ADVERTISEMENT

ಹಾಸನ: ಒಂದೇ ದಿನ 501 ಜನರಿಗೆ ಕೋವಿಡ್‌, ನಾಲ್ವರು ಸಾವು

12 ಸಾವಿರಕ್ಕೇರಿದ ಸೋಂಕಿತರ ಸಂಖ್ಯೆ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2020, 16:14 IST
Last Updated 13 ಸೆಪ್ಟೆಂಬರ್ 2020, 16:14 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹಾಸನ: ಜಿಲ್ಲೆಯಲ್ಲಿ ಭಾನುವಾರ ಹೊಸದಾಗಿ 501 ಜನರಿಗೆ ಕೋವಿಡ್‌ ದೃಢಪಟ್ಟಿದ್ದು, ಇದು ಈವರೆಗಿನ ಏಕದಿನ ಏರಿಕೆಯಲ್ಲಿ ಗರಿಷ್ಠ ದಾಖಲೆಯಾಗಿದೆ. ಸೋಂಕಿತರ ಸಂಖ್ಯೆ 12 ಸಾವಿರಕ್ಕೆ ಏರಿಕೆಯಾಗಿದೆ.

ನಾಲ್ವರು ಸೋಂಕಿತರು ಮೃತರಾಗಿದ್ದು, ಒಟ್ಟಾರೆ ಮೃತರ ಸಂಖ್ಯೆ 247ಕ್ಕೆ ಏರಿಕೆಯಾಗಿದೆ. ಸೋಂಕಿನ ಜತೆಗೆ ಗುಣಮುಖ ಪ್ರಮಾಣವೂ ಹೆಚ್ಚಳವಾಗುತ್ತಿದೆ. ಒಂದೇ ದಿನದಲ್ಲಿ 245 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಈವರೆಗೆ 8730 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ.

ತೀವ್ರ ಜ್ವರದಿಂದ ಬಳಲುತ್ತಿದ್ದ ಹಾಸನ ತಾಲ್ಲೂಕಿನ 82 ವರ್ಷದ ವೃದ್ಧೆ, 39 ವರ್ಷದ ಪುರುಷ ಚನ್ನರಾಯಪಟ್ಟಣದ 55 ವರ್ಷದ ಪುರುಷ, 60 ವರ್ಷದ ವೃದ್ಧೆ ಚಿಕಿತ್ಸೆಗೆ ಸ್ಪಂದಿಸಿಲ್ಲ. 55 ಮಂದಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಜಿಲ್ಲೆಯಲ್ಲಿ 3023 ಸಕ್ರಿಯ ಪ್ರಕರಣಗಳಿದ್ದು, ಜಿಲ್ಲಾ ಕೋವಿಡ್‌ ಆಸ್ಪತ್ರೆ ಹಾಗೂ ಕೋವಿಡ್‌ ಕೇರ್‌ ಸೆಂಟರ್‌ ಮತ್ತು ಹೋಂ ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾ ಆರೋಗ್ಯಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್ ತಿಳಿಸಿದ್ದಾರೆ.

ADVERTISEMENT

ಹೊಸದಾಗಿ ಅರಸೀಕೆರೆ 63, ಚನ್ನರಾಯಪಟ್ಟಣ 87, ಆಲೂರು 24, ಹಾಸನ 249, ಹೊಳೆನರಸೀಪುರ 11, ಅರಕಲಗೂಡು 30, ಬೇಲೂರು 21, ಸಕಲೇಶಪುರ 11 ಹಾಗೂ ಹೊರ ಜಿಲ್ಲೆಯ 5 ಜನರಿಗೆ ಸೋಂಕು ದೃಢಪಟ್ಟಿದೆ.

ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್‌ ರೋಗಿಗಳಿಗೆ ಹಾಸಿಗೆ ಇಲ್ಲ, ರೋಗಕ್ಕೆ ಸರಿಯಾಗಿ ಚಿಕಿತ್ಸೆ ನೀಡುವುದಿಲ್ಲ ಎಂದು ದೂರುವ ಮುನ್ನ ತಪಾಸಣೆಗೆ ಒಳಪಟ್ಟು ಸೋಂಕು ಇದೆಯೋ ಇಲ್ಲವೋ‌ ಖಾತರಿ ಪಡಿಸಿಕೊಳ್ಳಬೇಕು. ಸಕಾಲದಲ್ಲಿ ಸರಿಯಾದ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.