ADVERTISEMENT

International Tiger Day | ಹುಲಿ ಸಂರಕ್ಷಣೆ: ಅತಿಕ್ರಮಣ, ಹಸ್ತಕ್ಷೇಪವೇ ಸವಾಲು

ಕೆ.ಎಂ.ಸತೀಶ್ ಬೆಳ್ಳಕ್ಕಿ
Published 29 ಜುಲೈ 2025, 2:44 IST
Last Updated 29 ಜುಲೈ 2025, 2:44 IST
ನಾಗರಹೊಳೆಯಲ್ಲಿ ಇತ್ತೀಚೆಗೆ ಅರಣ್ಯಾಧಿಕಾರಿಗಳ ಕ್ಯಾಮೆರಾಕ್ಕೆ ಸೆರೆಸಿಕ್ಕ ಹುಲಿ ಹಾಗೂ ಅದರ ಮರಿ
ನಾಗರಹೊಳೆಯಲ್ಲಿ ಇತ್ತೀಚೆಗೆ ಅರಣ್ಯಾಧಿಕಾರಿಗಳ ಕ್ಯಾಮೆರಾಕ್ಕೆ ಸೆರೆಸಿಕ್ಕ ಹುಲಿ ಹಾಗೂ ಅದರ ಮರಿ   

ಗದಗ: ದೇಶದಲ್ಲಿನ ಒಟ್ಟು ಹುಲಿಗಳ ಪೈಕಿ 563 ಹುಲಿಗಳು ರಾಜ್ಯದಲ್ಲಿವೆ. ಅವುಗಳ ಸಂರಕ್ಷಣೆಯಲ್ಲಿ ರಾಜ್ಯವು ಎರಡನೇ ಸ್ಥಾನದಲ್ಲಿದೆ. ಆದರೆ, ಹುಲಿ ಮತ್ತು ಮಾನವ ನಡುವೆ ಸಂಘರ್ಷ ಹೆಚ್ಚಾಗುತ್ತಿದೆ.

‘ಅರಣ್ಯ ಮತ್ತು ಅರಣ್ಯೇತರ ಜಮೀನಿನ ನಡುವೆ ಇರುವ ‘ಬಫರ್‌’ ಪ್ರದೇಶವನ್ನು ಸಮರ್ಪಕವಾಗಿ ನಿರ್ವಹಿಸಿದರೆ, ಸಂಘರ್ಷ ತಡೆಗಟ್ಟಬಹುದು. ಅರಣ್ಯ ಪ್ರದೇಶದಲ್ಲಿ ಕಟ್ಟುನಿಟ್ಟಾದ ಗಸ್ತು, ಕಳ್ಳಬೇಟೆ ತಡೆಯಿಂದಗಿ ಹುಲಿಗಳ ಸಂಖ್ಯೆ ವೃದ್ಧಿಸಿದೆ. ಆದರೆ, ಅರಣ್ಯ ಪ್ರದೇಶ ಇದ್ದಷ್ಟೇ ಇದೆ. ಇಂತಹ ಸಂದರ್ಭದಲ್ಲಿ ಹುಲಿಗಳ ಸಂಖ್ಯೆ ಜಾಸ್ತಿಯಾದರೆ ಸಂಘರ್ಷ ಶುರುವಾಗುತ್ತದೆ. ಹುಲಿಗಳು ಹೊರ ಬಂದು ಜನ, ಜಾನುವಾರುಗಳ ಮೇಲೆ ದಾಳಿ ನಡೆಸುತ್ತವೆ’ ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನದ ಕಾರ್ಯನಿರ್ವಹಣಾಧಿಕಾರಿ ಎ.ವಿ.ಸೂರ್ಯಸೇನ್ ತಿಳಿಸಿದರು.

‘ಹುಲಿ ಒಂಟಿಯಾಗಿ ಇರಲು ಬಯಸುತ್ತದೆ. ಹೆಣ್ಣುಹುಲಿ ಮರಿ ಹಾಕಿದ ಬಳಿಕ ಗಂಡು ಮರಿಗಳು ದೊಡ್ಡದಾದಂತೆ ತನ್ನದೇ ಜಾಗ ಹುಡುಕಿಕೊಳ್ಳುತ್ತವೆ. ಗಡಿ ಗುರುತಿಸಿಕೊಂಡ ನಂತರ ಆ ಪ್ರದೇಶದೊಳಕ್ಕೆ ಮತ್ತೊಂದು ಹುಲಿ ಪ್ರವೇಶಕ್ಕೆ ಅವಕಾಶ ಕೊಡುವುದಿಲ್ಲ. ಹೀಗಾಗಿ ಅರಣ್ಯ ಜಮೀನಿಗೆ ಹೊಂದಿಕೊಂಡಿರುವ ಕೃಷಿ ಭೂಮಿಯನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನು ಯೋಚಿಸಬೇಕಿದೆ’ ಎಂದರು.

ADVERTISEMENT

‘ಅರಣ್ಯ ಪ್ರದೇಶದ ಪಕ್ಕದಲ್ಲಿ ಒಬ್ಬ ರೈತನ ಬಳಿ ಒಂದೆರೆಡು ಎಕರೆ ಜಮೀನು ಇದ್ದರೆ, ಅಲ್ಲಿ ಉಳುಮೆ ಮಾಡದೆ ಮರಗಿಡಗಳನ್ನು ಬೆಳೆಸಲು ಪ್ರೋತ್ಸಾಹಿಸಬೇಕು. ರೈತರು ಆ ಜಮೀನನ್ನು ಅರಣ್ಯದ ರೀತಿ ಇಟ್ಟುಕೊಂಡರೆ ಸರ್ಕಾರದಿಂದ ವರ್ಷಕ್ಕೆ ಇಂತಿಷ್ಟು ನೆರವು ಕೊಡುವುದರ ಬಗ್ಗೆ ಯೋಚಿಸಬೇಕಾಗುತ್ತದೆ. ಈ ರೀತಿಯ ಕೆಲ ಪ್ರೋತ್ಸಾಹದಾಯಕ ಯೋಜನೆಗಳನ್ನು ಸರ್ಕಾರದ ಮಟ್ಟದಲ್ಲಿ ರೂಪಿಸಿದರೆ ಹುಲಿಗಳ ಸಂಖ್ಯೆ ಇನ್ನೂ ಹೆಚ್ಚಾದರೂ ಸಂಘರ್ಷ ತಪ್ಪಿಸಬಹುದು’ ಎಂದು ಅವರು ತಿಳಿಸಿದರು.

ಇರುವಂತೆಯೇ ರಕ್ಷಣೆ ಮಾಡುವುದು ಮುಖ್ಯ 

‘ಅರಣ್ಯ ಅತಿಕ್ರಮಣ, ಹುಲಿ ಸಂರಕ್ಷಿತ ಪ್ರದೇಶದಲ್ಲಿರುವ ಹಾಡಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿನ ಮಾನವ ಹಸ್ತಕ್ಷೇಪ ಹುಲಿಗಳ ಸಂರಕ್ಷಣೆಯಲ್ಲಿ ಸದ್ಯದ ಮಟ್ಟಿಗೆ ಎದುರಾಗಿರುವ ಪ್ರಮುಖ ಸವಾಲುಗಳು’ ಎನ್ನುತ್ತಾರೆ ವನ್ಯಜೀವಿ ವಿಭಾಗದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಶ್‌ ಚಂದ್ರ ರೇ.

‘ಹುಲಿಗಳು ತನ್ನ ವ್ಯವಸ್ಥೆಯಲ್ಲಿ ಹೇಗೆ ಇರುತ್ತವೆಯೋ; ಅವುಗಳನ್ನು ಹಾಗೆಯೇ ರಕ್ಷಣೆ ಮಾಡುವುದು ಮುಖ್ಯವಾಗಿದೆ’ ಎಂದರು. 

‘ನಾಗರಹೊಳೆ, ಬಂಡೀಪುರ, ಬಿಆರ್‌ಟಿ, ಕಾಳಿ ಮತ್ತು ಭದ್ರಾ ಹುಲಿ ಸಂರಕ್ಷಣಾ ಪ್ರದೇಶದೊಳಗೆ ಮನುಷ್ಯನ ಚಟುವಟಿಕೆ ನಿಯಂತ್ರಣವೇ ದೊಡ್ಡ ಸವಾಲಾಗಿದೆ. ಇತ್ತೀಚಿನ ದಿನಗಳಲ್ಲಿ ಕಾಡುಗಳಿಗೆ ಜಾನುವಾರುಗಳನ್ನು ಮೇಯಲು ಬಿಡುತ್ತಿರುವುದರಿಂದ ಸಂಘರ್ಷ ಹೆಚ್ಚುತ್ತಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಈಚೆಗೆ ನಡೆದ ದುರಂತಕ್ಕೂ ಇದೇ ಕಾರಣ’ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.