
ಆಲೂರು: ‘ಆಂಬುಲೆನ್ಸ್‌ಗಳಲ್ಲಿ ಅಗತ್ಯವಿರುವ ತುರ್ತು ಔಷಧಗಳನ್ನು ಜಾಗ್ರತೆಯಿಂದ ಸಂಗ್ರಹಿಸಿ ತಕ್ಷಣಕ್ಕೆ ಕೈಗೆ ಪಡೆದು ಉಪಚರಿಸುವಂತಿರಬೇಕು. ಕರ್ತವ್ಯಕ್ಕೆ ಸದಾ ಸಿದ್ಧರಿರಬೇಕು’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ನಿಸಾರ್ ಫಾತಿಮ ಅವರು ದಾದಿಯರು ಮತ್ತು ಚಾಲಕರಿಗೆ ಸೂಚನೆ ನೀಡಿದರು.
ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿರುವ ಮೂರು ಆಂಬುಲೆನ್ಸ್‌ಗಳಲ್ಲಿ ದಾಸ್ತಾನು ಮಾಡಿರುವ ಜೀವರಕ್ಷಕ ಔಷಧಿ ಇನ್ನಿತರ ಅಗತ್ಯ ಸಲಕರಣೆಗಳನ್ನು ಪರಿಶೀಲಿಸಿದರು.
ಪರಿಶೀಲನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಆಂಬುಲೆನ್ಸ್‌ನಲ್ಲಿ ಯಾವಾಗಲೂ ತುರ್ತು ಚಿಕಿತ್ಸೆ ಅಗತ್ಯವಿರುವ ರೋಗಿಗಳನ್ನು ಮತ್ತೊಂದು ಆಸ್ಪತ್ರೆಗೆ ರವಾನಿಸಬೇಕಾಗುತ್ತದೆ. ಗರ್ಭಿಣಿಯರು, ತಾಯಂದಿರು, ಮಕ್ಕಳು ಇನ್ನಿತರ ರೋಗಿಗಳನ್ನು ರವಾನಿಸುವ ಸಂದರ್ಭದಲ್ಲಿ ರಕ್ತಸ್ರಾವವಾದರೆ, ಕೂಡಲೆ ಚಿಕಿತ್ಸೆ ನೀಡಬೇಕಾಗುತ್ತದೆ. ಈ ಕಾರಣದಿಂದ ತುರ್ತಾಗಿ ಮತ್ತೊಂದು ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ತುರ್ತು ಜೀವರಕ್ಷಕ ಔಷಧಿಗಳು, ಆಕ್ಸಿಜನ್, ಶುಚಿಯಾಗಿರುವ ಹಾಸಿಗೆ, ಬೆಡ್‍ಶೀಟ್ ಸೇರಿದಂತೆ ಹಲವು ಉಪಕರಣಗಳನ್ನು ಇರಿಸಲಾಗುವುದು’ ಎಂದರು.
‘ದಿನದ 24 ಗಂಟೆಯೂ ಚಾಲಕ, ದಾದಿಯರು ಸದಾ ಸಿದ್ಧರಿರುತ್ತಾರೆ. ರೋಗಿ ಪರಿಸ್ಥಿತಿ ಬಿಗಡಾಯಿಸಿದಾಗ ಅಗತ್ಯವೆನಿಸಿದರೆ ರೋಗಿ ಜೊತೆ ಮತ್ತೊಬ್ಬ ದಾದಿಯನ್ನು ಕಳುಹಿಸಿಕೊಡಲಾಗುವುದು. ಸದ್ಯ ಆಸ್ಪತ್ರೆಯಲ್ಲಿ ಮೂರು ಆಂಬುಲೆನ್ಸ್ ಕಾರ್ಯ ನಿರ್ವಹಿಸುತ್ತಿವೆ. ಯಾವುದೇ ಗಳಿಗೆಯಲ್ಲಿ ಸೇವೆಗೆ ಸಿದ್ಧವಾಗಿವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.