
ನರೇಗಲ್: ಪಟ್ಟಣದಿಂದ ಜಕ್ಕಲಿ ಗ್ರಾಮದ ಕಡೆಗೆ ಹೋಗುವ ಕಿರಿದಾದ ರಸ್ತೆಯಲ್ಲಿ ಎಪಿಎಂಸಿ ಸಮೀಪದಲ್ಲಿ ಭಾರೀ ಉದ್ದದ ವಾಹನವೊಂದು ಶನಿವಾರ ಕೆಟ್ಟು ನಿಂತ ಕಾರಣ ದಿನಪೂರ್ತಿ ವಾಹನ ಸಂಚಾರಕ್ಕೆ ತೊಂದರೆಯಾಯಿತು.
ಕೆಎಸ್‌ಆರ್‌ಟಿಸಿ ಬಸ್, ಶಾಲಾ ವಾಹನ, ಲಾರಿ, ಟಿಪ್ಪರ್, ಹೊಲಕ್ಕೆ ಹೋಗುವ ಟ್ರಾಕ್ಟರ್, ಇತರೇ ವಾಹನಗಳ ಸಂಚಾರಕ್ಕೆ ಚಾಲಕರು ಹರಸಾಹಸ ಪಟ್ಟರು.
ಗ್ರಾಮೀಣ ಭಾಗದ ಇಕ್ಕಟ್ಟಿನ ರಸ್ತೆಯಲ್ಲಿ ಬಂದ ವಿಂಡ್ ಕಂಪನಿಯ ಉದ್ದದ ವಾಹನ ಶನಿವಾರ ಬೆಳಿಗ್ಗೆಯಿಂದಲೇ ಕೆಟ್ಟು ನಿಂತಿದ್ದು, ಸಂಜೆಯಾದರು ಅದನ್ನು ಸರಿಪಡಿಸಿ ಜನರಿಗೆ ಅನಕೂಲ ಮಾಡಿ ಕೊಡುವತ್ತ ಕಂಪನಿಯವರು ನಿರ್ಲಕ್ಷ್ಯ ತೋರಿದರು ಎಂದು ಜನರು ಆಕ್ರೋಶ ವ್ಯಕ್ತಪಡಿಸಿದರು.
‘ರಸ್ತೆಯಲ್ಲಿ ಕೆಟ್ಟು ನಿಂತ ಉದ್ದದ ವಾಹನದ ಕುರಿತು ಮಾಹಿತಿ ನೀಡಲು ವಿಂಡ ಕಂಪನಿಯವರು ಅಥವಾ ವಾಹನಕ್ಕೆ ಸಂಬಂಧಪಟ್ಟವರು ಯಾರೂ ಸ್ಥಳದಲ್ಲಿ ಇರಲಿಲ್ಲ. ಸೂಚನಾ ಫಲಕಗಳನ್ನು ಅಳವಡಿಸಿರಲಿಲ್ಲ. ಎರಡೂ ಬದಿಯಿಂದ ಬರುವ ವಾಹನ ಸವಾರರಿಗೆ ಎದುರಿನ ವಾಹನದ ಬಗ್ಗೆ ತಿಳಿಯದಂತಾಗಿ ತೊಂದರೆ ಅನುಭವಿಸಿದ್ದಾರೆ. ವಾಹನ ತಿರುವಿನಲ್ಲಿ ನಿಂತಿದ್ದು, ವಾಹನದ ಮುಂಭಾಗ ಅರ್ಧಕ್ಕೂ ಹೆಚ್ಚು ರಸ್ತೆಯನ್ನು ಆವರಿಸಿದ್ದರಿಂದ ಸವಾರರಿಗೆ ತೊಂದರೆಯಾಯಿತು’ ಎಂದು ಲಾರಿ ಚಾಲಕರು ಹೇಳಿದರು.
‘ರಾತ್ರಿ, ಹಗಲು ಎನ್ನದೆ ಅತೀ ಉದ್ದದ, ಭಾರದ ವಾಹನಗಳು ಗ್ರಾಮೀಣ ರಸ್ತೆಗಳ ಮೂಲಕ ಸಂಚಾರ ಮಾಡುತ್ತಿವೆ. ರಾತ್ರಿಯಾದರೆ ಇವುಗಳ ಹಾವಳಿ ಮಿತಿ ಮೀರುತ್ತದೆ. ಬೈಕ್ ಸವಾರರು, ಸಣ್ಣಪುಟ್ಟ ವಾಹನಗಳ ಚಾಲಕರು ಜೀವ ಕೈಯಲ್ಲಿ ಹಿಡಿದುಕೊಂಡು ಸಂಚಾರ ಮಾಡುವ ಭಯದ ವಾತಾವರಣ ನಿರ್ಮಾಣವಾಗಿದೆ. ಅನೇಕ ಅಪಘಾತಗಳು ನಡೆದಿವೆ. ಇದಕ್ಕೆ ಕಡಿವಾಣ ಹಾಕಲು ಸಂಬಂಧಪಟ್ಟ ಇಲಾಖೆಯವರು ಮುಂದಾಗುತ್ತಿಲ್ಲ. ಜಾಣ ಕುರುಡತನ ತೋರುತ್ತಿದ್ದಾರೆ’ ಎಂದು ರೈತರು, ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.