ADVERTISEMENT

ಅರಕಲಗೂಡು: ಜಾನುವಾರುಗಳ ಸಂಖ್ಯೆಯಲ್ಲಿ ಇಳಿಮುಖ

​ಪ್ರಜಾವಾಣಿ ವಾರ್ತೆ
Published 13 ಜೂನ್ 2025, 16:10 IST
Last Updated 13 ಜೂನ್ 2025, 16:10 IST
ಡಾ.ಎ.ಡಿ.ಶಿವರಾಮ್
ಡಾ.ಎ.ಡಿ.ಶಿವರಾಮ್   

ಅರಕಲಗೂಡು: 20ನೇ ಜಾನುವಾರು ಗಣತಿಗೆ ಹೋಲಿಸಿದರೆ 21ನೇ ಜಾನುವಾರು ಗಣತಿಯಲ್ಲಿ ತಾಲ್ಲೂಕಿನಲ್ಲಿ ಜಾನುವಾರುಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ ಎಂದು ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಎ.ಡಿ.ಶಿವರಾಮ್ ತಿಳಿಸಿದರು.

79 ಸಾವಿರ ಇದ್ದ ಹಸುಗಳ ಸಂಖ್ಯೆ73 ಸಾವಿರಕ್ಕೆ ಹಾಗೂ 15 ಸಾವಿರ ಇದ್ದ ಎಮ್ಮೆಗಳ ಸಂಖ್ಯೆ 6300 ಕ್ಕೆ ಇಳಿದಿದೆ. ಒಟ್ಟು 94,195 ಇದ್ದ ಜಾನುವಾರುಗಳ ಸಂಖ್ಯೆ 80 ಸಾವಿರಕ್ಕೆ ಇಳಿದಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಹಂದಿಗಳ ಸಂಖ್ಯೆ 670 ಇದ್ದದ್ದು 420 ಕ್ಕೆ ಇಳಿದಿದೆ. ಇದೇ ವೇಳೆ ಕೋಳಿ ಸಾಕಾಣೆ ಹೆಚ್ಚಾಗಿದ್ದು, 1050 ಇದ್ದ ಸಂಖ್ಯೆ 54,888ಕ್ಕೆ ಏರಿಕೆಯಾಗಿದೆ. ನಾಯಿ ಸಾಕಾಣಿಕೆಯೂ ಹೆಚ್ಚಳವಾಗಿದ್ದು 2,464 ಇದ್ದದ್ದು 2,900ಕ್ಕೆ ಹೆಚ್ಚಳವಾಗಿದೆ. ಬೀದಿ ನಾಯಿಗಳ ಸಂಖ್ಯೆ ನಿಖರವಾಗಿ ತಿಳಿದಿಲ್ಲ ಎಂದರು.

ADVERTISEMENT

ಯಾಂತ್ರೀಕೃತ ಬೇಸಾಯ ಪದ್ಧತಿಯ ಪರಿಣಾಮ ನಾಟಿ ತಳಿಗಳ ಜಾನುವಾರುಗಳ ಸಾಕಣೆ ಕಡಿಮೆಯಾಗಿದೆ. ಹೈನುಗಾರಿಕೆ ಲಾಭದಾಯಕವಾಗುತ್ತಿರುವ ಕಾರಣ ಹೆಚ್ಚು ಹಾಲು ಕೊಡುವ ವಿದೇಶಿ ತಳಿಗಳ ಹಸುಗಳನ್ನು ಸಾಕಲು ರೈತರು ಒಲವು ತೋರುತ್ತಿದ್ದಾರೆ ಎಂದರು.

ಕಳೆದ ಏಪ್ರಿಲ್ ತಿಂಗಳಲ್ಲಿ ಹಮ್ಮಿಕೊಂಡಿದ್ದ 7ನೇ ಸುತ್ತಿನ ಕಾಲುಬಾಯಿ ಜ್ವರ ಮತ್ತು ಚರ್ಮಗಂಟು ರೋಗದ ವಿರುದ್ಧದ ಲಸಿಕಾ ಅಭಿಯಾನದಲ್ಲಿ ಶೇ 99.9 ರಷ್ಟು ಗುರಿಸಾಧನೆಯಾಗಿದೆ. 80,102 ಜಾನುವಾರುಗಳಿಗೆ ಕಾಲು ಬಾಯಿ ಜ್ವರದ ಲಸಿಕೆ ಹಾಕುವ ಗುರಿ ಇದ್ದು, 79,758 ಜಾನುವಾರುಗಳಿಗೆ ರೈತರ ಮನೆ ಬಾಗಿಲಿಗೆ ತೆರಳಿ ಲಸಿಕೆ ಹಾಕಲಾಗಿದೆ. 73,772 ರಾಸುಗಳಿಗೆ ಚರ್ಮಗಂಟು ರೋಗದ ವಿರುದ್ಧ ಲಸಿಕೆ ಗುರಿ ಇದ್ದು, 69,732 ರಾಸುಗಳಿಗೆ ಲಸಿಕೆ ಹಾಕಲಾಗಿದೆ. 2030 ರವೇಳೆಗೆ ದೇಶವನ್ನು ಕಾಲುಬಾಯಿ ಜ್ವರ ಮುಕ್ತ ದೇಶವನ್ನಾಗಿಸುವ ಗುರಿ ಹೊಂದಲಾಗಿದೆ. ಇದರಿಂದ ವಿದೇಶಗಳಲ್ಲಿ ಭಾರತದ ಹಾಲಿಗೆ ಬೇಡಿಕೆ ಹೆಚ್ಚಲಿದ್ದು, ರೈತರಿಗೆ ಆರ್ಥಿಕವಾಗಿ ಲಾಭದಾಯಕವಾಗಲಿದೆ. ಪಶುವೈದ್ಯರ ಕೊರತೆ ನಡುವೆಯೂ ಲಸಿಕಾ ಅಭಿಯಾನ ಯಶಸ್ವಿಯಾಗಿ ನಡೆಸಿದ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.

ತಾಲ್ಲೂಕಿನಲ್ಲಿ ಎರಡು ಪಶುಚಿಕಿತ್ಸಾ ಆಂಬುಲೆನ್ಸ್‌ಗಳಿದ್ದು, ಇವು ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ಕಾರ್ಯ ನಿರ್ವಹಿಸಲಿವೆ. 1962 ಸಹಾಯವಾಣಿಗೆ ಕರೆಮಾಡಿದರೆ ಉಚಿತ ಸೇವೆ ಒದಗಿಸಲಾಗುವುದು. ತಾಲ್ಲೂಕಿನ ರೈತರು ಇದರ ಉಪಯೋಗ ಪಡೆಯುವಂತೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.