ಮುಂಡರಗಿ: ತಾಲ್ಲೂಕಿನ ವಿವಿಧ ಭಾಗಗಳಲ್ಲಿ ವಿಶಾಲವಾಗಿ ವ್ಯಾಪಿಸಿರುವ ಕಪ್ಪತಗುಡ್ಡ ಅರಣ್ಯ ಪ್ರದೇಶದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ಸಾವಿರಾರು ಪ್ರಾಣಿ, ಪಕ್ಷಿಗಳು ಬಿಸಿಲು ಹಾಗೂ ಶಾಖಕ್ಕೆ ತತ್ತರಿಸತೊಡಗಿವೆ.
ಆದರೆ ಬೇಸಿಗೆಯಲ್ಲಿ ವನ್ಯಜೀವಿಗಳ ನೀರಿನ ದಾಹ ನೀಗಿಸುವ ನಿಟ್ಟಿನಲ್ಲಿ ಕಪ್ಪತಗುಡ್ಡ ವಲಯ ಅರಣ್ಯ ಇಲಾಖೆಯು ಕಪ್ಪತಗುಡ್ಡದ ವಿವಿಧ ಭಾಗಗಳಲ್ಲಿ ಹಲವಾರು ಕೃತಕ ನೀರಿನ ತೊಟ್ಟಿಗಳನ್ನು ನಿರ್ಮಿಸಿ ಪ್ರಾಣಿಗಳ ನೀರಿನ ದಾಹವನ್ನು ನೀಗಿಸುತ್ತಿದೆ. ಆ ಮೂಲಕ ಇಲಾಖೆಯು ಜಿಲ್ಲೆಯ ಪರಿಸರ ಹಾಗೂ ವನ್ಯಜೀವಿ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ.
ಕಪ್ಪತಗುಡ್ಡದ ಅರಣ್ಯ ಪ್ರದೇಶದಲ್ಲಿ ಚಿರತೆ, ಜಿಂಕೆ, ಕೃಷ್ಣಮೃಗ, ಕಾಡುಹಂದಿ, ನರಿ, ಮೊಲ, ತೋಳ, ಕತ್ತೆಕಿರುಬ, ಮುಳ್ಳುಹಂದಿ, ಸಾರಂಗ, ನವಿಲು, ಹೆಬ್ಬಂಕ, ಗಿಳಿ, ಗೊರವಂಕ, ಹಾವು, ಚೇಳು ಮೊದಲಾದ ಪ್ರಾಣಿ, ಪಕ್ಷಿಗಳು, ಕ್ರಿಮಿ, ಕೀಟ, ಜಂತುಗಳು ವಾಸಿಸುತ್ತಿವೆ. ಸಾಮಾನ್ಯವಾಗಿ ಕಪ್ಪತಗುಡ್ಡ ಅರಣ್ಯ ಪ್ರದೇಶದಲ್ಲಿ ವ್ಯಾಪಿಸಿರುವ ಬೆಟ್ಟ, ಗುಡ್ಡಗಳಲ್ಲಿ ಹಾಗೂ ಅರಣ್ಯದಲ್ಲಿ ಬೇಸಿಗೆಯಲ್ಲಿ ಕೆರೆ, ತೊರೆ, ಹಳ್ಳ, ಕೊಳ್ಳ ಮೊದಲಾದ ನೈಸರ್ಗಿಕ ಜಲ ಮೂಲಗಳು ಬತ್ತಿ ಹೋಗುತ್ತವೆ. ಹೀಗಾಗಿ ಅಲ್ಲಿ ವಾಸಿಸುತ್ತಿರುವ ಸಾವಿರಾರು ಪ್ರಾಣಿ, ಪಕ್ಷಿಗಳು ಬೇಸಿಗೆಯಲ್ಲಿ ಕುಡಿಯಲು ನೀರು ದೊರೆಯದೆ ಪರದಾಡುತ್ತವೆ.
24 ಕೃತಕ ತೊಟ್ಟಿ: ತಾಲ್ಲೂಕಿನ ಹಿರೇವಡ್ಡಟ್ಟಿ, ಬಾಗೇವಾಡಿ, ಡೋಣಿ, ಚಿಕ್ಕವಡ್ಡಟ್ಟಿ, ಮುರುಡಿ ಮೊದಲಾದ ಗ್ರಾಮಗಳ ಬಳಿ ವ್ಯಾಪಿಸಿರುವ ಕಪ್ಪತಗುಡ್ಡ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆಯು ಒಟ್ಟು 24 ಕೃತಕ ನೀರಿನ ತೊಟ್ಟಿಗಳನ್ನು ನಿರ್ಮಿಸಿದೆ. ಅಕ್ಕಪಕ್ಕದ ಜಮೀನುಗಳ ರೈತರ ಕೊಳವೆ ಬಾವಿಗಳಿಂದ ನೀರು ಪಡೆದು ಟ್ರ್ಯಾಕ್ಟರ್ ಮೂಲಕ ತೊಟ್ಟಿಗಳಿಗೆ ನೀರು ತುಂಬಿಸಲಾಗುತ್ತಿದೆ.
ಸಾಮಾನ್ಯವಾಗಿ ಹದಿನೈದು ದಿನಗಳಿಗೊಮ್ಮೆ ನೀರಿನ ತೊಟ್ಟಿಗಳನ್ನು ತುಂಬಿಸಲಾಗುತ್ತಿದೆ. ಅದಕ್ಕೂ ಪೂರ್ವದಲ್ಲಿ ತೊಟ್ಟಿಯಲ್ಲಿ ನೀರು ಖಾಲಿಯಾದರೆ ಹತ್ತಿರದ ಅರಣ್ಯ ಇಲಾಖೆಯ ಸಿಬ್ಬಂದಿ ತಕ್ಷಣ ತೊಟ್ಟಿಗೆ ನೀರು ತುಂಬಿಸಲು ಕ್ರಮ ಕೈಗೊಳ್ಳುತ್ತಾರೆ. ಹೀಗಾಗಿ ಅರಣ್ಯ ಪ್ರದೇಶದ ಪ್ರಾಣಿ, ಪಕ್ಷಿಗಳು ನೀರಿಗಾಗಿ ಪರದಾಡುವುದು ತಪ್ಪಿದಂತಾಗಿದೆ.
ಮೇ ಅಂತ್ಯದವರೆಗೂ ನೀರಿನ ತೊಟ್ಟಿಗಳಿಗೆ ನೀರು ತುಂಬಿಸಲಾಗುತ್ತದೆ. ಬೇಸಿಗೆ ಮುಗಿದು ಒಂದೆರಡು ದೊಡ್ಡ ಮಳೆ ಬೀಳುವವರೆಗೂ ನಿಯಮಿತವಾಗಿ ಎಲ್ಲ ತೊಟ್ಟಿಗಳನ್ನು ನೀರಿನಿಂದ ತುಂಬಿಸಲು ಇಲಾಖೆ ಕ್ರಮ ಕೈಗೊಂಡಿದೆ.
ಬೇಸಿಗೆಯಲ್ಲಿ ವನ್ಯಜೀವಿಗಳು ನೀರಿಲ್ಲದೆ ಪರಿತಪಿಸಬಾರದು ಎಂದು ಅರಣ್ಯ ಇಲಾಖೆಯು ಕಪ್ಪತಗುಡ್ಡದಲ್ಲಿ ಕೃತಕ ತೊಟ್ಟಿಗಳನ್ನು ನಿರ್ಮಿಸಿ ನೀರು ತುಂಬಿಸುತ್ತಿದೆ. ಆ ಮೂಲಕ ವನ್ಯಜೀವಿ ಸಂರಕ್ಷಣೆಗೆ ಇಲಾಖೆ ಮುಂದಾಗಿದೆ-ಮಂಜುನಾಥ ಮೇಗಳಮನಿ, ಕಪ್ಪತಗುಡ್ಡ ವಲಯ ಅರಣ್ಯಾಧಿಕಾರಿ ಮುಂಡರಗಿ
ಅರಣ್ಯ ಇಲಾಖೆಯು ಕಪ್ಪತಗುಡ್ಡದಲ್ಲಿರುವ ಪ್ರಾಣಿ ಪಕ್ಷಿಗಳಿಗೆ ನೀರೊದಗಿಸಲು ಕೃತಕ ತೊಟ್ಟಿಗಳನ್ನು ನಿರ್ಮಿಸಿರುವುದು ಸಂತಸದ ಸಂಗತಿಯಾಗಿದೆ-ಸಿ.ಎಸ್. ಅರಸನಾಳ,ಜಿಲ್ಲಾ ವನ್ಯಜೀವಿ ಪರಿಪಾಲಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.