
ಗದಗ: ಇಲ್ಲಿನ ಗದಗ ಬೆಟಗೇರಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆ ವಿಷಯವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಕಾನೂನು ಸಮರ ನಡೆಸಿದ್ದು, ಚುನಾವಣೆ ನಡೆಸದಂತೆ ಬಿಜೆಪಿಗರು ಸುಪ್ರೀಂ ಕೋರ್ಟ್‌ನಿಂದ ತಡೆ ಆದೇಶ ತಂದ ಹಿನ್ನಲೆಯಲ್ಲಿ ಮಾರ್ಚ್ 3ಕ್ಕೆ ನಿಗದಿಯಾಗಿದ್ದ ಚುನಾವಣೆ ರದ್ದಾಗಿದೆ.
ಮುಂದುವರಿದು, ಕೋರ್ಟ್ ಆದೇಶದ ನಡುವೆಯೂ ಚುನಾವಣಾಧಿಕಾರಿ 2025ರ ಫೆಬ್ರುವರಿ 28ರಂದು ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಿ ನ್ಯಾಯಾಲಯದ ಆದೇಶ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ಸದಸ್ಯರು ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ಮಾರ್ಚ್ 2ರಂದು ನಡೆದಿದ್ದು, ಇದರಲ್ಲಿ ನ್ಯಾಯಾಂಗ ನಿಂದನೆ ತೂಗುಕತ್ತಿಯಿಂದ ಚುನಾವಣಾಧಿಕಾರಿ ಪಾರಾಗಿದ್ದಾರೆ.
‘ಧಾರವಾಡದಲ್ಲಿರುವ ಹೈಕೋರ್ಟ್‌ನ ದ್ವಿಸದಸ್ಯ ಪೀಠದಲ್ಲಿ ಸೋಮವಾರ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಯಿತು. ಈ ವೇಳೆ ಚುನಾವಣಾಧಿಕಾರಿ ಕ್ಷಮಾಪಣಾ ಪತ್ರ ನೀಡಿ, ಕ್ಷಮೆ ಕೋರಿದ್ದನ್ನು ಹೈಕೋರ್ಟ್ ಸ್ವೀಕರಿಸಿ, ಅವರನ್ನು ನ್ಯಾಯಾಂಗ ನಿಂದನೆಯ ತೂಗುಕತ್ತಿಯಿಂದ ಪಾರು ಮಾಡಿದೆ. ಜತೆಗೆ ಕಳೆದ ವರ್ಷ ಫೆಬ್ರುವರಿ 28ರಂದು ನಡೆದಿದ್ದ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣಾ ಪ್ರಕ್ರಿಯೆಯನ್ನೂ ರದ್ದುಪಡಿಸಿದೆ’ ಎಂದು ಬಿಜೆಪಿ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
‘ನ್ಯಾಯಾಂಗ ನಿಂದನೆ ಪ್ರಕರಣ ಈಗ ಮುಗಿದಿದೆ. 2025ರ ಫೆಬ್ರುವರಿ 28ರಂದು ನಡೆದಿದ್ದ ಚುನಾವಣಾ ಪ್ರಕ್ರಿಯೆ ಸಂಪೂರ್ಣ ರದ್ದಾಗಿದೆ. ನ್ಯಾಯಾಲಯ ಮುಂದೆ ನೀಡುವ ಆದೇಶದಂತೆ ಹೊಸದಾಗಿ ಚುನಾವಣೆ ನಡೆಯಲಿದೆ’ ಎಂದು ನಗರಸಭೆಯ ಬಿಜೆಪಿ ಸದಸ್ಯ ಚಂದ್ರು ತಡಸದ ತಿಳಿಸಿದ್ದಾರೆ.
ಇನ್ನು, ನಕಲಿ ಠರಾವು ಸೃಷ್ಟಿಸಿದ ಆರೋಪದ ಮೇಲೆ ಗದಗ ಬೆಟಗೇರಿ ನಗರಸಭೆಯ ಮೂವರು ಬಿಜೆಪಿ ಸದಸ್ಯರ ಅನರ್ಹತೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಬೆಳಗಾವಿ ಪ್ರಾದೇಶಿಕ ಆಯುಕ್ತರು ಸರಿಯಾಗಿ ತನಿಖೆ ನಡೆಸದೇ ಬಿಜೆಪಿ ಸದಸ್ಯರ ಸದಸ್ಯತ್ವ ಅನರ್ಹಗೊಳಿಸಿದ್ದು, ಸದಸ್ಯತ್ವ ಮರಳಿಸಬೇಕು ಎಂದು ಬಿಜೆಪಿಗರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಧಾರವಾಡ ಹೈಕೋರ್ಟ್ ಮಾರ್ಚ್ 24ರಂದು ಕೈಗೆತ್ತಿಕೊಳ್ಳಲಿದೆ.
‘ಸುಪ್ರೀಂ ಕೋರ್ಟ್ ನೀಡಿದ ಆದೇಶಕ್ಕೆ ಮಧ್ಯಂತರ ಅರ್ಜಿ ಹಾಕಲು ನಾಲ್ಕು ವಾರ ಕಾಲಾವಕಾಶ ಕೊಟ್ಟಿದೆ. ಪ್ರತಿವಾದಿಗಳು ಆಕ್ಷೇಪಣೆ ಸಲ್ಲಿಸುವ ವಿಷಯವನ್ನು ನ್ಯಾಯಾಲಯದ ಗಮನಕ್ಕೆ ತಂದು, ಏಪ್ರಿಲ್ 9ರ ವರೆಗೆ ಕಾಲಾವಕಾಶ ಕೇಳಿದರು. ಆದರೆ, ಹೈಕೋರ್ಟ್ ಅದಕ್ಕೆ ಒಪ್ಪದೇ ಮಾರ್ಚ್ 24ಕ್ಕೆ ವಿಚಾರಣೆ ನಿಗದಿ ಮಾಡಿದೆ’ ಎಂದು ಬಿಜೆಪಿ ಸದಸ್ಯರು ತಿಳಿಸಿದ್ದಾರೆ.
ಬಿಜೆಪಿ ಸದಸ್ಯರ ಸದಸ್ಯತ್ವ ಅನರ್ಹತೆಗೆ ಸಂಬಂಧಿಸಿದ ಅರ್ಜಿ ವಿಚಾರಣೆ ಮಾರ್ಚ್ 24ರಂದು ನಡೆಯಲಿದೆ. ಸುಪ್ರೀಂ ಕೋರ್ಟ್‌ನಲ್ಲಿ ಒಂದು ಜಯ ಸಿಕ್ಕಿರುವುದರಿಂದ ಮತ ಹಕ್ಕು ಪಡೆಯುವ ಹೋರಾಟದಲ್ಲೂ ಗೆಲುವು ಸಿಗುವ ವಿಶ್ವಾಸ ಇದೆ–ಚಂದ್ರು ತಡಸದ, ನಗರಸಭೆ ಬಿಜೆಪಿ ಸದಸ್ಯ
ಸುಪ್ರೀಂ ಕೋರ್ಟ್ ಆದೇಶದ ಹಿನ್ನಲೆಯಲ್ಲಿ ಮಾರ್ಚ್ 3ಕ್ಕೆ ನಿಗದಿಯಾಗಿದ್ದ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಚುನಾವಣೆ ಮುಂದೂಡಲಾಗಿದೆ. ನ್ಯಾಯಾಲಯದ ಮುಂದಿನ ಆದೇಶದಂತೆ ಚುನಾವಣೆ ನಡೆಯಲಿದೆ. ನ್ಯಾಯಾಂಗ ನಿಂದನೆ ಪ್ರಕರಣ ಮುಗಿದಿದೆ–ಗಂಗಪ್ಪ ಎಂ. ಉಪವಿಭಾಗಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.