ADVERTISEMENT

ಲಕ್ಷ್ಮೇಶ್ವರ | ಟೊಮೆಟೊ ದರ ಕುಸಿತ: ರೈತ ಕಂಗಾಲು

ನಾಗರಾಜ ಹಣಗಿ
Published 20 ಜನವರಿ 2026, 6:04 IST
Last Updated 20 ಜನವರಿ 2026, 6:04 IST
<div class="paragraphs"><p>ಬೆಲೆ ಕುಸಿತ ಆಗಿರುವುದರಿಂದ ಲಕ್ಷ್ಮೇಶ್ವರದ ಟೊಮೆಟೊ ಬೆಳೆಗಾರ ಅಬ್ದುಲ್‍ಕರೀಂ ಸೂರಣಗಿ ಹಣ್ಣು ಹೊಲದಲ್ಲೇ ಬಿಟ್ಟಿದ್ದಾರೆ</p></div>

ಬೆಲೆ ಕುಸಿತ ಆಗಿರುವುದರಿಂದ ಲಕ್ಷ್ಮೇಶ್ವರದ ಟೊಮೆಟೊ ಬೆಳೆಗಾರ ಅಬ್ದುಲ್‍ಕರೀಂ ಸೂರಣಗಿ ಹಣ್ಣು ಹೊಲದಲ್ಲೇ ಬಿಟ್ಟಿದ್ದಾರೆ

   

ಲಕ್ಷ್ಮೇಶ್ವರ: ಮಣ್ಣಿನೊಂದಿಗೆ ಮಣ್ಣಾಗಿ ಹಗಲಿರುಳು ದುಡಿದರೂ ಸಹ ರೈತರಿಗೆ ಲಾಭ ಎಂಬುದು ಕನಸಿನ ಗಂಟು. ಎಷ್ಟೇ ಬೆವರು ಸುರಿಸಿ ದುಡಿದರೂ ಕೂಡ ಬೆಳೆದ ಬೆಳೆಗೆ ಉತ್ತಮ ದರ ಸಿಗುತ್ತಿಲ್ಲ ಎಂದು ಟೊಮೆಟೊ ಬೆಳೆಗಾರರು ಅಲವತ್ತುಕೊಂಡಿದ್ದಾರೆ.

ಸದ್ಯ ಟೊಮೆಟೊ ಬೆಲೆ ಪಾತಾಳಕ್ಕೆ ಕುಸಿದಿದ್ದು ರೈತರು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ADVERTISEMENT

ತಾಲ್ಲೂಕಿನ ರೈತರು ನೂರಾರು ಹೆಕ್ಟೇರ್‌ನಲ್ಲಿ ಟೊಮೆಟೊ ಬೆಳೆದಿದ್ದಾರೆ. ಬೇಡಿಕೆ ಕುಸಿದಿರುವ ಕಾರಣ ಬೆಲೆ ನೆಲ ಕಚ್ಚಿದೆ. ಲಕ್ಷ್ಮೇಶ್ವರದ ರೈತ ಅಬ್ದುಲ್‍ಕರಿಂ ಗೌಸುಸಾಬ್ ಸೂರಣಗಿ ಎರಡೂವರೆ ಎಕರೆಯಲ್ಲಿ ಯೋಗಿ-35 ತಳಿಯ ಟೊಮೆಟೊ
ಬೆಳೆದಿದ್ದಾರೆ. ಹಾವೇರಿ ಜಿಲ್ಲೆ ಹಂಸಭಾವಿ ಹತ್ತಿರದ ಫಾರ್ಮ್‍ನಿಂದ ಒಂದು ರೂಪಾಯಿ ಹತ್ತು ಪೈಸೆಗೆ ಒಂದರಂತೆ ಸಸಿ ಖರೀದಿಸಿ ನಾಟಿ ಮಾಡಿದ್ದರು.
ಎಲ್ಲ ಸೇರಿ ಈವರೆಗೆ ₹2.50 ಲಕ್ಷ
ಖರ್ಚು ಮಾಡಿದ್ದಾರೆ. ಉತ್ತಮ ಆರೈಕೆ ಹಾಗೂ ವಾತಾವರಣದ ಅನುಕೂಲದಿಂದಾಗಿ ಸಾಕಷ್ಟು ಇಳುವರಿ ಬಂದಿದೆ. ಆದರೆ, ಏಕಾಏಕಿ ಬೆಲೆ ಕುಸಿದಿದೆ.

ಹಣ್ಣನ್ನು ಕೊಯ್ಲು ಮಾಡಿ ಮಾರಾಟಕ್ಕೆ ತಂದರೂ ಅದರ ಸಾಗಾಟ ವೆಚ್ಚಕ್ಕೂ ಸಮನಾಗುತ್ತಿಲ್ಲ. ಈ ಕಾರಣಕ್ಕಾಗಿ ರೈತ ಸೂರಣಗಿ ಅವರು ಹಣ್ಣನ್ನು ಕೊಯ್ಲು ಮಾಡದೆ ಹೊಲದಲ್ಲಿಯೇ ಬಿಟ್ಟಿದ್ದು ಅದು ಅಲ್ಲಿಯೇ ಹಣ್ಣು ಕೊಳೆಯುತ್ತಿದೆ.

ಸದ್ಯ ಠೋಕ ಮಾರುಕಟ್ಟೆಯಲ್ಲಿ ಒಂದು ಬಾಕ್ಸ್ ಟೊಮೆಟೊ ಕೇವಲ ₹50ಕ್ಕೆ ಮಾರಾಟ ಆಗುತ್ತಿದೆ. ಬಾಕ್ಸ್‌ಗೆ ₹500 ಬೆಲೆ ಸಿಕ್ಕರೆ ಮಾತ್ರ ಬೆಳೆಗಾರರಿಗೆ ಲಾಭ ಆಗುತ್ತದೆ. ಆದರೆ ಇದೀಗ ಬೆಲೆ ಕಡಿಮೆ ಆಗಿದ್ದು ಬೆಳೆಗಾರರು ನಷ್ಟ ಅನುಭವಿಸುವಂತಾಗಿದೆ ಎಂದು ರೈತರು ಕಣ್ಣೀರು ಹಾಕಿದ್ದಾರೆ.

ಒಂದು ಎಕರೆಗೆ ಐದಾರು ನೂರು ಬಾಕ್ಸ್ ಇಳುವರಿ ಬಂದರೂ ಬಾಕ್ಸ್‌ಗೆ ₹500 ಸಿಕ್ಕಿದ್ದರೆ ಎರಡು ಎಕರೆಗೆ ಅಂದಾಜು ₹5 ಲಕ್ಷ ಆದಾಯ ಬರುತ್ತಿತ್ತು. ಆದರೆ ಈಗ ಪೇಟೆಗೆ ತೆಗೆದುಕೊಂಡ ಹೋದ ಖರ್ಚು ಸಹ ಬರುತ್ತಿಲ್ಲ. ಹೀಗಾಗಿ ಟೊಮೆಟೊವನ್ನು ಹೊಲದಲ್ಲಿಯೇ ಬಿಟ್ಟಿದ್ದೇನೆ
ಅಬ್ದುಲ್‍ಕರೀಂ, ಟೊಮೆಟೊ ಬೆಳೆಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.