ಎಸ್.ಎಂ. ಕೃಷ್ಣ ಬಡಾವಣೆಯಲ್ಲಿ ಬೃಹತ್ ವೇದಿಕೆ ನಿರ್ಮಾಣ
ಹಾಸನ: ಹಲವು ತಿರುವುಗಳನ್ನು ಪಡೆದ ಜನಕಲ್ಯಾಣ ಸಮಾವೇಶಕ್ಕೆ ನಗರ ಸಜ್ಜಾಗಿದೆ. ಇಲ್ಲಿನ ಎಸ್.ಎಂ. ಕೃಷ್ಣ ಬಡಾವಣೆಯಲ್ಲಿ ಡಿ.5ರಂದು ನಡೆಯುವ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಸಚಿವರು, ಕಾಂಗ್ರೆಸ್ ಮುಖಂಡರು ಭಾಗವಹಿಸಲಿದ್ದಾರೆ.
ಆರಂಭದಲ್ಲಿ ಸ್ವಾಭಿಮಾನಿ ಸಮಾವೇಶಕ್ಕೆ ಸಿದ್ದರಾಮಯ್ಯ ಆಪ್ತ ಸಚಿವರು ಸಿದ್ಧತೆ ಮಾಡಿಕೊಂಡಿದ್ದರು. ಹೈಕಮಾಂಡ್ ಮಧ್ಯಪ್ರವೇಶದ ನಂತರ ಕೆಪಿಸಿಸಿ ಹಾಗೂ ಸ್ವಾಭಿಮಾನಿ ಸಂಘಟನೆಗಳ ಒಕ್ಕೂಟಗಳ ಆಶ್ರಯದಲ್ಲಿ ಸಮಾವೇಶ ನಡೆಸಲಾಗುತ್ತಿದ್ದು, ಇದೀಗ ಜನಕಲ್ಯಾಣ ಸಮಾವೇಶವಾಗಿ ಮಾರ್ಪಟ್ಟಿದೆ.
ನಗರದ ಅರಸೀಕೆರೆ ರಸ್ತೆಯ ಎಸ್.ಎಂ. ಕೃಷ್ಣ ಬಡಾವಣೆಯಲ್ಲಿ ಬೃಹತ್ ವೇದಿಕೆ ನಿರ್ಮಿಸಲಾಗಿದ್ದು, ಸುಮಾರು 480 ಅಡಿ ಅಗಲ 600 ಅಡಿ ಉದ್ದದ ಪ್ರದೇಶದಲ್ಲಿ ಟೆಂಟ್ ನಿರ್ಮಾಣ ಮಾಡಲಾಗಿದೆ.
ಸುಮಾರು 70 ಸಾವಿರ ಜನ ಕೂರಲು ಆಸನದ ವ್ಯವಸ್ಥೆ ಮಾಡಲಾಗಿದ್ದು, ಮೂರು ವೇದಿಕೆ ನಿರ್ಮಿಸಲಾಗಿದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು, ಹಿರಿಯ ನಾಯಕರು ಪ್ರಧಾನ ವೇದಿಕೆಯಲ್ಲಿ ಕಾಣಿಸಿ ಕೊಳ್ಳಲಿದ್ದು, ಎರಡೂ ಬದಿಯಲ್ಲಿ ನಿರ್ಮಿಸಿರುವ ಪರ್ಯಾಯ ವೇದಿಕೆಗಳಲ್ಲಿ ಕಾಂಗ್ರೆಸ್ ಮುಖಂಡರು, ಶಾಸಕರಿಗೆ ವ್ಯವಸ್ಥೆ ಮಾಡಲಾಗಿದೆ.
ಗುರುವಾರ ಮಧ್ಯಾಹ್ನ ಆರಂಭ ವಾಗಲಿರುವ ಕಾಂಗ್ರೆಸ್ ಸಮಾವೇಶಕ್ಕೆ ಸ್ವಾಭಿಮಾನಿ ಒಕ್ಕೂಟಗಳು ಬೆಂಬಲ ನೀಡಿದ್ದು, ಸಮಾವೇಶದಲ್ಲಿ ಪಕ್ಷದ ಅಗ್ರಗಣ್ಯ ನಾಯಕರು ಭಾಗವಹಿಸ ಲಿರುವುದರಿಂದ ಬೃಹತ್ ಕಟೌಟ್, ಫ್ಲೆಕ್ಸ್ ಅಳವಡಿಸಲಾಗಿದೆ. ಸಮಾವೇಶ ನಡೆಯುವ ರಸ್ತೆಯ ಉದ್ದಕ್ಕೂ ಬಂಟಿಂಗ್ ಗಳು ರಾರಾಜಿಸುತ್ತಿವೆ.
ಸಮಾವೇಶಕ್ಕೆ ಶುಭಕೋರಿ ಕೈ ನಾಯಕರಿಂದ ವಿವಿಧ ರೀತಿಯ ಫ್ಲೆಕ್ಸ್ ಅಳವಡಿಕೆ ಮಾಡಲಾಗಿದೆ. ಜನಾಂದೋಲನ ಸಮಾವೇಶ, ಶೋಷಿತ ವರ್ಷಗಳ ಸ್ವಾಭಿಮಾನಿ ಸಮಾವೇಶ ಹೆಸರಿನಲ್ಲಿ ನಗರದ ಪ್ರಮುಖ ರಸ್ತೆ, ಸಮಾವೇಶ ನಡೆಯುವ ಸ್ಥಳದ ಸುತ್ತ ಸೇರಿದಂತೆ ಬೆಂಗಳೂರಿನಿಂದ ಹಾಸನಕ್ಕೆ ಬರುವ ಹೆದ್ದಾರಿ ಪಕ್ಕದಲ್ಲಿ ಫ್ಲೆಕ್ಸ್ ಹಾಕಲಾಗಿದೆ.
2 ಸಾವಿರ ಪೊಲೀಸರ ನಿಯೋಜನೆ: ಕಾಂಗ್ರೆಸ್ ಜನಕಲ್ಯಾಣ ಸಮಾವೇಶದಲ್ಲಿ ಲಕ್ಷಕ್ಕೂ ಅಧಿಕ ಜನರು ಭಾಗವಹಿಸುವ ನಿರೀಕ್ಷೆ ಇದ್ದು, ಗಣ್ಯರು ಭಾಗವಹಿಸಲಿರುವುದರಿಂದ ಜಿಲ್ಲಾ ಪೊಲೀಸ್ ಇಲಾಖೆಯು ಬಿಗಿಭದ್ರತೆ ಕೈಗೊಂಡಿದ್ದು, 2 ಸಾವಿರಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಿದೆ.
ಐವರು ಎಸ್ಪಿ, ಆರು ಮಂದಿ ಎಎಸ್ಪಿ, 12 ಮಂದಿ ಡಿವೈಎಸ್ಪಿ, 30ಕ್ಕೂ ಹೆಚ್ಚು ಇನ್‌ಸ್ಪೆಕ್ಟರ್‌ಗಳು, 80ಕ್ಕೂ ಹೆಚ್ಚು ಸಬ್ ಇನ್‌ಸ್ಪೆಕ್ಟರ್‌ಗಳ ನೇತೃತ್ವದಲ್ಲಿ ಭದ್ರತೆ ವ್ಯವಸ್ಥೆ ಮಾಡಲಾಗಿದೆ.
ಹಳೆಯ ಮೈಸೂರು ಭಾಗದ ಜೆಡಿಎಸ್ ಭದ್ರಕೋಟೆ ಹಾಸನದಲ್ಲಿ ಸಮಾವೇಶ ನಡೆಯುತ್ತಿದ್ದು, ರಾಜ್ಯದ ಕುತೂಹಲ ಕೆರಳಿಸಿದೆ.
ಜೆಡಿಎಸ್‌ನ ಭದ್ರಕೋಟೆ ಎಂದೇ ಖ್ಯಾತವಾಗಿರುವ ಹಾಸನದಲ್ಲಿ ಸಮಾವೇಶ ಆಯೋಜಿಸುವ ಮೂಲಕ ಕಾಂಗ್ರೆಸ್ ತನ್ನ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಸಿದ್ಧತೆ ನಡೆಸಿದೆ. ‘ಜಿಲ್ಲೆಯಲ್ಲಿ ಒಬ್ಬರೇ ಶಾಸಕರಿದ್ದು, ನಮ್ಮ ಮನೆಯನ್ನು ತುಂಬಿಸಲು ಸಮಾವೇಶ ಆಯೋಜನೆ ಮಾಡಲಾಗುತ್ತಿದೆ’ ಎಂದು ಸ್ವತಃ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಸಮಾವೇಶದಲ್ಲಿ ಹಲವು ಮುಖಂಡರು ಕಾಂಗ್ರೆಸ್‌ಗೆ ಸೇರ್ಪಡೆಯಾಗುವ ಸಾಧ್ಯತೆಗಳಿದ್ದು, ಯಾರು ಪಕ್ಷಕ್ಕೆ ಸೇರಲಿದ್ದಾರೆ ಎನ್ನುವುದು ಸಮಾವೇಶದಲ್ಲೇ ತಿಳಿಯಲಿದೆ ಎಂದು ಕಾಂಗ್ರೆಸ್ ಮುಖಂಡರು ಹೇಳುತ್ತಿದ್ದಾರೆ.
ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವದಲ್ಲಿ ಸೇರಿದಂತೆ ಇಲ್ಲಿಯೂ ಜನ ಸೇರುವ ನಿರೀಕ್ಷೆ ಇದೆ. ಈ ಸಮಾವೇಶವೂ ಹಾಸನದಲ್ಲಿ ಇತಿಹಾಸ ಸೃಷ್ಟಿಸುವುದರಲ್ಲಿ ಸಂಶಯ ಇಲ್ಲ..ಕೆ.ಎನ್. ರಾಜಣ್ಣ, ಜಿಲ್ಲಾ ಉಸ್ತುವಾರಿ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.