
ಗಜೇಂದ್ರಗಡ (ಗದಗ ಜಿಲ್ಲೆ): ಪಟ್ಟಣದ 23ನೇ ವಾರ್ಡಿನ ಉಣಚಗೇರಿ ಗ್ರಾಮ ಹೊರವಲಯದ ಕೋಳಿ ಫಾರಂನಿಂದ ಉಂಟಾದ ದುರ್ವಾಸನೆಗೆ ಬೇಸತ್ತ ಗ್ರಾಮಸ್ಥರು ಗುರುವಾರ ಫಾರಂನಲ್ಲಿರುವ ಕೋಳಿ ಮತ್ತು ಮೊಟ್ಟೆಗಳನ್ನು ಹೊತ್ತೊಯ್ದರು.
‘15 ವರ್ಷಗಳ ಹಿಂದೆ ಕೋಳಿ ಫಾರಂ ನಿರ್ಮಿಸಿದಾಗಿನಿಂದ ದುರ್ನಾತ ಹರಡುತ್ತಿದೆ. ಇದರಿಂದ ವಾತಾವರಣ ಕಲುಷಿತವಾಗಿದೆ. ಗ್ರಾಮಸ್ಥರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ನೊಣಗಳ ಕಾಟ ಹೆಚ್ಚಾಗಿರುವುದರಿಂದ ಗ್ರಾಮದ ಶಾಲೆಯಲ್ಲಿ ಮಕ್ಕಳು ಬಿಸಿಯೂಟ ಸೇವಿಸಲಾಗುತ್ತಿಲ್ಲ’ ಎಂದು ಗ್ರಾಮಸ್ಥರು ಆರೋಪಿಸಿದರು.
‘ಕೋಳಿ ಫಾರಂ ತೆರವುಗೊಳಿಸುವಂತೆ ಒತ್ತಾಯಿಸಿ, ಹಲವು ವರ್ಷಗಳಿಂದ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಈಚೆಗೆ ಪಟ್ಟಣದಲ್ಲಿ ಲೋಕಾಯುಕ್ತ ಇಲಾಖೆ ಅಧಿಕಾರಿಗಳಿಂದ ನಡೆದ ಸಾರ್ವಜನಿಕ ಕುಂದು–ಕೊರತೆ ಹಾಗೂ ಅಹವಾಲು ಸ್ವೀಕಾರ ಸಭೆಯಲ್ಲೂ ದೂರು ನೀಡಲಾಗಿದೆ. ಆದರೂ, ಯಾವುದೇ ಅಧಿಕಾರಿ ಕ್ರಮ ಕೈಗೊಂಡಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.