ADVERTISEMENT

ಮುಂಡರಗಿ: ಟನ್ ಕಬ್ಬಿಗೆ ₹3,500 ದರ ನಿಗದಿಗೆ ಆಗ್ರಹ

ರೈತರು ಹಾಗೂ ಅಧಿಕಾರಿಗಳ ಸಭೆ ನಡೆಸದೇ ಕಬ್ಬು ಅರೆಯುತ್ತಿರುವ ಕಾರ್ಖಾನೆ

ಕಾಶಿನಾಥ ಬಿಳಿಮಗ್ಗದ
Published 8 ನವೆಂಬರ್ 2025, 4:37 IST
Last Updated 8 ನವೆಂಬರ್ 2025, 4:37 IST
ರೈತರು, ಅಧಿಕಾರಿಗಳು ಹಾಗೂ ಸಕ್ಕರೆ ಕಾರ್ಖಾನೆಗಳ ಮಾಲೀಕರ ಸಭೆಯನ್ನು ಕರೆಯಬೇಕು ಎಂದು ಒತ್ತಾಯಿಸಿ ಕಬ್ಬು ಬೆಳೆಗಾರರ ಸಂಘದ ಮುಖಂಡರು ಮುಂಡರಗಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು
ರೈತರು, ಅಧಿಕಾರಿಗಳು ಹಾಗೂ ಸಕ್ಕರೆ ಕಾರ್ಖಾನೆಗಳ ಮಾಲೀಕರ ಸಭೆಯನ್ನು ಕರೆಯಬೇಕು ಎಂದು ಒತ್ತಾಯಿಸಿ ಕಬ್ಬು ಬೆಳೆಗಾರರ ಸಂಘದ ಮುಖಂಡರು ಮುಂಡರಗಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು   

ಮುಂಡರಗಿ: ಕಬ್ಬಿನ ಬೆಳೆಗೆ ಸೂಕ್ತ ಬೆಲೆ ನೀಡುವಂತೆ ಒತ್ತಾಯಿಸಿ ಬೆಳಗಾವಿ ಜಿಲ್ಲೆಯ ಗುರ್ಲಾಪುರ ಗ್ರಾಮದಲ್ಲಿ ರಾಜ್ಯದ ವಿವಿಧ ಭಾಗಗಳ ಕಬ್ಬು ಬೆಳೆಗಾರರು ಹಲವು ದಿನಗಳಿಂದ ಅಹೋರಾತ್ರಿ ಹೋರಾಟ ಕೈಗೊಂಡಿದ್ದು, ಮುಂಡರಗಿ ತಾಲ್ಲೂಕಿನ ಹಲವು ರೈತರು ಗುರ್ಲಾಪುರಕ್ಕೆ ತೆರಳಿ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ.

ತಾಲ್ಲೂಕಿನ ಗಂಗಾಪುರ ಗ್ರಾಮದಲ್ಲಿ ಹಲವು ವರ್ಷಗಳಿಂದ ವಿಜಯನಗರ ಶುಗರ್ಸ್ ಸಕ್ಕರೆ ಕಾರ್ಖಾನೆಯು ಕಾರ್ಯನಿರ್ವಹಿಸುತ್ತಿದೆ. ರಾಜ್ಯದ ಇತರ ಭಾಗಗಳಲ್ಲಿ ಇರುವಂತೆ ತಾಲ್ಲೂಕಿನ ಕಬ್ಬು ಬೆಳೆಗಾರರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಕಬ್ಬಿಗೆ ಸೂಕ್ತ ಬೆಲೆ ದೊರೆಯದೆ ಸರ್ಕಾರ ಹಾಗೂ ಇಲ್ಲಿಯ ಸಕ್ಕರೆ ಕಾರ್ಖಾನೆಯವರಿಗೆ ನಿತ್ಯ ಶಾಪ ಹಾಕುತ್ತಿದ್ದಾರೆ.

ಕೇಂದ್ರ ಸರ್ಕಾರ ಟನ್ ಕಬ್ಬಿಗೆ ₹3,500ದರ ನಿಗದಿಗೊಳಿಸಿದೆ. ಆದರೆ ಇಲ್ಲಿಯ ಸಕ್ಕರೆ ಕಾರ್ಖಾನೆಯವರು ರೈತರ ಟನ್ ಕಬ್ಬಿಗೆ ₹2,629 ನೀಡುತ್ತಿದ್ದಾರೆ. ದರ ನಿಗದಿ ಕುರಿತು ರೈತರು ಹಾಗೂ ಸಕ್ಕರೆ ಕಾರ್ಖಾನೆಯವರ ನಡುವಿನ ತಿಕ್ಕಾಟ ನಿರಂತರವಾಗಿ ನಡೆದಿದ್ದು, ಇಬ್ಬರಲ್ಲಿಯೂ ಒಮ್ಮತ ಮೂಡದಾಗಿದೆ. ಈ ನಡುವೆ ಪಕ್ಕದ ಕೊಪ್ಪಳ, ಶಿರಹಟ್ಟಿ ಮೊದಲಾದ ಭಾಗಗಳ ಕೆಲವು ರೈತರು ಅನಿವಾರ್ಯವಾಗಿ ಸಕ್ಕರೆ ಕಾರ್ಖಾನೆಯವರು ನೀಡುವ ಬೆಲೆಗೆ ಕಬ್ಬು ಮಾರಾಟ ಮಾಡಿ ಕೈತೊಳೆದುಕೊಳ್ಳುತ್ತಿದ್ದಾರೆ. ಕೆಲವು ರೈತರು ಇನ್ನು ಮುಂದೆ ಕಬ್ಬು ಬೆಳೆಯುವ ಸಹವಾಸವೇ ಬೇಡವೆನ್ನುವ ತಿರ್ಮಾನಕ್ಕೆ ಬರತೊಡಗಿದ್ದಾರೆ.

ADVERTISEMENT

ಸಾಮಾನ್ಯವಾಗಿ ಸಕ್ಕರೆ ಕಾರ್ಖಾನೆಯವರು ಕಬ್ಬು ಅರೆಯುವುದಕ್ಕೂ ಪೂರ್ವದಲ್ಲಿ ರೈತರು ಹಾಗೂ ಅಧಿಕಾರಿಗಳ ಸಭೆ ನಡೆಸುತ್ತಾರೆ. ಆದರೆ ಪ್ರಸ್ತುತ ವರ್ಷ ಇಲ್ಲಿಯ ಸಕ್ಕರೆ ಕಾರ್ಖಾನೆಯವರು ಯಾವ ಸಭೆಯನ್ನೂ ನಡೆಸದೆ ಕಬ್ಬು ಅರೆಯಲು ಆರಂಭಿಸಿದ್ದಾರೆ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಈಚೆಗೆ ಜಿಲ್ಲಾಧಿಕಾರಿಗಳ ಜೊತೆಗೆ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಎಲ್ಲ ರೈತರಿಗೆ ಎಫ್.ಆರ್.ಪಿ. ದರ ನೀಡಬೇಕು ಎಂದು ಸಕ್ಕರೆ ಕಾರ್ಖಾನೆಯವರಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಸರ್ಕಾರ ನಿಗದಿಪಡಿಸಿರುವ ದರದಲ್ಲಿ ಸಕ್ಕರೆ ಕಾರ್ಖಾನೆಯವರು ಕಬ್ಬು ಖರೀದಿಸಬೇಕು. ಈ ಕುರಿತು ಏಳು ದಿನಗಳೊಳಗೆ ಸಕ್ಕರೆ ಕಾರ್ಖಾನೆಯ ಅಧಿಕಾರಿಗಳು ಹಾಗೂ ಕಬ್ಬು ಬೆಳೆಗಾರರ ಸಭೆಯನ್ನು ಕರೆಯಬೇಕು ಎಂದು ಒತ್ತಾಯಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ವೀರನಗೌಡ ಪಾಟೀಲ, ಜಿಲ್ಲಾ ಘಟಕದ ಅಧ್ಯಕ್ಷ ರವಿ ಕೊಳಲ ಹಾಗೂ ಮತ್ತಿತರ ರೈತ ಮುಖಂಡರು ಶುಕ್ರವಾರ ತಹಶಿಲ್ದಾರರಿಗೆ ಮನವಿ ಸಲ್ಲಿಸಿದ್ದಾರೆ.

ಸಮಸ್ಯೆಗಳ ಸರಮಾಲೆ

ಇಲ್ಲಿಯ ಕಬ್ಬು ಬೆಳೆಗಾರರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು ಸಮಸ್ಯೆಗಳ ನಿವಾರಣೆಗಾಗಿ ಹಲವವು ಬಾರಿ ರೈತರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಸಕ್ಕರೆ ಕಾರ್ಖಾನೆಗೆ ಬೀಗ ಜಡಿದು ಕಾರ್ಖಾನೆಯ ಮುಂದೆ ಧರಣಿ ಕೈಗೊಂಡಿದ್ದಾರೆ. ಕಬ್ಬು ಕಟಾವು ವಿಳಂಬ ಸಾಗಣೆ ಕಬ್ಬು ಕಡಿಯುವವರು ಹಾಗೂ ಸಾಗಿಸುವವರ ಖುಷಿ ರೂಪದಲ್ಲಿ ಹೆಚ್ಚುಹಣ ವಸೂಲಿ ಮೊದಲಾದ ಹಲವು ಸಮಸ್ಯೆಗಳ ಸುಳಿಯಲ್ಲಿ ಕಬ್ಬು ಬೆಳೆಗಾರರು ಸಿಲುಕಿದ್ದಾರೆ. ಕಟಾವು ವಿಳಂಬವಾಗುವ ಕಾರಣದಿಂದ ಕೆಲವು ರೈತರು 14-16 ತಿಂಗಳ ಕಾಲ ತಮ್ಮ ಜಮೀನಿನಲ್ಲಿ ಕಬ್ಬನ್ನು ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಕಬ್ಬಿನ ದರ ₹3500 ನಿಗದಿ ಮಾಡಬೇಕು ಎಂಬುದು ಸೇರಿದಂತೆ ಸರ್ಕಾರ ಕಬ್ಬು ಬೆಳೆಗಾರರ ಸಮಸ್ಯೆಗಳ ನಿವಾರಣೆಗೆ ಸಂಬಂಧಪಟ್ಟ ಅಧಿಕಾರಿಗಳು ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ಕಬ್ಬು ಬೆಳೆಗಾರರ ಸಭೆ ಕರೆದು ರೈತರ ಸಮಸ್ಯೆಗಳನ್ನು ನಿವಾರಿಸಬೇಕು
–ರವಿ ಕೊಳಲ, ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಮುಂಡರಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.