ADVERTISEMENT

ಚನ್ನರಾಯಪಟ್ಟಣ: ವಿಜೃಂಭಣೆಯಿಂದ ಜರುಗಿದ ಅನ್ನಪೂಣೇಶ್ವರಿ ದೇವಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 19 ಜುಲೈ 2025, 5:33 IST
Last Updated 19 ಜುಲೈ 2025, 5:33 IST
ಚನ್ನರಾಯಪಟ್ಟಣ ತಾಲ್ಲೂಕಿನ ಕಲ್ಲೇನಹಳ್ಳಿಯಲ್ಲಿ ಅನ್ನಪೂಣೇಶ್ವರಿ ದೇವಿಯ ರಥೋತ್ಸವ ಶುಕ್ರವಾರ ಜರುಗಿತು
ಚನ್ನರಾಯಪಟ್ಟಣ ತಾಲ್ಲೂಕಿನ ಕಲ್ಲೇನಹಳ್ಳಿಯಲ್ಲಿ ಅನ್ನಪೂಣೇಶ್ವರಿ ದೇವಿಯ ರಥೋತ್ಸವ ಶುಕ್ರವಾರ ಜರುಗಿತು   

ಚನ್ನರಾಯಪಟ್ಟಣ: ತಾಲ್ಲೂಕಿನ ದಂಡಿಗನಹಳ್ಳಿ ಹೋಬಳಿ ಕಲ್ಲೇನಹಳ್ಳಿಯಲ್ಲಿ ಪ್ರತಿವರ್ಷ ಆಷಾಢ ಮಾಸದಲ್ಲಿ ನಡೆಯುವ ಒಳನಾಡು ಅನ್ನಪೂಣೇಶ್ವರಿ ದೇವಿಯ ರಥೋತ್ಸವ ಶುಕ್ರವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.

ಆಷಾಢ ಮಾಸದ ಕಡೆ ಶುಕ್ರವಾರ ಅಭಿಜಿನ್ ಮುಹೂರ್ತದಲ್ಲಿ ರಥೋತ್ಸವ ಜರುಗಿತು. ದೇವಸ್ಥಾನದಲ್ಲಿ ಬೆಳಿಗ್ಗೆ ದೇವಿಗೆ ಸುಪ್ರಭಾತ, ಅಭಿಷೇಕ, ಮೂಲ ಮಂತ್ರಹೋಮ, ಪೂರ್ಣಾಹುತಿ ನೆರವೇರಿಸಲಾಯಿತು. ಸಹಸ್ರನಾಮ ಪಾರಾಯಣ, ಅರ್ಚನೆಯೊಂದಿಗೆ ಪೂಜೆ ಮಾಡಲಾಯಿತು.

ದೇವಿಯ ಉತ್ಸವ ಮೂರ್ತಿಯನ್ನು ಮೆರವಣಿಗೆ ಮಾಡಿದ ಬಳಿಕ ಅಲಂಕೃತ ರಥದಲ್ಲಿ ಪ್ರತಿಷ್ಠಾಪಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ADVERTISEMENT

ಭಕ್ತರು ಘೋಷಣೆ ಮೊಳಗಿಸುತ್ತ ತೇರನ್ನು ಎಳೆದರು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ತೇರಿನ ಕಳಸಕ್ಕೆ ಬಾಳೆ ಹಣ್ಣು ಎಸೆದು ಭಕ್ತಿ ಸಮರ್ಪಿಸಿದರು. ರಥದ ಚಕ್ರಕ್ಕೆ ತೆಂಗಿನಕಾಯಿ ಅರ್ಪಿಸಿ ಹರಕೆ ತೀರಿಸಿದರು.

ಮಂಗಳವಾದ್ಯ ಮತ್ತು ಸೋಮನಕುಣಿತದೊಂದಿಗೆ ರಥ ಸಾಗಿತು. ಚನ್ನರಾಯಪಟ್ಟಣ ತಾಲ್ಲೂಕು ಸೇರಿ ಹಾಸನ ಜಿಲ್ಲೆಯ ನಾನಾ ಭಾಗಗಳಿಂದ ಭಕ್ತರು ಆಗಮಿಸಿದ್ದರು. ರಥೋತ್ಸವದ ಅಂಗವಾಗಿ ದೇವಸ್ಥಾನಕ್ಕೆ ಹೂವಿನ ಅಲಂಕಾರ ಮಾಡಲಾಗಿತ್ತು. ದೇಗುಲಕ್ಕೆ ಮಾಡಿದ್ದ ವಿದ್ಯುದೀಪಾಲಂಕಾರ ಜಾತ್ರಾ ಮಹೋತ್ಸವದ ಮೆರುಗು ಹೆಚ್ಚಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.