ADVERTISEMENT

ಬತ್ತಿದ ಕೆರೆ; ‘ಡಿಬಿಒಟಿ’ಯೇ ಆಸರೆ

ಶುದ್ಧ ಕುಡಿಯುವ ನೀರಿನ ಘಟಕಗಳ ಅಸಮರ್ಪಕ ನಿರ್ವಹಣೆ ಕುರಿತು ದೂರು

ಮಂಜುನಾಥ ಆರಪಲ್ಲಿ
Published 17 ಮೇ 2019, 20:00 IST
Last Updated 17 ಮೇ 2019, 20:00 IST
ದುರಸ್ಥಿ ಹಂತದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ
ದುರಸ್ಥಿ ಹಂತದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ   

ಶಿರಹಟ್ಟಿ: ಕಳೆದ ನಾಲ್ಕು ವರ್ಷಗಳಿಂದ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ತೀವ್ರ ತೊಂದರೆ ಅನುಭವಿಸುತ್ತಿದ್ದ ಬನ್ನಿಕೊಪ್ಪ, ಸುಗ್ನಳ್ಳಿ, ಹಡಗಲಿ ಭಾವನೂರ, ತೆಗ್ಗಿನ ಭಾವನೂರ, ಮಜ್ಜೂರು ಗ್ರಾಮಗಳಲ್ಲಿ ಈ ಬಾರಿ ಸ್ವಲ್ಪ ಸಮಾಧಾನಕರ ಪರಿಸ್ಥಿತಿ ಇದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ (ಡಿಬಿಒಟಿ) ಈ ಗ್ರಾಮಗಳಿಗೆ ಸದ್ಯ ನೀರು ಪೂರೈಕೆಯಾಗುತ್ತಿದೆ.

ಬೆಳ್ಳಟ್ಟಿ ಗ್ರಾಮ ಪಂಚಾಯ್ತಿ, ಶಿರಹಟ್ಟಿ ಹಾಗೂ ಮುಳಗುಂದ ಪಟ್ಟಣ ಪಂಚಾಯ್ತಿಗೆ ತುಂಗಭದ್ರಾ ನದಿ ಮೂಲದಿಂದ ನೀರು ಪೂರೈಕೆಯಾಗುತ್ತಿದ್ದು, ಇಲ್ಲೂ ಹಿಂದಿನ ವರ್ಷಗಳಷ್ಟು ಗಂಭೀರ ಪರಿಸ್ಥಿತಿ ಇಲ್ಲ. ತಾಲ್ಲೂಕಿನಾದ್ಯಾಂತ 114 ಶುದ್ಧ ಕುಡಿಯುವ ನೀರಿನ ಘಟಕಗಳು ಸ್ಥಾಪನೆಯಾಗಿವೆ. ಆದರೆ, ಸಮರ್ಪಕ ನಿರ್ವಹಣೆ ಇಲ್ಲದೆ, ಇವುಗಳಲ್ಲಿ ಬಹುತೇಕ ಸ್ಥಗಿತಗೊಂಡಿವೆ. ಸ್ಥಗಿತಗೊಂಡ ಘಟಕಗಳನ್ನು ಸಕಾಲದಲ್ಲಿ ದುರಸ್ತಿಗೊಳಿಸಿದರೆ ಗ್ರಾಮದಲ್ಲಿ ನೀರಿನ ಸಮಸ್ಯೆ ಇರುವುದಿಲ್ಲ. ದುರಸ್ತಿಗೊಳಿಸಲು ವಿಳಂಬ ಮಾಡುತ್ತಿರುವುದರಿಂದ ಕುಡಿಯುವ ನೀರಿನ ಅಭಾವ ಉಂಟಾಗುತ್ತಿದೆ ಎನ್ನುತ್ತಾರೆ ಗ್ರಾಮಸ್ಥರು.

ಇತ್ತೀಚೆಗೆ ತಾಲ್ಲೂಕಿನ ಆದ್ರಳ್ಳಿ ಹಾಗೂ ಅಂಕಲಿ ಗ್ರಾಮಗಳಲ್ಲಿ ಬಿರುಗಾಳಿಗೆ ಸಿಲುಕಿ ಶುದ್ಧ ಕುಡಿಯುವ ನೀರಿನ ಘಟಕದ ಶೆಡ್‌ ಹಾರಿಹೋಗಿದೆ. ಇದು ಇನ್ನೂ ದುರಸ್ತಿಗೊಂಡಿಲ್ಲ. ಕೆಆರ್‌ಐಡಿಎಲ್‌ನಿಂದ ನಿರ್ಮಾಣಗೊಂಡ ದೇವಿಹಾಳ ಗ್ರಾಮದಲ್ಲಿನ ಘಟಕವನ್ನು ಕಾಟಾಚಾರಕ್ಕಾಗಿ ನಿರ್ಮಾಣ ಮಾಡಲಾಗಿದೆ ಎಂಬದು ಗ್ರಾಮಸ್ಥರ ಆರೋಪ.

ADVERTISEMENT

ತಾಲ್ಲೂಕಿನ ಅತಿ ದೊಡ್ಡ ಕರೆಯಾದ ಮಜ್ಜೂರು, ಜಲ್ಲಿಗೇರಿ, ಹೊಸಳ್ಳಿ (ವರವಿ ಕ್ರಾಸ್‌) ವಡವಿ ಹೊಸೂರ ಸೇರಿದಂತೆ ಹಲವು ಪ್ರಮುಖ ಕೆರೆಗಳು ಸಂಪೂರ್ಣ ಬತ್ತಿಹೋಗಿದ್ದು, ಇದರಿಂದ ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವ ಉಂಟಾಗಿದೆ. ಮನುಷ್ಯರು ಎಲ್ಲಿಂದಾದರೂ, ನೀರು ತಂದು ಕುಡಿಯಬಹುದು, ಆದರೆ, ಜಾನುವಾರುಗಳಿಗೆ ಎಲ್ಲಿಂದ ತರೋದು ಎಂಬದು ರೈತ ಸಮುದಾಯದ ಅಸಹಾಯಕ ನುಡಿಗಳು.

ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ನೀರು ಪೂರೈಕೆ ಆಗುತ್ತಿರುವುದರಿಂದ ಈ ಬಾರಿ ಗ್ರಾಮೀಣ ಪ್ರದೇಶಗಳಲ್ಲಿ ನೀರಿಗಾಗಿ ನಡೆಯುತ್ತಿದ್ದ ಕಲಹ, ಪ್ರತಿಭಟನೆಗಳು ಈ ವರ್ಷ ಗಣನೀಯವಾಗಿ ತಗ್ಗಿವೆ. ‘ಒಮ್ಮೊಮ್ಮೆ ತಾಂತ್ರಿಕ ಸಮಸ್ಯೆಯಿಂದ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುವುದನ್ನು ಹೊರತುಪಡಿಸಿದರೆ ತಾಲ್ಲೂಕಿನಾದ್ಯಾಂತ ಕುಡಿಯುವ ನೀರಿನ ಗಂಭೀರ ಸಮಸ್ಯೆ ಇಲ್ಲ’ಎಂದು ತಾಲ್ಲೂಕು ಪಂಚಾಯ್ತಿ ಇಓ ಆರ್‌.ವೈ ಗುರಿಕಾರ ಸ್ಪಷ್ಟಪಡಿಸಿದರು.

‘ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಬರದಂತೆ ಎಚ್ಚರಿಕೆ ವಹಿಸಿ ಎಂದು ಗ್ರಾಮ ಪಂಚಾಯ್ತಿ ಪಿಡಿಒಗಳಿಗೆ ಎಚ್ಚರಿಕೆ ನೀಡಲಾಗಿದೆ. ಇದಕ್ಎಕ ಹಣದ ಕೊರತೆಯೂ ಇಲ್ಲ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.