ನರೇಗಲ್: ಸರಳ ವ್ಯಕ್ತಿತ್ವದ ಹಿರಿಯ ರಾಜಕಾರಣಿ, ರೋಣ ಮತಕೇತ್ರದ ಶಾಸಕ ಜಿ.ಎಸ್.ಪಾಟೀಲ ಅವರಿಗೆ ಅಬ್ಬಿಗೇರಿಯಲ್ಲಿ ನಡೆದಿರುವ ದಸರಾ ಧರ್ಮ ಸಮ್ಮೇಳನದಲ್ಲಿ ಮಂಗಳವಾರ ‘ವೀರಶೈವ ಸಿರಿ ಪ್ರಶಸ್ತಿ’ ಪ್ರದಾನ ಮಾಡಲಾಗುತ್ತದೆ.
1983ರಲ್ಲಿ ರಾಜಕೀಯ ಪ್ರವೇಶ ಮಾಡಿದ ಇವರು ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಶಾಲಾ ಕಾಲೇಜು, ಧಾರ್ಮಿಕ ಸ್ಥಳ, ಮೂಲಸೌಕರ್ಯಗಳು ಸೇರಿದಂತೆ ಅನೇಕ ಸುಧಾರಣೆಗಳನ್ನು ಮಾಡಿದ್ದಾರೆ. ನದಿ, ಕಾಲುವೆಯ ಜಲಮೂಲಗಳಿಲ್ಲದ ರೋಣ ಮತಕ್ಷೇತ್ರದಲ್ಲಿ ಅನೇಕ ಕೆರೆಗಳನ್ನು ನಿರ್ಮಾಣ ಮಾಡಿದ್ದಾರೆ.
ಮಾತೋಶ್ರೀ ಬಸಮ್ಮನವರ ನೆನಪಿಗಾಗಿ ಪ್ರತಿವರ್ಷ ಉಚಿತ ಆರೋಗ್ಯ ಶಿಬಿರ, 3 ಸಾವಿರಕ್ಕೂ ಹೆಚ್ಚು ಜನರಿಗೆ ಉಚಿತ ನೇತ್ರ ಶಸ್ತ್ರಚಿಕಿತ್ಸೆ, ಗ್ರಾಮೀಣ ಪ್ರದೇಶದ 5 ಸಾವಿರ ವಿದ್ಯಾರ್ಥಿಗಳಿಗೆ ಸೋಲಾರ್ ಲ್ಯಾಂಪ್, ಕೋವಿಡ್ ಸಂದರ್ಭದಲ್ಲಿ 100 ಹಾಸಿಗೆಗಳ ಘಟಕ ಸ್ಥಾಪಿಸಿ ಉಚಿತವಾಗಿ ಆರೋಗ್ಯ ಸೇವೆ ಒದಗಿಸಿದ್ದಾರೆ. ಯುವಕರಿಗಾಗಿ ನೌಕರಿ ಉತ್ಸವ, ಸ್ಪರ್ಧಾ ತರಬೇತಿ ಆಯೋಜಿಸಿದ್ದಾರೆ. ಇವರ ಈ ಎಲ್ಲ ಸೇವೆಗಳನ್ನು ಪರಿಗಣಿಸಿ, ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಹಾಲಕೆರೆಯ ಅನ್ನದಾನೇಶ್ವರ ಸಂಸ್ಥಾನ ಮಠದ ಭಕ್ತರಾದ ಇವರು ವೀರಶೈವ ಧರ್ಮದ ಸಂಘಟನೆಗೆ, ಕಾರ್ಯಕ್ರಮಗಳ ಆಯೋಜನೆಗೆ ಮುಂದಾಗಿದ್ದಾರೆ. ಧರ್ಮಜಾಗೃತಿ ಸಭೆಗಳನ್ನು ಸಂಘಟಿಸಿದ್ದಾರೆ. ಹಾಲಕೆರೆಯ ಮುಪ್ಪಿನ ಬಸವಲಿಂಗ ಶ್ರೀಗಳ ಪಟ್ಟಾಧಿಕಾರ, ಅಭಿನವ ಅನ್ನದಾನ ಶ್ರೀಗಳು, ಅಬ್ಬಿಗೇರಿಯ ಸೋಮಶೇಖರ ಶಿವಾಚಾರ್ಯರು ಲಿಂಗೈಕ್ಯರಾದಗಲೂ ಸಾಮಾನ್ಯರಂತೆ ಸೇವೆ ಮಾಡಿದ್ದಾರೆ. ಸದ್ಯ ಧರ್ಮ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ‘ವೀರಶೈವ ಸಿರಿ ಪ್ರಶಸ್ತಿ’ ನೀಡುತ್ತಿರುವುದು ಕ್ಷೇತ್ರದ ಜನರಿಗೆ ಖುಷಿ ನೀಡಿದೆ ಎಂದು ಹಿರಿಯ ಮುಖಂಡ ವಿ. ಬಿ. ಸೋಮನಕಟ್ಟಿಮಠ ಹೇಳಿದರು.
ದಸರಾ ಧರ್ಮ ಸಮ್ಮೇಳನದಲ್ಲಿ ಶ್ರೀಗಳು ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ
- ಜಿ.ಎಸ್.ಪಾಟೀಲ ರೋಣ ಶಾಸಕ
ಧಾರ್ಮಿಕ ಸಾಮಾಜಿಕ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಶ್ರಮಿಸುವ ಶಾಸಕರಿಗೆ ‘ವೀರಶೈವ ಸಿರಿ ಪ್ರಶಸ್ತಿ’ ನೀಡುತ್ತಿರುವುದು ಕ್ಷೇತ್ರದ ಜನರಿಗೆ ಖುಷಿ ನೀಡಿದೆ
- ವಿ.ಬಿ.ಸೋಮನಕಟ್ಟಿಮಠ ಹಿರಿಯ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.