ಗದಗ: ‘2024-25ನೇ ಸಾಲಿನ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಎಫ್‌ಎಕ್ಯು ಗುಣಮಟ್ಟದ ಹಿಂಗಾರು ಹಂಗಾಮಿನ ಸೂರ್ಯಕಾಂತಿ ಹುಟ್ಟುವಳಿ ಖರೀದಿಸಲು ಬೆಂಬಲ ಬೆಲೆ ನಿಗದಿಪಡಿಸಲಾಗಿದೆ. ನೋಂದಣಿ ಪ್ರಕ್ರಿಯೆಯಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ತಿಳಿಸಿದರು.
ಗದಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಕೃಷಿ ಹುಟ್ಟುವಳಿಯಿಂದ ಸೂರ್ಯಕಾಂತಿ ಖರೀದಿಸುವ ಕುರಿತು ನಡೆದ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ಜಿಲ್ಲೆಯಲ್ಲಿ ತೆರೆಯಲಾಗುವ ಸೂರ್ಯಕಾಂತಿ ಹುಟ್ಟುವಳಿ ಖರೀದಿ ಕೇಂದ್ರಗಳಲ್ಲಿ ಖರೀದಿಸಲಾಗುವ ಎಫ್‌ಎಕ್ಯು ಗುಣಮಟ್ಟ ಪರಿಶೀಲನೆಗಾಗಿ ಗ್ರೇಡರ್‌ಗಳನ್ನು ನೇಮಕ ಮಾಡಬೇಕು ಮತ್ತು ಅವರಿಗೆ ಎಫ್‌ಎಕ್ಯು ಗ್ರೇಡಿಂಗ್ ಮಾಡುವ ಕುರಿತಾದ ತರಬೇತಿ ನೀಡಬೇಕು. ಸರ್ಕಾರದ ಆದೇಶಾನುಸಾರ ಪ್ರತಿ ಎಕರೆಗೆ 4 ಕ್ವಿಂಟಲ್ ಗರಿಷ್ಠ ಹಾಗೂ ಪ್ರತಿ ರೈತರಿಂದ ಗರಿಷ್ಟ 20 ಕ್ವಿಂಟಲ್ ಸೂರ್ಯಕಾಂತಿ ಖರೀದಿಸಬೇಕು’ ಎಂದರು.
ಕೃಷಿ ಮಾರಾಟ ಇಲಾಖೆಯ ಸಹಾಯಕ ನಿರ್ದೇಶಕಿ ಸುಧಾ ಬಂಡಿ ಮಾತನಾಡಿ, ‘ಕೇಂದ್ರ ಸರ್ಕಾರದ ಬೆಂಬಲ ಬೆಲೆ ಮಾರ್ಗಸೂಚಿ ಅನ್ವಯ ಎಫ್‌ಎಕ್ಯು ಗುಣಮಟ್ಟದ ಸೂರ್ಯಕಾಂತಿ ಹುಟ್ಟುವಳಿಗೆ ಪ್ರತಿ ಕ್ವಿಂಟಲ್‌ಗೆ ₹7,280 ನಿಗದಿಪಡಿಸಲಾಗಿದೆ’ ಎಂದರು.
‘ಸರ್ಕಾರದ ಆದೇಶದ ಅನುಸಾರ ಎನ್‌ಸಿಸಿಎಫ್ ಸಂಸ್ಥೆಯನ್ನು ಕೇಂದ್ರದ ಖರೀದಿ ಏಜೆನ್ಸಿಯಾಗಿ ಹಾಗೂ ಕರ್ನಾಟಕ ಸಹಕಾರ ಎಣ್ಣೆ ಬೀಜ ಬೆಳೆಗಾರರ ಮಹಾ ಮಂಡಳಿ ನಿಯಮಿತವನ್ನು ರಾಜ್ಯ ಮಟ್ಟದ ಖರೀದಿ ಏಜೆನ್ಸಿಯಾಗಿ ನೇಮಿಸಲಾಗಿದೆ. ರೈತರ ನೋಂದಣಿ ಕಾಲಾವಧಿಯನ್ನು 80 ದಿನಗಳವರೆಗೆ ಹಾಗೂ ಖರೀದಿ ಅವಧಿಯನ್ನು 90 ದಿನಗಳವರೆಗೆ ನೋಂದಣಿ ಕಾರ್ಯದ ಜತೆಗೆ ಖರೀದಿ ಪ್ರಕ್ರಿಯೆ ಪ್ರಾರಂಭಿಸಲು ಆದೇಶಿಸಲಾಗಿದೆ’ ಎಂದು ತಿಳಿಸಿದರು.
ಜಿಲ್ಲೆಯ 9 ಕಡೆಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ತೋಟಗಾರಿಕೆ ಇಲಾಖೆ, ಸಹಕಾರಿ ಸಂಘಗಳ ಉಪನಿಬಂಧಕರು, ಕೆಒಎಫ್ ವ್ಯವಸ್ಥಾಪಕರು ಇದ್ದರು.
ಎಲ್ಲೆಲ್ಲಿ ಖರೀದಿ ಕೇಂದ್ರ?
ಗದಗ ತಾಲ್ಲೂಕಿನ ಬಳಗಾನೂರು ಹೊಂಬಳ. ಶಿರಹಟ್ಟಿ ತಾಲ್ಲೂಕಿನ ರಣತೂರ ಶಿಗ್ಲಿ. ರೋಣ ತಾಲ್ಲೂಕಿನ ಅಬ್ಬಿಗೇರಿ. ನರಗುಂದ ತಾಲ್ಲೂಕಿನ ಕಣಕಿಕೊಪ್ಪ ನರಗುಂದ. ಮುಂಡರಗಿ ತಾಲ್ಲೂಕಿನ ಬರದೂರು ಕಲಕೇರಿಯಲ್ಲಿ ಸೂರ್ಯಕಾಂತಿ ಖರೀದಿ ಕೇಂದ್ರಗಳು ಪ್ರಾರಂಭಗೊಳ್ಳಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.