ಅರಸೀಕೆರೆ: ಸನಾತನ ಧರ್ಮವನ್ನು ಪುನಶ್ಚೇತನಗೊಳಿಸಲು ಅವತರಿಸಿದ ಶಂಕರಚಾರ್ಯರ ಬಗ್ಗೆ ಪ್ರತಿಯೊಬ್ಬರು ಅರಿಯಬೇಕು. ಅವರ ದೈವೀ ಕಾರ್ಯಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಭಕ್ತ ವೃಂದ ಮುಂದಾಗಬೇಕು ಎಂದು ಕೆ.ಆರ್ ನಗರದ ಯಡತೊರೆ ಯೋಗನಂದೇಶ್ವರ ಸರಸ್ವತೀ ಮಠದ ಶಂಕರ ಭಾರತೀ ಸ್ವಾಮೀಜಿ ಹೇಳಿದರು.
ನಗರದ ವಿದ್ಯಾನಗರ ಬಡಾವಣೆಯಲ್ಲಿರು ಮಾರುತಿ ಸಚ್ಚಿದಾನಂದ ಆಶ್ರಮದ ಸಪರಿವಾರ ಲಕ್ಷ್ಮಿನರಸಿಂಹ ದೇವರ ವಿಷ್ಣು ಪಂಚಾಯತನ ಕ್ಷೇತ್ರಕ್ಕೆ ಭೇಟಿ ನೀಡಿದ ಅವರು, ಪರಂಪರಾವಧೂತ ಸತೀಶ್ ಶರ್ಮಾಜೀ ಮಹಾರಾಜರ ಉಪಸ್ಥಿತಿಯಲ್ಲಿ ಆಯೋಜಿಸಿದ್ದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಯಾರು ಅಧ್ಯಾತ್ಮದಲ್ಲಿ ಸಾಧನೆಗೈದು ಧರ್ಮ ಸಂಸ್ಥಾಪನೆಗಾಗಿ ಅವಿರತ ಸೇವೆ ಮಾಡುತ್ತಾರೋ ಅವರಿಗೆ ಮಾತ್ರ ಆಯಸ್ಸು ಪೂರ್ಣ ಗುರುಗಳಿಗೆ ವಂದಿಸುವ ಸೌಭಾಗ್ಯ ದೊರೆಯುತ್ತದೆ. ಪ್ರತಿಯೊಬ್ಬ ಮನುಷ್ಯನು ಪ್ರತಿನಿತ್ಯ ಕೆಲಸಗಳನ್ನು ಮಾಡುವುದೇ ಗುರಿಯಲ್ಲ, ಆ ಕೆಲಸಗಳ ಮೂಲಕ ಶಾಶ್ವತವಾಗಿ ನೆಮ್ಮದಿ ಆನಂದ ಪಡೆಯುವುದೇ ಗುರಿಯಾಗಬೇಕು ಎಂದು ಹೇಳಿದರು.
ಕೇವಲ ಲೌಕಿಕವಾದ ಕಾರ್ಯಗಳಿಗೆ ಗಮನ ನೀಡದೇ, ದೈವೀ ಕಾರ್ಯಗಳ ಬಗ್ಗೆಯೂ ಗಮನ ಹರಿಸಬೇಕು. 1,200 ವರ್ಷಗಳ ಹಿಂದೆ ಶಂಕರಾಚಾರ್ಯರು ಜನಿಸಿ ಮಾಡಿದ ಧರ್ಮ ಸಂಸ್ಥಾಪನೆ, ಉಪದೇಶದ ಅವಶ್ಯಕತೆ ಇಂದಿಗೂ ಇದೆ. ಧಾರ್ಮಿಕ ಸಭೆ ಸಮಾರಂಭಗಳಲ್ಲಿ ಕುಟುಂಬ ಸಮೇತ ಭಾಗವಹಿಸಬೇಕು. ಆಗ ಮಾತ್ರ ಧರ್ಮ ಸಂರಕ್ಷಣೆಯಾಗಲು ಸಾಧ್ಯವಾಗುತ್ತದೆ. ಗಲ್ಲಿ– ಗಲ್ಲಿಯಲ್ಲಿ ಶಂಕರಾಚಾರ್ಯರ ಜೀವನ ಚರಿತ್ರೆಯ ಆಂದೋಲವಾಗಲಿ ಎಂದರು.
ಸೀತಾ ಮಹಿಳಾ ಸಂಘದ ಸದಸ್ಯರು ಸಾಮೂಹಿಕವಾಗಿ ವಿವಿಧ ಭಕ್ತಿಗೀತೆಗಳನ್ನು ಹೇಳಿದರು. ಲಕ್ಷ್ಮಿನರಸಿಂಹ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಮತ್ತು ಅವಧೂತ ಶಿಷ್ಯ ಬಳಗದೊಂದಿಗೆ ನೂರಾರು ಭಕ್ತರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.