ADVERTISEMENT

ನರೇಗಲ್ | ಮಳೆ ಬಂದರೆ ರಸ್ತೆ ಜಲಾವೃತ: ಸೇತುವೆ ನಿರ್ಮಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2023, 5:48 IST
Last Updated 20 ನವೆಂಬರ್ 2023, 5:48 IST
ನರೇಗಲ್ ಸಮೀಪದ ಮಾರನಬಸರಿ-ಕಳಕಾಪುರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಹಳ್ಳ ಹಾಯ್ದು ಹೋಗಿದೆ
ನರೇಗಲ್ ಸಮೀಪದ ಮಾರನಬಸರಿ-ಕಳಕಾಪುರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಹಳ್ಳ ಹಾಯ್ದು ಹೋಗಿದೆ   

ನರೇಗಲ್: ಹೋಬಳಿಯ ಕಳಕಾಪುರ-ಮಾರನಬಸರಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಹಳ್ಳಕ್ಕೆ ಸೇತುವೆ ನಿರ್ಮಿಸುವಂತೆ ಎರಡೂ ಗ್ರಾಮಸ್ಥರಿಂದ ಆಗ್ರಹ ಕೇಳಿಬಂದಿದೆ.

ನರೇಗಲ್, ಜಕ್ಕಲಿ, ಮಾರನಬಸರಿ ಗ್ರಾಮಗಳ ಜನರು ಇದೇ ರಸ್ತೆ ಮೂಲಕ ಕಳಕಾಪುರ, ಸೂಡಿ ಮೊದಲಾದ ಗ್ರಾಮಗಳಿಗೆ ಪ್ರಯಾಣಿಸುತ್ತಾರೆ. ಸೂಡಿ, ಇಟಗಿ ಗ್ರಾಮಗಳಿಗೆ ಅತ್ಯಂತ ಸಮೀಪದ ರಸ್ತೆ ಇದೇ ಆಗಿರುವುದರಿಂದ ಹಳ್ಳ ದಾಟಿಕೊಂಡೇ ಹೋಗಬೇಕಿದೆ. ಜೋರಾಗಿ ಮಳೆ ಬಂದು, ಹಳ್ಳ ತುಂಬಿ ಹರಿದರೆ ಗ್ರಾಮಗಳ ಸಂಪರ್ಕ ಕಡಿತವಾಗುತ್ತದೆ ಎಂದು ಗ್ರಾಮಸ್ಥರಾದ ಪರಸಪ್ಪ ತಳವಾರ, ಹುಚ್ಚಪ್ಪ ಗಡೇದ ತಿಳಿಸಿದರು.

ಈ ರಸ್ತೆ ಸಂಪರ್ಕ ಕಡಿತವಾದರೆ ಮಾರನಬಸರಿ, ಕೊಪ್ಪದ ಕ್ರಾಸ್‌, ನಿಡಗುಂದಿ, ಕಳಕಾಪುರ ಮಾರ್ಗದ ಮೂಲಕ 20 ಕಿ.ಮೀ. ಸುತ್ತಿ ಸಾಗಬೇಕು. ಕಳಕಾಪುರ, ಮಾರನಬಸರಿ, ಜಕ್ಕಲಿ ಗ್ರಾಮಗಳ ರೈತರ ಜಮೀನುಗಳು ಇದೇ ಮಾರ್ಗದಲ್ಲಿವೆ. ಕೃಷಿ ಚಟುವಟಿಕೆಗಳಿಗಾಗಿ ರೈತರು, ಕೃಷಿ ಕಾರ್ಮಿಕರು ನಿತ್ಯ ಓಡಾಡುವುದು ಸಹಜ. ಜನರ ಅನುಕೂಲಕ್ಕಾಗಿ ಹಳ್ಳಕ್ಕೆ ಸೇತುವೆ ನಿರ್ಮಿಸುವ ಜರೂರಾಗಿ ನಡೆಯಬೇಕು ಎಂದು ಶರಣಪ್ಪ ಕಟ್ಟಿಮನಿ, ಶಂಕ್ರಪ್ಪ ಮೆಣಸಗಿ ಆಗ್ರಹಿಸಿದರು.

ADVERTISEMENT

ಮಾರನಬಸರಿ-ಕಳಕಾಪುರ ರಸ್ತೆಯಲ್ಲಿ ಅಲ್ಲಲ್ಲಿ ಡಾಂಬರು ಕಿತ್ತುಹೋಗಿದೆ. ಕೆಲವೆಡೆ ಆಳವಾದ ತೆಗ್ಗುಗಳು ಉಂಟಾಗಿದೆ. ನಾಲ್ಕೈದು ಕಡೆಗಳಿಂದ ಹರಿದುಬರುವ ಕಿರು ಹಳ್ಳಗಳಿಗೆ ಸಿಮೆಂಟ್‌ನ ಪರಸಿ ನಿರ್ಮಾಣ ಮಾಡಲಾಗಿದೆ. ಅವು ಸಹ ಬಿರುಕು ಬಿಟ್ಟಿದ್ದು, ಕೆಲವು ಕಡೆಗಳಲ್ಲಿ ಕಿತ್ತು ಹೋಗಿವೆ.

‘ಸಿಮೆಂಟ್‌ ಹಾಗೂ ಡಾಂಬರು ರಸ್ತೆ ಜೋಡಣೆ ಮಾಡುವಾಗ ಎತ್ತರದ ಪ್ರಮಾಣದಲ್ಲಿ ವ್ಯತ್ಯಾಸವಾಗಿರುವ ಕಾರಣ ಬೈಕ್‌ ಸವಾರರಿಗೆ ತೊಂದರೆಯಾಗಿದೆ. ಈಗಾಗಲೇ ಅನೇಕ ಅಪಘಾತಗಳು ಸಂಭವಿಸಿದ್ದು, ಸವಾರರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆಗಳೂ ನಡೆದಿವೆ. ರಸ್ತೆ ದುರಸ್ತಿ, ಕಿರು ಸೇತುವೆ, ವೈಜ್ಞಾನಿಕವಾಗಿ ರಸ್ತೆ ಜೋಡಣೆ ಮಾಡಬೇಕು. ಇಲ್ಲವಾದರೆ ಹೋರಾಟಕ್ಕೆ ಮುಂದಾಗುತ್ತೇವೆ’ ಎಂದು ಜೈಭೀಮ ಸೇನಾ ಉಪಾಧ್ಯಕ್ಷ ಮೈಲಾರಪ್ಪ ವಿ. ಚಳ್ಳಮರದ ಎಚ್ಚರಿಸಿದರು.

ನರೇಗಲ್ ಸಮೀಪದ ಮಾರನಬಸರಿ-ಕಳಕಾಪುರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯು ಹಳ್ಳದ ಮೂಲಕ ಹಾಯ್ದು ಹೋಗಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.