ADVERTISEMENT

ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ: ಗದಗ ಜಿಲ್ಲೆಯಲ್ಲೂ ತೀವ್ರ ಪ್ರತಿಭಟನೆಗಳು

ರೈತರ ವಿವಿಧ ಬೇಡಿಕೆ ಈಡೇರಿಸಲು ಕಾಂಗ್ರೆಸ್ ಸರ್ಕಾರ ವಿಫಲ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2025, 4:41 IST
Last Updated 18 ನವೆಂಬರ್ 2025, 4:41 IST
ವಿವಿಧ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿ ಶಿರಹಟ್ಟಿ ತಾಲ್ಲೂಕು ಬಿಜೆಪಿ ರೈತ ಮೊರ್ಚಾ ವತಿಯಿಂದ ಎ.ಸಿ ಗಂಗಪ್ಪ ಎಂ. ಅವರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು
ವಿವಿಧ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿ ಶಿರಹಟ್ಟಿ ತಾಲ್ಲೂಕು ಬಿಜೆಪಿ ರೈತ ಮೊರ್ಚಾ ವತಿಯಿಂದ ಎ.ಸಿ ಗಂಗಪ್ಪ ಎಂ. ಅವರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು   

ಶಿರಹಟ್ಟಿ: ರೈತರ ವಿವಿಧ ಬೇಡಿಕೆ ಈಡೇರಿಸಲು ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಬಿಜೆಪಿ ಶಿರಹಟ್ಟಿ ಮಂಡಳ ರೈತ ಮೋರ್ಚಾ ವತಿಯಿಂದ ಅಪರ ಜಿಲ್ಲಾಧಿಕಾರಿ ಗಂಗಪ್ಪ ಎಂ. ಅವರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.

ಸ್ಥಳೀಯ ಪೇಟೆ ಆಂಜನೇಯ ದೇವಸ್ಥಾನದಿಂದ ಪ್ರತಿಭಟನೆ ಪ್ರಾರಂಭಿಸಿ, ಎತ್ತಿನ ಚಕ್ಕಡಿಯೊಂದಿಗೆ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಸಂಚರಿಸಲಾಯಿತು.‌ ಟಯರ್‌ಗೆ ಬೆಂಕಿ ಹಚ್ಚಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ ಪ್ರತಿಭಟನಾಕಾರರು, ನೆಹರೂ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ನಂತರ ತಹಶೀಲ್ದಾರ್‌ ಕಚೇರಿಯಲ್ಲಿ ಎಸಿ ಅವರಿಗೆ ಮನವಿ ಸಲ್ಲಿಸಿದರು.

ಶಾಸಕ ಚಂದ್ರು ಲಮಾಣಿ ಮಾತನಾಡಿ, ಭ್ರಷ್ಟಾಚಾರ ಹಾಗೂ ಅಧಿಕಾರದ ದಾಹದಲ್ಲಿ ಮುಳುಗಿದ ಕಾಂಗ್ರೆಸ್ ಸರ್ಕಾರ ರಾಜ್ಯದ ರೈತರನ್ನು ಧಿಕ್ಕರಿಸುತ್ತಿರುವುದು ಅತ್ಯಂತ ಖಂಡನೀಯ. ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ನೀಡದೆ ಸತಾಯಿಸುತ್ತಿದ್ದು, ನಿತ್ಯ ರೈತರ ಶಾಪಕ್ಕೆ ಗುರಿಯಾಗುತ್ತಿದೆ. ಮುಂಗಾರಿನ ಹೆಸರು ಬೆಳೆ ಅತೀವೃಷ್ಟಿಯಿಂದ ಸಂಪೂರ್ಣ ಹಾಳಾಗಿದೆ. ಅಲ್ಪ ಸ್ವಲ್ಪ ಉಳಿದ ಬೆಳೆಗೂ ಸರಿಯಾದ ಬೆಲೆ ನೀಡಿಲ್ಲ. ಹೆಸರು ಬೆಳೆ ಮುಗಿದ ನಂತರ ಬೆಂಬ ಬೆಲೆ ಖರೀದಿ ಪ್ರಾರಂಭಿಸಿದ್ದು, ಸರ್ಕಾರದ ಬೇಜವಾಬ್ದಾರಿ ಎಂದು ಕಿಡಿಕಾರಿದರು.

ADVERTISEMENT

ತಾಲ್ಲೂಕಿನಲ್ಲಿ ರೈತರು ಭರದಿಂದ ಮೆಕ್ಕೆಜೋಳ ಬೆಳೆ ಕಟಾವು ಪ್ರಾರಂಭಿಸಿದ್ದಾರೆ. ರೈತರು ತಮ್ಮ ಅಡಚಣೆಗಾಗಿ ದಲ್ಲಾಳಿಗಳ ಗಾಳಕ್ಕೆ ತುತ್ತಾಗುತ್ತಿದ್ದು, ಅತೀ ಕನಿಷ್ಠ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಈಗಾಗಲೇ ಕೇಂದ್ರ ಸರ್ಕಾರ ಮೆಕ್ಕೆಜೋಳ ಖರೀದಿಗೆ ₹2,400 ಘೋಷಣೆ ಮಾಡಿದ್ದು, ಶೀಘ್ರವಾಗಿ ಬೆಂಬಲ ಬೆಲೆಯ ಕೇಂದ್ರಗಳನ್ನು ತೆರೆದು ರೈತರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವಾಗಬೇಕು. ಈರುಳ್ಳಿ ಬೆಲೆ ಕುಸಿತವಾಗಿದೆ. ಕಬ್ಬು ಬೆಳೆಗಾರರು ಸತತವಾಗಿ ಹೋರಾಟ ನಡೆಸಿದರೂ ಸರಿಯಾಗಿ ಸ್ಪಂದನೆ ನೀಡದ ಸರ್ಕಾರಕ್ಕೆ ರಾಜ್ಯದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಕಾಟಾಚಾರಕ್ಕೆ ಬೆಳೆ ಸಮೀಕ್ಷೆ ಮಾಡಿದ ಸರ್ಕಾರ ಬೆಳೆವಿಮೆಯಲ್ಲಿ ಮಧ್ಯವರ್ತಿಗಳ ಹಾವಳಿಗೆ ಮಾರ್ಗ ಮಾಡಿದೆ. ಈ ಎಲ್ಲಾ ಸಮಸ್ಯೆಗಳನ್ನು ಮನಗಂಡು ಸರ್ಕಾರ ಬೆಳೆವಿಮೆ ಹಾಗೂ ರೈತ ಉತ್ಪನ್ನಗಳಿಗೆ ಬೆಂಬಲ ಬೆಲೆಯಲ್ಲಿ ಖರೀದಿಸಬೇಕು. ಇಲ್ಲವಾದರೆ ಬೃಹತ್ ಹೋರಾಟ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ತಹಶೀಲ್ದಾರ್‌ ಕೆ. ರಾಘವೇಂದ್ರ ರಾವು, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ, ಫಕೀರೇಶ ರಟ್ಟಿಹಳ್ಳಿ, ಶಿವಪ್ರಕಾಶ ಮಹಾಜನಶೆಟ್ಟರ, ನಾಗರಾಜ ಲಕ್ಕುಂಡಿ, ದೀಪು ಕಪ್ಪತ್ತನವರ, ಮೋಹನ್ ಗುತ್ತೆಮ್ಮನವರ, ತಿಮ್ಮರಡ್ಡಿ ಮರಡ್ಡಿ, ಗೂಳಪ್ಪ ಕರಿಗಾರ, ವಿಠಲ ಬಿಡವೆ, ವೀರಣ್ಣ ಅಂಗಡಿ, ಶರಣಪ್ಪ ಹರ್ಲಾಪೂರ, ಬಿ‌.ಡಿ.ಪಲ್ಲೇದ, ರಾಮಣ್ಣ ಕಂಬಳಿ, ನಿಂಗಪ್ಪ ಬನ್ನಿ, ನಂದಾ ಪಲ್ಲೇದ, ಶ್ರೀನಿವಾಸ ಬಾರ್ಬರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.