
ಆಲೂರು: ತಾಲ್ಲೂಕು ಕೇಂದ್ರ ಹಾಗೂ ಪಟ್ಟಣದ ಸೌಂದರ್ಯಕ್ಕೆ ಧಕ್ಕೆಯಾಗಿದ್ದ ಬೀದಿಬದಿ ಅಂಗಡಿಗಳನ್ನು ಸೋಮವಾರ ಪಟ್ಟಣ ಪಂಚಾಯಿತಿ ಸಿಬ್ಬಂದಿ ತೆರವು ಮಾಡಿದರು. ಇನ್ನಾದರೂ ತಾಲ್ಲೂಕು ಕೇಂದ್ರವಾದ ಪಟ್ಟಣ ಅಂದ ಚೆಂದವಾಗಿರಲಿ ಎಂದು ಸಾರ್ವಜನಿಕರು ಆಶಿಸಿದರೆ, ಬೀದಿಬದಿ ವ್ಯಾಪಾರಿಗಳು ಜೀವನದ ಬಗ್ಗೆ ಚಿಂತಿಸುತ್ತ ಅಸಹಾಯಕರಾಗಿ ನಿಂತಿದ್ದರು.
ಕಾರ್ಯಾಚರಣೆ ಸಂದರ್ಭದಲ್ಲಿ ವ್ಯಾಪಾರಿಗಳು ಮತ್ತು ಅಧಿಕಾರಿಗಳ ನಡುವೆ ಮಾತಿನ ಚಕಮುಕಿ ನಡೆಯಿತು. ಪಟ್ಟಣದ ಮಸೀದಿವರೆಗೂ ಎರಡೂ ಬದಿ ಒತ್ತುವರಿ ಮಾಡಿರುವ ಅಂಗಡಿಗಳನ್ನು ತೆರವುಗೊಳಿಸಬೇಕು. ಕೇವಲ ಆಸ್ಪತ್ರೆ ಮುಂದೆ ಮಾತ್ರ ಕಾರ್ಯಾಚರಣೆ ಮಾಡಿ ಸ್ಥಗಿತಗೊಳಿಸಿದರೆ ಒಪ್ಪಲಾಗದು ಎಂದು ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಆದೇಶದ ಅನುಸಾರ ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿಯಾಗಿರುವ ತಹಶೀಲ್ದಾರ್ ಮಲ್ಲಿಕಾರ್ಜುನ್ ಮತ್ತು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುನಾಥ್ ನೇತೃತ್ವದಲ್ಲಿ ಸಿಬ್ಬಂದಿ ಕಾರ್ಯಾಚರಣೆ ನಡೆಸಲು ಮುಂದಾದರು.
ಈಗಾಗಲೇ ಹಲವು ಬಾರಿ ಬೀದಿಬದಿ ವ್ಯಾಪಾರಿಗಳೊಂದಿಗೆ ಸಭೆಗಳನ್ನು ನಡೆಸಿದ್ದು, ಬೀದಿ ಬದಿ ಇಟ್ಟುಕೊಂಡಿರುವ ಅಂಗಡಿಗಳನ್ನು ತೆರವುಗೊಳಿಸಬೇಕೆಂಬ ಸೂಚನೆ ಕೊಡಲಾಗಿತ್ತು. ಯಾರೂ ಸ್ಪಂದಿಸದ ಕಾರಣ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಕಾರ್ಯಾಚರಣೆ ಮುಗಿದ ನಂತರ ವ್ಯಾಪಾರಿಗಳ ಸಭೆ ಕರೆದು ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುನಾಥ್ ಹೇಳಿದರು.
ಬೀದಿಬದಿ ವ್ಯಾಪಾರಿಗಳಿಗೆ ತೊಂದರೆ ಆಗದಂತೆ ಸದ್ಯದಲ್ಲೇ ಸಭೆ ಮಾಡಿ ಎಲ್ಲರಿಗೂ ಅವಕಾಶ ಕಲ್ಪಿಸಲಾಗುವುದುಸಿಮೆಂಟ್ ಮಂಜು ಶಾಸಕ
ಮಸೀದಿವರೆಗಿನ ಖಾಲಿ ಜಾಗ ಬಳಸಿಕೊಳ್ಳಲಿ. ಸೂಕ್ತ ಸ್ಥಳ ಗುರುತಿಸಿ ಬೀದಿಬದಿ ವ್ಯಾಪಾರಿಗಳಿಗೆ ಅಂಗಡಿ ನಿರ್ಮಾಣ ಮಾಡಿಕೊಡಬೇಕುಕೆ.ಬಿ. ವಿಕಾಸ್ ಕಿಗ್ಗಟ್ಟ ನಿವಾಸಿ
ಪಾರ್ಕಿಂಗ್ ತೊಂದರೆ ಇದೆ. ಮಸೀದಿವರೆಗೆ ಮತ್ತು ಹಳೆ ಎಸ್‌ಬಿಎಂ ವೃತ್ತದಲ್ಲಿ ಮಾರುಕಟ್ಟೆ ನಿರ್ಮಿಸಿ ವ್ಯಾಪಾರಿಗಳಿಗೆ ಅನುಕೂಲ ಕಲ್ಪಿಸಬೇಕುಅರಸಪ್ಪ ದಲಿತ ಸಂಘಟನೆ ಮುಖಂಡ
ಅಂಗಡಿ ತೆರವುಗೊಳಿಸಿದ್ದು ಜೀವನ ಕಷ್ಟವಾಗಿದೆ. ಪಂಚಾಯಿತಿ ನಿರ್ಮಾಣ ಮಾಡಿರುವ ಕಟ್ಟಡಗಳು ರಸ್ತೆಗೆ ಚಾಚಿವೆ. ಅವುಗಳನ್ನು ಸಹ ತೆರವುಗೊಳಿಸಬೇಕುಅವಿನಾಶ್ ಹಣ್ಣಿನ ವ್ಯಾಪಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.