ADVERTISEMENT

ಗದಗ | ತಾಯಿ– ಮಗುವಿನ ಆರೋಗ್ಯ ರಕ್ಷಣೆಗೆ ವಿಶೇಷ ಕಾಳಜಿ

ವಿಶ್ವ ಆರೋಗ್ಯ ದಿನ: ‘ಹೆಲ್ತಿ ಬಿಗಿನಿಂಗ್ಸ್‌, ಹೋಪ್‌ಫುಲ್‌ ಫ್ಯೂಚರ್ಸ್‌’ ಈ ವರ್ಷದ ಪರಿಕಲ್ಪನೆ

ಕೆ.ಎಂ.ಸತೀಶ್ ಬೆಳ್ಳಕ್ಕಿ
Published 7 ಏಪ್ರಿಲ್ 2025, 5:53 IST
Last Updated 7 ಏಪ್ರಿಲ್ 2025, 5:53 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಗದಗ: ‘ಆರೋಗ್ಯಕರ ಆರಂಭಗಳು; ಭರವಸೆಯ ಭವಿಷ್ಯ’ ಎಂಬುದು ಈ ವರ್ಷದ ವಿಶ್ವ ಆರೋಗ್ಯ ದಿನಾಚರಣೆಯ ಥೀಮ್‌ ಆಗಿದೆ. ಜತೆಗೆ ಈ ವರ್ಷದಲ್ಲಿ ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಸಂಬಂಧಿಸಿದಂತಹ ಸೇವೆಗಳನ್ನು ಮತ್ತಷ್ಟು ಬಲಿಷ್ಠಗೊಳಿಸುವುದು ಆರೋಗ್ಯ ಇಲಾಖೆಯ ಧ್ಯೇಯವಾಗಿದೆ.

‘ಖುಷಿ ಕುಟುಂಬದ ಸೂತ್ರ ತಾಯಿ ಮತ್ತು ಮಕ್ಕಳ ಆರೋಗ್ಯದಲ್ಲಿದೆ. ಈ ನಿಟ್ಟಿನಲ್ಲಿ ತಾಯಿ ಮತ್ತು ಶಿಶು ಮರಣ ಪ್ರಮಾಣವನ್ನು ತೀವ್ರ ಪ್ರಮಾಣದಲ್ಲಿ ಕಡಿಮೆಗೊಳಿಸುವ ಗುರಿಯನ್ನು ಆರೋಗ್ಯ ಇಲಾಖೆ ಹಾಕಿಕೊಂಡಿದೆ. ಮಹಿಳೆಯರ ದೀರ್ಘಕಾಲೀನ ಆರೋಗ್ಯ ಮತ್ತು ಯೋಗಕ್ಷೇಮ ಇಲಾಖೆಯ ಗುರಿಯಾಗಿದೆ. ಈ ನಿಟ್ಟಿನಲ್ಲಿ ತಾಯಿ ಮತ್ತು ಮಕ್ಕಳ ಆರೋಗ್ಯ ತಪಾಸಣೆ ನಡೆಸುವ ತಜ್ಞ ವೈದ್ಯರ ನೇಮಕ ಹಾಗೂ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಎನ್‌ಐಸಿಯುಗಳ ಹೆಚ್ಚಳಕ್ಕೆ ಸರ್ಕಾರ ಕ್ರಮವಹಿಸಲಿದೆ’ ಎನ್ನುತ್ತಾರೆ ಗದಗ ಜಿಲ್ಲೆಯ ಆರೋಗ್ಯ ಇಲಾಖೆ ಅಧಿಕಾರಿಗಳು.

ADVERTISEMENT

‘ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ಗದಗ ಜಿಲ್ಲೆಯಲ್ಲಿ ತಾಯಿ ಮತ್ತು ಮಗುವಿನ ಮರಣ ಪ್ರಮಾಣ ಕಡಿಮೆ ಇದೆ. ಬಾಣಂತಿಯರ ಸಾವಿನ ಪ್ರಮಾಣ ಕೂಡ ಶೂನ್ಯವಾಗಿದೆ’ ಎಂದು ಗದಗ ತಾಲ್ಲೂಕು ವೈದ್ಯಾಧಿಕಾರಿ ಡಾ. ಪ್ರೀತ್‌ ಖೋನ ತಿಳಿಸಿದ್ದಾರೆ.

ಕೆಲವು ಮಹಿಳೆಯರು ಗರ್ಭಿಣಿಯಾದ ನಂತರ ಸಾಕಷ್ಟು ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಾರೆ. ಅಂತಹವರಲ್ಲಿ ಕೆಲವರು ಪ್ರಸವ ಸಮಯದಲ್ಲಿ ಸಾವನ್ನಪ್ಪುತ್ತಾರೆ. ಇಂತಹ ಪ್ರಕರಣಗಳನ್ನೂ ಕನಿಷ್ಠ ಮಟ್ಟಕ್ಕೆ ಇಳಿಸುವ ಉದ್ದೇಶದಿಂದ ಪ್ರಧಾನಮಂತ್ರಿ ಸುರಕ್ಷಾ ಮಾತೃತ್ವ ಯೋಜನೆ ಜಾರಿಯಲ್ಲಿದ್ದು, ಗದಗ ಜಿಲ್ಲೆಯಲ್ಲಿ ಪ್ರತಿ ತಿಂಗಳ 9 ಮತ್ತು 24ನೇ ರಂದು ಹೈರಿಸ್ಕ್‌ ಹೊಂದಿರುವ ಗರ್ಭಿಣಿಯರನ್ನು ವಿಶೇಷವಾಗಿ ತಪಾಸಣೆ ನಡೆಸಿ, ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಪ್ರಾರಂಭದಲ್ಲೇ ಮುಂಜಾಗ್ರತೆ ವಹಿಸುತ್ತಿರುವುದರಿಂದ ತಾಯಿ ಮರಣ ಪ್ರಮಾಣ ಕಡಿಮೆ ಆಗುತ್ತಿದೆ ಎನ್ನುತ್ತಾರೆ ಅಧಿಕಾರಿಗಳು.

ಗದಗ ಜಿಲ್ಲೆಯ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆ ವ್ಯವಸ್ಥೆ ಚೆನ್ನಾಗಿರುವ ಕಾರಣ ಅಕ್ಕಪಕ್ಕದ ಜಿಲ್ಲೆಯವರೂ ಇಲ್ಲಿಗೆ ಬರುತ್ತಾರೆ. ಪ್ರತಿ ತಿಂಗಳು 1,500ಕ್ಕೂ ಹೆಚ್ಚು ಸಹಜ ಹೆರಿಗೆಗಳು ಆಗುತ್ತವೆ ಎನ್ನುತ್ತಾರೆ ವೈದ್ಯರು.

ಆರೋಗ್ಯ ಜಾಗೃತಿಗೆ ಕ್ರಮ
‘ಅಸಾಂಕ್ರಾಮಿಕ ರೋಗಗಳ ಕುರಿತಾಗಿ ಜನರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಆರೋಗ್ಯ ಇಲಾಖೆಯಿಂದ ಬಿರುಸಿನಿಂದ ನಡೆಯುತ್ತಿವೆ’ ಎನ್ನುತ್ತಾರೆ ಡಿಎಚ್‌ಒ ಡಾ. ಎಸ್‌.ಎಸ್‌.ನೀಲಗುಂದ. ‘30 ವರ್ಷ ಮೇಲ್ಪಟ್ಟ ಎಲ್ಲರೂ ರಕ್ತದೊತ್ತಡ ಮತ್ತು ಮಧುಮೇಹ ತಪಾಸಣೆಯನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳುವಂತೆ ಸೂಚಿಸಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಗೃಹ ಆರೋಗ್ಯ ಕಾರ್ಯಕ್ರಮ ಕೂಡ ಬರಲಿದ್ದು ಮನೆಮನೆಗೆ ಹೋಗಿ ತಪಾಸಣೆ ಔಷಧೋಪಚಾರ ನೀಡುವ ಉದ್ದೇಶ ಹೊಂದಲಾಗಿದೆ’ ಎನ್ನುತ್ತಾರೆ ಅವರು. ಚಿಕಿತ್ಸೆಗಿಂತ ರೋಗ ಬಾರದಂತೆ ಎಚ್ಚರಿಕೆ ವಹಿಸುವುದು ಉತ್ತಮ. ಅದೇರೀತಿ ಉತ್ತಮ ಜೀವನಶೈಲಿ ಆಹಾರ ಪದ್ದತಿ ಹೊಂದಬೇಕು. ಎಲ್ಲರಿಗಿಂತ ವಿಶೇಷವಾಗಿ ವಿದ್ಯಾರ್ಥಿಗಳು ಮತ್ತು ತರುಣರು ಈ ಬಗ್ಗೆ ಗಮನ ಹರಿಸಬೇಕು ಎಂದು ತಿಳಿಸಿದರು.
ತಾಯಿ ಆರೈಕೆಗೆ ವಿಶೇಷ ಯೋಜನೆ
‘ಜಿಲ್ಲೆಯ ಹೆರಿಗೆ ಆಸ್ಪತ್ರೆಗಳಲ್ಲಿ ತಾಯಿ ಆರೈಕೆಗಾಗಿ ‘ಕೇರ್‌ ಗೀವರ್ಸ್‌’ ಎಂಬ ವಿಶೇಷ ಯೋಜನೆ ರೂಪಿಸಲಾಗುತ್ತಿದೆ’ ಎಂದು ಟಿಎಚ್‌ಒ ಡಾ. ಪ್ರೀತ್‌ ಖೋನ ತಿಳಿಸಿದ್ದಾರೆ. ‘ಅಂದರೆ ಹೆರಿಗೆಗೆಂದು ಸರ್ಕಾರಿ ಆಸ್ಪತ್ರೆಗೆ ಬರುವವರಿಗೆ ಆರೋಗ್ಯ ಜಾಗೃತಿ ಮೂಡಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಸಹಜ ಹೆರಿಗೆಗೆ ಮನಒಲಿಸುವುದು ಸಹಜ ಹೆರಿಗೆಯ ಅನುಕೂಲಗಳು ಹೆರಿಗೆ ನಂತರ ಅನುಸರಿಸಬೇಕಾದ ಕ್ರಮಗಳು ಎರಡನೇ ಮಗು ಹೊಂದಲು ಮಾಡಿಕೊಳ್ಳಬೇಕಾದ ಪೂರ್ವಯೋಜನೆ ಬಗ್ಗೆ ಸಮಾಲೋಚಕರು ಮಾಹಿತಿ ನೀಡುತ್ತಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.