ADVERTISEMENT

ಹಾಸನ | ನಿವೇಶನ ವಿವಾದ: ನಟ ಯಶ್‌ ತಾಯಿ ಜಗಳ

​ಪ್ರಜಾವಾಣಿ ವಾರ್ತೆ
Published 31 ಜನವರಿ 2026, 7:45 IST
Last Updated 31 ಜನವರಿ 2026, 7:45 IST
<div class="paragraphs"><p>ನಟ ಯಶ್‌ ತಾಯಿ ವಾಗ್ವಾದ ಸಂದರ್ಭ</p></div>

ನಟ ಯಶ್‌ ತಾಯಿ ವಾಗ್ವಾದ ಸಂದರ್ಭ

   

ಹಾಸನ: ವಿದ್ಯಾನಗರದ ನಿವೇಶನಕ್ಕೆ ಸಂಬಂಧಿಸಿದಂತೆ ನಟ ಯಶ್‌ ಅವರ ತಾಯಿ ಪುಷ್ಪಾ ಹಾಗೂ ಜಿಪಿಎ ಹೋಲ್ಡರ್‌ ದೇವರಾಜು ಮಧ್ಯೆ ಶನಿವಾರ ಬೆಳಿಗ್ಗೆ ವಾಗ್ವಾದ ನಡೆದಿದೆ.

ವಿದ್ಯಾನಗರದಲ್ಲಿರುವ ಯಶ್ ಮನೆಯ ಪಕ್ಕದ ನಿವೇಶನ ವಿವಾದಕ್ಕೆ ಕಾರಣವಾಗಿದೆ. ಕೋರ್ಟ್‌ ಆದೇಶ ಇರುವುದಾಗಿ ಈ ಹಿಂದೆ ದೇವರಾಜು ಅವರು, ಪುಷ್ಪಾ ಅರುಣ್‌ಕುಮಾರ್‌ ಹಾಕಿದ್ದ ಕಾಂಪೌಂಡ್ ಹಾಗೂ ಶೆಡ್‌ ತೆರವು ಮಾಡಿದ್ದರು. ಈಗ ಮತ್ತೆ ಕಾಂಪೌಂಡ್ ಹಾಕಲು ಪುಷ್ಪ ಅರುಣ್‌ಕುಮಾರ್‌ ಮುಂದಾಗಿದ್ದರು.

ADVERTISEMENT

‘ಆರು ವರ್ಷದ ಹಿಂದೆ ನಿವೇಶನ ಖರೀದಿಸಿದ್ದೇನೆ’ ಎಂದ ಪುಷ್ಪಾ ಅರುಣ್‌ ಕುಮಾರ್‌, ‘ಇದೇ ಕಾರಣಕ್ಕೆ ಕಂಪೌಂಡ್‌ ಹಾಕಿದ್ದೇನೆ’ ಎಂದಿದ್ದರು. ಆದರೆ, ಅದನ್ನು ಒಡೆದು ಜಿಪಿಎ ಹೋಲ್ಡರ್‌ ದೇವರಾಜ್‌, ತಂತಿಬೇಲಿ ಹಾಕಿದ್ದರು. ಶನಿವಾರ ದೇವರಾಜು ಹಾಕಿದ್ದ ತಂತಿ ಬೇಲಿಯನ್ನು ಯಶ್‌ ತಾಯಿ ತೆರವುಗೊಳಿಸಿದ್ದರು. ಮತ್ತೆ ನಿವೇಶನಕ್ಕೆ ಕಾಂಪೌಂಡ್ ಹಾಕಲು ತಯಾರಿ ಮಾಡಿಕೊಂಡಿದ್ದರು. ಕೋರ್ಟ್ ಆದೇಶವಿದೆ ಎಂದು ದೇವರಾಜು ಹಾಕಿದ್ದ ಫಲಕವನ್ನು ಪುಷ್ಪಾ ಕಿತ್ತು ಹಾಕಿದ್ದಾರೆ. ಇದೇ ವೇಳೆ ಮನೆ ಮುಂದೆ ಬಂದ ದೇವರಾಜು ಅವರನ್ನು ಪುಷ್ಪಾ ತರಾಟೆ ತೆಗೆದುಕೊಂಡಿದ್ದಾರೆ.

‘ಯಾವುದೋ ಜಾಗಕ್ಕೆ ಸಂಬಂಧಿಸಿದ ದಾಖಲಾತಿ ತಂದಿದ್ದೀಯಾ. ನೀನು ಬಂದು ರೌಡಿಸಂ ಮಾಡ್ತಿದ್ದೀಯಾ. ನಾನು ಇದೇ ಊರ ಮಗಳು. ನನ್ನನ್ನು ಹೆದರಿಸೋಕೆ ಬರಬೇಡ. ಇದು ನಮ್ಮ ಜಾಗ ನಾನು ಖರೀದಿ ಮಾಡಿದ್ದೇನೆ. ಕೋರ್ಟ್ ಆದೇಶ ಇದ್ರೆ, ನ್ಯಾಯಾಲಯದ ಮೂಲಕ ಬಾ’ ಎಂದು ಪುಷ್ಪಾ ತರಾಟೆ ತೆಗೆದುಕೊಂಡರು.

ಈ ವೇಳೆ ಉತ್ತರಿಸಿದ ದೇವರಾಜು, ‘ಇದು ನಿಮ್ಮ ಜಾಗ ಎನ್ನುವುದನ್ನು ಪ್ರೂ ಮಾಡಿ. ಆ ಮೇಲೆ ನನ್ನನ್ನು ಅಪರಾಧಿ ಮಾಡಿ’ ಎಂದು ಹೇಳಿದರು.

‘ರೌಡಿಗಳನ್ನು ಕರೆದುಕೊಂಡು ರೌಡಿಸಂ ಮಾಡ್ತೀಯಾ. ನಾನು ಎಸ್ಪಿಗೆ ದೂರು ಕೊಡ್ತೀನಿ. ಇನ್ನು ಮುಂದೆ ಇಲ್ಲಿಗೆ ಕಾಲಿಟ್ಟರೆ ಸುಮ್ಮನಿರಲ್ಲ’ ಎಂದು ಪುಷ್ಪಾ ಎಚ್ಚರಿಕೆ ನೀಡಿದರು.‌

ನಿವೇಶನಕ್ಕೆ ಸಂಬಂಧಿಸಿದಂತೆ ಪುಷ್ಪಾ ಅರುಣ್‌ಕುಮಾರ್‌ ಹಾಗೂ ದೇವರಾಜು ಅವರು ಇಲ್ಲಿನ ಬಡಾವಣೆ ಠಾಣೆಯಲ್ಲಿ ದೂರು–ಪ್ರತಿದೂರು ದಾಖಲಿಸಿದ್ದಾರೆ. ಕೋರ್ಟ್ ಆದೇಶ ಪಾಲಿಸುವಂತೆ ಇಬ್ಬರಿಗೂ ಪೊಲೀಸರು ಸೂಚನೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.