ADVERTISEMENT

ವಿಯೆಟ್ನಾಂನಲ್ಲಿ ಶಿರೋಳ ಯೋಗಪಟುಗಳ ಕನ್ನಡಾಭಿಮಾನ: ಆಕರ್ಷಕ ಯೋಗ ನೃತ್ಯ!

ಬಸವರಾಜ ಹಲಕುರ್ಕಿ
Published 4 ಡಿಸೆಂಬರ್ 2025, 4:18 IST
Last Updated 4 ಡಿಸೆಂಬರ್ 2025, 4:18 IST
ನರಗುಂದ ತಾಲ್ಲೂಕಿನ ಶಿರೋಳದ ಯೋಗಪಟು ಬಸವರಾಜ ಕೊಣ್ಣೂರ ನೇತೃತ್ವದಲ್ಲಿ ಶಿರೋಳದ ಯುವಕರು ವಿಯೆಟ್ನಾಂ ದೇಶದಲ್ಲಿ ಕನ್ನಡದ ಹಾಡುಗಳಿಗೆ ಆಕರ್ಷಕ ಯೋಗ ನೃತ್ಯ ಪ್ರದರ್ಶನ ನೀಡಿದರು
ನರಗುಂದ ತಾಲ್ಲೂಕಿನ ಶಿರೋಳದ ಯೋಗಪಟು ಬಸವರಾಜ ಕೊಣ್ಣೂರ ನೇತೃತ್ವದಲ್ಲಿ ಶಿರೋಳದ ಯುವಕರು ವಿಯೆಟ್ನಾಂ ದೇಶದಲ್ಲಿ ಕನ್ನಡದ ಹಾಡುಗಳಿಗೆ ಆಕರ್ಷಕ ಯೋಗ ನೃತ್ಯ ಪ್ರದರ್ಶನ ನೀಡಿದರು   

ನರಗುಂದ: ಕನ್ನಡ, ಕರ್ನಾಟಕಕ್ಕೆ ಪ್ರಾಚೀನ ಕಾಲದಿಂದಲೂ ಐತಿಹ್ಯ ಇದೆ. ಗ್ರೀಕ್ ದೇಶದ ಕಾವ್ಯಗಳಲ್ಲೂ ಕನ್ನಡದ ಪ್ರಸ್ತಾಪವಿದೆ. ಅದಕ್ಕೆ ಪೂರಕವೆಂಬಂತೆ ತಾಲ್ಲೂಕಿನ ಶಿರೋಳದ ಯುವಕರು ವಿಯೆಟ್ನಾಂ ದೇಶದಲ್ಲಿ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡದ ಹಾಡುಗಳಿಗೆ ಯೋಗ ಪ್ರದರ್ಶಿಸುವ ಮೂಲಕ ವಿದೇಶದಲ್ಲೂ ಕನ್ನಡ ಕಂಪು ಹರಡಿದ್ದಾರೆ.

ಶಿರೋಳದ ಬಸವರಾಜ ತಿಪ್ಪಣ್ಣ ಕೊಣ್ಣೂರ 15 ವರ್ಷಗಳಿಂದ ವಿಯೆಟ್ನಾಂ ದೇಶದ ಹೋ ಚಿ ಮಿನ್ಹ್ ನಗರದಲ್ಲಿ ಕ್ಯಾಲಿಫೋರ್ನಿಯಾ ಫಿಟ್ನೆಸ್ ಮತ್ತು ಯೋಗ ಕೇಂದ್ರದಲ್ಲಿ ಯೋಗ ತರಬೇತಿ ವ್ಯವಸ್ಥಾಪಕ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿಯೆಟ್ನಾಂ ಕನ್ನಡ ಸಂಘ ನವೆಂಬರ್ ಕೊನೆ ವಾರದಲ್ಲಿ ನಡೆಸಿದ್ದ ಕರ್ನಾಟಕ ರಾಜ್ಯೋತ್ಸವದಲ್ಲಿ ಇವರು ಭಾರತದ ಕಾನ್ಸುಲೇಟ್ ಜನರಲ್ ಮಹೇಶಚಂದ್ರ ಗಿರಿ ಹಾಗೂ ವಿಯೆಟ್ನಾಂ ಇನ್ಚಾಂ ಅಧ್ಯಕ್ಷ ಜೆ.ಪಿ.ಶ್ರೀರಾಮ ಸಮ್ಮುಖದಲ್ಲಿ ಕನ್ನಡ ಹಾಡುಗಳಿಗೆ ಆಕರ್ಷಕ ಯೋಗ ಪ್ರದರ್ಶಿಸಿ, ಗಮನ ಸೆಳೆದರು.

ಈರಣ್ಣ ಕವಡಿಮಟ್ಟಿ, ಉಮೇಶ್ ಕಬ್ಬನೂರ್, ಸಂಗು ಸಣ್ಣ ತಮ್ಮಣ್ಣವರ್, ವಿನೋದ್ ಹೊಂಗಲ್, ಪ್ರವೀಣ್ ಗಡ್ಡಿ ಹಾಗೂ ವಿಯೆಟ್ನಾಂನ ನವನೀತ್ ತ್ರಿವೇದಿ, ಮಿನ್ ತ್ರಾಂಗ್ (ಮೀರಾ), ಚೂ ಸಾಮ ಅವರು ರಾಜ್ಯೋತ್ಸವದ ಅಂಗವಾಗಿ ಕನ್ನಡ ನಾಡು, ನುಡಿಗೆ ಸಂಬಂಧಿಸಿದ ಹಾಡುಗಳಿಗೆ ಯೋಗ ಪ್ರದರ್ಶನ ಮಾಡಿದ್ದು, ಅಲ್ಲಿ ಕಾಯಂ ನೆಲೆಸಿರುವ ಕನ್ನಡಿಗರಿಗೆ, ಹೋ ಚಿ ಮಿನ್ಹ್ ಸಿಟಿಯಲ್ಲಿನ ನಾಗರಿಕರಿಗೆ ರಸದೌತಣ ನೀಡಿತು. 

ADVERTISEMENT

ಶಿರೋಳದ 25 ಯೋಗ ಶಿಕ್ಷಕರು ವಿಯೆಟ್ನಾಂನಲ್ಲಿ: ಯೋಗದಲ್ಲಿ ಗಿನ್ನೆಸ್‌ ದಾಖಲೆ ಮಾಡಿರುವ ಬಸವರಾಜ ಕೊಣ್ಣೂರ ತಾವಷ್ಟೇ ಅಲ್ಲದೇ ತಮ್ಮ ಗ್ರಾಮದ 25 ಯೋಗಪಟುಗಳನ್ನು ಅಲ್ಲಿಗೆ ಕರೆದುಕೊಂಡು ಹೋಗಿ ಅವರನ್ನು ಅಲ್ಲಿ ಯೋಗ ಶಿಕ್ಷಕರನ್ನಾಗಿಸಿರುವುದು ಸ್ವದೇಶ ಪ್ರೇಮಕ್ಕೆ ಸಾಕ್ಷಿಯಾಗಿದೆ.

ನರಗುಂದ ತಾಲ್ಲೂಕಿನ ಶಿರೋಳದ ಯೋಗಪಟು ಬಸವರಾಜ ಕೊಣ್ಣೂರ ನೇತೃತ್ವದಲ್ಲಿ ಶಿರೋಳದ ಯುವಕರು ವಿಯೆಟ್ನಾಂ ದೇಶದಲ್ಲಿ ಕನ್ನಡದ ಹಾಡುಗಳಿಗೆ ಆಕರ್ಷಕ ಯೋಗ ನೃತ್ಯ ಪ್ರದರ್ಶನ ನೀಡಿದರು
ನರಗುಂದ ತಾಲ್ಲೂಕಿನ ಶಿರೋಳದ ಯೋಗಪಟು ಬಸವರಾಜ ಕೊಣ್ಣೂರ ನೇತೃತ್ವದಲ್ಲಿ ಯೋಗಪಟುಗಳು ಕನ್ನಡದ ಹಾಡುಗಳಿಗೆ ಆಕರ್ಷಕ ಯೋಗ ನೃತ್ಯ ಪ್ರದರ್ಶನ ನೀಡಿದರು

ಕನ್ನಡ ಸಂಸ್ಕೃತಿ ಪಸರಿಸುವ ಕಾರ್ಯ

‘ವಿಯೆಟ್ನಾಂ ದೇಶದಲ್ಲಿ ಕನ್ನಡ ಸಾಹಿತ್ಯ ಸಂಸ್ಕೃತಿ ಪಸರಿಸುವ ಕೆಲಸವನ್ನು ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ಇಲ್ಲಿನ ಕನ್ನಡ ಸಂಘ ಮಾಡುತ್ತಿದೆ. ಅದರಲ್ಲೂ ಕನ್ನಡದ ಹಾಡುಗಳಿಗೆ ಯೋಗ ಪ್ರದರ್ಶನ ನೀಡಿದ್ದು ಜನಮನ ಸೆಳೆದಿದೆ. ಇದರಿಂದ ವಿಯಟ್ನಾಂ ಪ್ರಜೆಗಳು ಕನ್ನಡಿಗರನ್ನು ಮತ್ತಷ್ಟು ಪ್ರೀತಿಯಿಂದ ಕಾಣುವ ವಾತಾವರಣ ನಿರ್ಮಾಣವಾಗಿದೆ. ಇದು ಶಿರೋಳದ ನಮ್ಮೆಲ್ಲರಿಗೂ ಸಂತಸ ತಂದಿದೆ’ ಎಂದು ವಿಯಟ್ನಾಂನಲ್ಲಿ ನೆಲೆಸಿರುವ ಯೋಗಪಟು ಬಸವರಾಜ ತಿಪ್ಪಣ್ಣ ಕೊಣ್ಣೂರ ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.