ADVERTISEMENT

ಲಕ್ಷ್ಮೇಶ್ವರ | ಪ್ರಜಾಪ್ರಭುತ್ವ ದಿನ: ಮಾನವ ಸರಪಳಿ 15ರಂದು

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2024, 16:06 IST
Last Updated 10 ಸೆಪ್ಟೆಂಬರ್ 2024, 16:06 IST
ವಿಶ್ವ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಲಕ್ಷ್ಮೇಶ್ವರದ ತಾಲ್ಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ಸೋಮವಾರ ಅಧಿಕಾರಿಗಳು ಪೂರ್ವಭಾವಿ ಸಭೆ ನಡೆಸಿದರು
ವಿಶ್ವ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಲಕ್ಷ್ಮೇಶ್ವರದ ತಾಲ್ಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ಸೋಮವಾರ ಅಧಿಕಾರಿಗಳು ಪೂರ್ವಭಾವಿ ಸಭೆ ನಡೆಸಿದರು   

ಲಕ್ಷ್ಮೇಶ್ವರ: ಸೆಪ್ಟೆಂಬರ್‌ 15ರಂದು ನಡೆಯಲಿರುವ ವಿಶ್ವ ಪ್ರಜಾಪ್ರಭುತ್ವ ದಿನ ನಿಮಿತ್ತ ಸೋಮವಾರ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಮತ್ತು ತಾಲ್ಲೂಕಾಡಳಿತದ ವತಿಯಿಂದ ತಾಲ್ಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ಅಧಿಕಾರಿಗಳು, ಸಂಘ–ಸಂಸ್ಥೆಗಳ ಪದಾಧಿಕಾರಿಗಳ ಪೂರ್ವಭಾವಿ ಸಭೆ ಜರುಗಿತು.

ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್‌ ವಾಸುದೇವಸ್ವಾಮಿ ಮಾತನಾಡಿ, ‘ವಿಶ್ವ ಪ್ರಜಾಪ್ರಭುತ್ವ ದಿನದ ಅಂಗವಾಗಿ ರಾಜ್ಯದಾದ್ಯಂತ ಮಾನವ ಸರಪಳಿ ನಿರ್ಮಿಸಲಾಗುತ್ತಿದೆ. ಸೆ. 15ರಂದು ಮಾನವ ಸರಪಳಿ ಹಾವೇರಿ ತಾಲ್ಲೂಕಿನ ಮರೋಳ ಗ್ರಾಮದಿಂದ ಲಕ್ಷ್ಮೇಶ್ವರ ತಾಲ್ಲೂಕಿನ ಬಾಲೆಹೊಸೂರು ಗ್ರಾಮಕ್ಕೆ ಸಂಪರ್ಕ ಕೊಡಲಿದೆ. ಅಲ್ಲಿಂದ ನಿರ್ಮಾಣಗೊಳ್ಳುವ ಮಾನವ ಸರಪಳಿ ಬಾಲೆಹೊಸೂರು ಮೂಲಕ ಸೂರಣಗಿ, ನೆಲೂಗಲ್ಲ, ಬೆಳ್ಳಟ್ಟಿ, ಸುಗ್ನಳ್ಳಿ, ಬನ್ನಿಕೊಪ್ಪ ಗ್ರಾಮಗಳ ಮೂಲಕ ಮುಂಡರಗಿ ತಾಲ್ಲೂಕಿಗೆ ಸಂಪರ್ಕ ಕೊಡಲಿದೆ. ಅಂದರೆ ಲಕ್ಷ್ಮೇಶ್ವರ ತಾಲ್ಲೂಕಿನಲ್ಲಿ 17 ಕಿ.ಮೀ ಮತ್ತು ಶಿರಹಟ್ಟಿ ತಾಲ್ಲೂಕಿನಲ್ಲಿ 17 ಕಿ.ಮೀ ಮಾನವ ಸರಪಳಿ ಸಂಚರಿಸಲಿದೆ’ ಎಂದರು.

ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ ಪೋತದಾರ ಮಾತನಾಡಿ, ‘ಲಕ್ಷ್ಮೇಶ್ವರ ಮತ್ತು ಶಿರಹಟ್ಟಿ ಎರಡೂ ತಾಲ್ಲೂಕುಗಳ 34 ಕಿ.ಮೀಗಳಲ್ಲಿ ಮಾನವ ಸರಪಳಿ ನಿರ್ಮಿಸಬೇಕಿದೆ. ಇದಕ್ಕಾಗಿ ಬಾಲೆಹೊಸೂರು, ಸೂರಣಗಿ ಹಾಗೂ ಹುಲ್ಲೂರು ಗ್ರಾಮ ಪಂಚಾಯ್ತಿಗಳಿಗೆ ಮಾಹಿತಿ ರವಾನಿಸಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರನ್ನು ಕರೆ ತರಲು ಸೂಚಿಸಲಾಗಿದೆ’ ಎಂದರು.

ADVERTISEMENT

ಸಿಪಿಐ ನಾಗರಾಜ ಮಾಡಳ್ಳಿ, ಪಿಎಸ್‍ಐ ಈರಪ್ಪ ರಿತ್ತಿ, ಇಒ ಕೃಷ್ಣಪ್ಪ ಧರ್ಮರ, ತಾಲ್ಲೂಕು ವೈದ್ಯಾಧಿಕಾರಿ ಡಾ.ಸುಭಾಷ ದಾಯಗೊಂಡ, ಕೃಷಿ ಅಧಿಕಾರಿ ಚಂದ್ರಶೇಖರ ನರಸಮ್ಮನವರ, ಸಿಡಿಪಿಒ ಮೃತ್ಯುಂಜಯಪ್ಪ ಗುಡ್ಡದನ್ವೇರಿ ಹಾಗೂ ಎಲ್ಲ ಇಲಾಖೆಗಳ ಅಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.