ADVERTISEMENT

ವಿಬಿ-ಜಿ ರಾಮ್‌ ಜಿ ಯೋಜನೆ: ಕಾಂಗ್ರೆಸ್‌ ಆರೋಪ ಸುಳ್ಳು– ಶಾಸಕ ಸಿ.ಸಿ. ಪಾಟೀಲ

​ಪ್ರಜಾವಾಣಿ ವಾರ್ತೆ
Published 13 ಜನವರಿ 2026, 5:05 IST
Last Updated 13 ಜನವರಿ 2026, 5:05 IST
ಸಿ.ಸಿ. ಪಾಟೀಲ
ಸಿ.ಸಿ. ಪಾಟೀಲ   

ಗದಗ: ‘ಗ್ರಾಮೀಣ ಜನರ ಜೀವನೋಪಾಯಕ್ಕೆ ಭದ್ರತೆ ನೀಡಲು ಮತ್ತು ಸುಸ್ಥಿರ ಆಸ್ತಿ ಸೃಷ್ಟಿಸಲು ಕೇಂದ್ರ ಸರ್ಕಾರವು ಹಳೆಯ ನರೇಗಾ ಯೋಜನೆಯಲ್ಲಿನ ಲೋಪದೋಷ ಸರಿಪಡಿಸಿ, ವಿಬಿ-ಜಿ ರಾಮ್‌ಜಿ ಯೋಜನೆ ಜಾರಿಗೆ ತಂದಿದೆ. ಕೇಂದ್ರ ಸರ್ಕಾರದ ಈ ಯೋಜನೆಯು ವಿಕಸಿತ ಭಾರತದೆಡೆಗೆ ದೇಶದ ದಿಟ್ಟ ಹೆಜ್ಜೆಯಾಗಿದೆ’ ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.

‘ಈ ಹಿಂದೆ ನರೇಗಾ ಯೋಜನೆಯ ಹಣ ವಿಳಂಬವಾಗುತ್ತಿತ್ತು. ಕಾಯ್ದೆ ತಿದ್ದುಪಡಿ ಆದ ನಂತರ ವಿಳಂಬವಾಗುವುದಿಲ್ಲ’ ಎಂದು ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ರಾಜ್ಯದ ಕಾಂಗ್ರೆಸ್ ಸರ್ಕಾರವು ತನ್ನ ಖಜಾನೆ ಖಾಲಿಯಾದ ಹಿನ್ನೆಲೆಯಲ್ಲಿ ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ. ಕೇಂದ್ರ ಸರ್ಕಾರವು ಅನುದಾನದ ಹಂಚಿಕೆಯಲ್ಲಿ ಯಾವುದೇ ತಾರತಮ್ಯ ಮಾಡಿಲ್ಲ. ಈ ಹೊಸ ಕಾಯ್ದೆಯಿಂದ ರಾಜ್ಯಗಳಿಗೆ ಹೆಚ್ಚುವರಿ ಲಾಭ ಸಿಗಲಿದೆ. ಸಿದ್ಧರಾಮಯ್ಯ ತಮ್ಮ ಸರ್ಕಾರದ ಆಡಳಿತ ವೈಫಲ್ಯ ಮುಚ್ಚಿಕೊಳ್ಳಲು ಈ ಕಾಯ್ದೆ ತಿದ್ದುಪಡಿ ಮುಂದಿಟ್ಟುಕೊಂಡು ಹೋರಾಟ ಮಾಡುತ್ತೇವೆ ಎನ್ನುತ್ತಿದ್ದಾರೆ. ಇದು ಜನರ ಗಮನ ಬೇರೆಡೆ ಸೆಳೆಯುವ ತಂತ್ರವಾಗಿದೆ’ ಎಂದು ಹೇಳಿದರು.

ADVERTISEMENT

‘ಬಿಜೆಪಿ ವತಿಯಿಂದ ಜಿಲ್ಲಾ ಸಮ್ಮೇಳನ, ತಾಲ್ಲೂಕು, ಗ್ರಾಮ ಮಟ್ಟದ ಸಭೆ ನಡೆಸಿ ಯೋಜನೆ ಕುರಿತು ಜನರಿಗೆ ಹಾಗೂ ಕೃಷಿಕರಿಗೆ ಮನವರಿಕೆ ಮಾಡಿಕೊಡಲಾಗುವುದು’ ಎಂದರು.

ವಿಧಾನ ಪರಿಷತ್‌ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ‘ನರೇಗಾ ಯೋಜನೆಯ ಲೋಪದೋಷ ಗುರುತಿಸಿ ವಿಕಸಿತ ಭಾರತ ಕಾಯ್ದೆ ಜಾರಿಗೆ ತರಲಾಗಿದೆ. ನರೇಗಾದಲ್ಲಿ ಆಗುತ್ತಿದ್ದ ಭ್ರಷ್ಟಾಚಾರ ತಡೆಯಲು ಅನುಕೂಲವಾಗಲಿದೆ’ ಎಂದು ತಿಳಿಸಿದರು.

‘ಪಂಚಾಯತ್ ರಾಜ್ ವ್ಯವಸ್ಥೆಯ ಅಧಿಕಾರ ಮೊಟಕುಗೊಳಿಸಲಾಗುತ್ತದೆ ಎಂದು ಕಾಂಗ್ರೆಸ್ ಆರೋಪ ಮಾಡುತ್ತಿದೆ. ಇದು ಸುಳ್ಳು. ಕಾಂಗ್ರೆಸ್ ಪಕ್ಷವು ಯೋಜನೆಯ ಹೆಸರು ಬದಲಾಯಿಸಿದ್ದಕ್ಕೆ ವಿರೋಧಿಸುತ್ತಿದೆ. ಈ ಹಿಂದೆ ಈ ಯೋಜನೆಯ ಹೆಸರು ಎನ್‌ಆರ್‌ಇಜಿ ಎಂದು ಹೆಸರಿಸಲಾಗಿತ್ತು. ತದನಂತರ ಕಾಂಗ್ರೆಸ್ ಪಕ್ಷವು ಜವಹರಲಾಲ್ ರೋಜ್‌ಗಾರ ಯೋಜನೆ ಎಂದು ಬದಲಿಸಿತು. ನಂತರ ಮಹತ್ಮಾಗಾಂಧಿ ನರೇಗಾ ಯೋಜನೆ ಎಂದು ಬದಲಾಯಿಸಿತು. ಹೀಗೆ ಕಾಂಗ್ರೆಸ್ ಪಕ್ಷ ಹೆಸರು ಬದಲಾಯಿಸುತ್ತ ಬಂದಿದೆ’ ಎಂದರು. 

ಬಿಜೆಪಿ ಗದಗ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಕುರುಡಗಿ, ಮಾಜಿ ಅಧ್ಯಕ್ಷ ಎಂ.ಎಸ್. ಕರಿಗೌಡ್ರ, ರವಿ ದಂಡಿನ, ನಗರಸಭೆ ಮಾಜಿ ಅಧ್ಯಕ್ಷೆ ಉಷಾ ದಾಸರ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ, ಶಿವರಾಜಗೌಡ ಹಿರೇಮನಿಪಾಟೀಲ, ಅನಿಲ ಅಬ್ಬಿಗೇರಿ, ಮಹೇಶ ದಾಸರ, ಸ್ವಾತಿ ಅಕ್ಕಿ, ಶ್ರೀಪತಿ ಉಡುಪಿ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.