೇಶ: ರ‍್ಯಾಲಿಯಲ್ಲಿ ಐದು ಸಾವಿರ ಆಟೊ ಭಾಗಿ

​ಪ್ರಜಾವಾಣಿ ವಾರ್ತೆ
Published 27 ಜನವರಿ 2024, 15:36 IST
Last Updated 27 ಜನವರಿ 2024, 15:36 IST

ಗದಗ: ‘ಆಟೊ ಚಾಲಕರನ್ನು ಕಾರ್ಮಿಕರೆಂದು ಪರಿಗಣಿಸಬೇಕು, ವಸತಿ, ವಿಮೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜ.28ರಂದು ಇದೇ ಮೊದಲ ಬಾರಿಗೆ ನಗರದಲ್ಲಿ ರಾಜ್ಯಮಟ್ಟದ ಆಟೊ ಚಾಲಕರು ಮತ್ತು ಮಾಲೀಕರ ಸಮಾವೇಶ ಹಮ್ಮಿಕೊಳ್ಳಲಾಗಿದೆ’ ಎಂದು ಗದಗ ಜಿಲ್ಲಾ ವಿವಿಧ ಆಟೊ ಚಾಲಕರು, ಮಾಲೀಕರ ಸಂಘಟನೆಗಳ ಒಕ್ಕೂಟದ ಗೌರವ ಅಧ್ಯಕ್ಷ ವೆಂಕನಗೌಡ ಆರ್‌.ಗೋವಿಂದಗೌಡ್ರ ತಿಳಿಸಿದರು.

ನಗರದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಜ.28ರಂದು ಬೆಳಿಗ್ಗೆ 10.30 ತೋಂಟದಾರ್ಯ ಮಠದಿಂದ ಆಟೊ ರ‍್ಯಾಲಿ ನಡೆಯಲಿದ್ದು, ಸುಮಾರು ಐದು ಸಾವಿರಕ್ಕೂ ಹೆಚ್ಚು ಆಟೊಗಳು ಪಾಲ್ಗೊಳ್ಳಲಿವೆ. ಕಾಂಗ್ರೆಸ್‌ ಯುವಮುಖಂಡ ಕೃಷ್ಣಗೌಡ ಪಾಟೀಲ ರ‍್ಯಾಲಿಗೆ ಚಾಲನೆ ನೀಡುವರು’ ಎಂದು ತಿಳಿಸಿದರು.

ಮಧ್ಯಾಹ್ನ 1ಗಂಟೆಗೆ ನಗರದ ಡಾ. ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ಸಮಾವೇಶ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ.ಪಾಟೀಲ ಕಾರ್ಯಕ್ರಮ ಉದ್ಘಾಟಿಸುವರು. ತೋಂಟದಾರ್ಯ ಮಠದ ಸಿದ್ಧರಾಮ ಸ್ವಾಮೀಜಿ ಮತ್ತು ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜನವರು ಸಾನ್ನಿಧ್ಯವಹಿಸುವರು. ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಭಾಗವಹಿಸುವರು. ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ವಿಜಯ್‌ ಕಲ್ಮನಿ ಅಧ್ಯಕ್ಷತೆ ವಹಿಸುವರು’ ಎಂದು ತಿಳಿಸಿದರು.

ADVERTISEMENT

‘ಆಟೊ ಚಾಲಕರು ಮತ್ತು ಮಾಲೀಕರ ಬೇಡಿಕೆಗಳನ್ನು ಸರ್ಕಾರ ಮುಂಬರುವ ಬಜೆಟ್‍ನಲ್ಲಿ ಘೋಷಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟದ ರೂಪುರೇಷೆ ಸಿದ್ಧಪಡಿಸಲಾಗುವುದು’ ಎಂದು ತಿಳಿಸಿದರು.

ಸಮಾವೇಶದಲ್ಲಿ ಗದಗ ಜಿಲ್ಲೆ, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಾರವಾರ, ದಕ್ಷಿಣ ಕನ್ನಡ, ಶಿವಮೊಗ್ಗ ಹಾವೇರಿ, ದಾವಣಗೆರೆ, ಚಿತ್ರದುರ್ಗ, ಬೆಂಗಳೂರು, ಕೊಪ್ಪಳ, ಬಳ್ಳಾರಿ, ಬಾಗಲಕೋಟ, ವಿಜಯಪುರ, ಕಲಬುರಗಿ, ವಿಜಯನಗರ, ಯಾದಗಿರಿ, ರಾಯಚೂರು, ಮಂಡ್ಯ ಸೇರಿದಂತೆ ವಿವಿಧ ಜಿಲ್ಲೆಗಳ ಆಟೊ ಚಾಲಕರ ಸಂಘಟನೆಗಳ ಮುಖಂಡರುಗಳ ಭಾಗವಹಿಸುವರು’ ಎಂದು ತಿಳಿಸಿದರು.

ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಬಸವರಾಜ ಮನಗುಂಡಿ, ಪರಶುರಾಮ ಪೂಜಾರ, ಮಂಜುನಾಥ ಅಗಸಿಮನಿ, ಬಾಬಾಜಾನ ಬಳಗಾನೂರ, ರಫೀಕ ಜಮಾಲಖಾನವರ, ಮೋಹನ ಶಿಂಗಾಡಿ, ಅಬೂಬಕರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.