
ಹಾಸನ: ಓಲಾ, ಊಬರ್, ರಾಪಿಡೋ ಕಾರ್ಯಾಚರಣೆ ಸ್ಥಗಿತಕ್ಕೆ ಆಗ್ರಹಿಸಿ ಆಟೊ ಚಾಲಕರ ಮಜ್ದೂರ್ ಸಂಘದ ಸದಸ್ಯರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಹೊರಟ ಪ್ರತಿಭಟನಾಕಾರರು ಎನ್.ಆರ್. ವೃತ್ತದ ಮೂಲಕ ಸಾಗಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕೆಲ ಕಾಲ ಧರಣಿ ನಡೆಸಿದರು.
ಈ ವೇಳೆ ಸಂಘದ ಉಪಾಧ್ಯಕ್ಷ ಎಚ್.ಕೆ. ದಿಲೀಪ್ ಮಾತನಾಡಿ, ‘ಜಿಲ್ಲೆಯ ಸಾವಿರಾರು ಆಟೊ ಚಾಲಕರು ತಮ್ಮ ಕುಟುಂಬದ ಜೀವನೋಪಾಯವನ್ನು ಆಟೊ ರಿಕ್ಷಾ ಅವಲಂಬಿಸಿದ್ದಾರೆ. ಸರ್ಕಾರದಿಂದ ಯಾವುದೇ ಸೌಲಭ್ಯವಿಲ್ಲದೆ ಬದುಕು ನಡೆಸುತ್ತಿರುವ ನಡುವೆ ಖಾಸಗಿ ಅಗ್ರಿಗೇಟರ್ ಕಂಪನಿಗಳ ದೌರ್ಜನ್ಯದಿಂದ ನಲುಗಿದ್ದೇವೆ’ ಎಂದು ದೂರಿದರು.
‘ನಾವು ಅಸಂಘಟಿತ ಕಾರ್ಮಿಕ ವರ್ಗಕ್ಕೆ ಸೇರಿದ್ದೇವೆ. ಸರ್ಕಾರಿ ಅಥವಾ ಖಾಸಗಿ ಉದ್ಯೋಗ ದೊರೆಯದೆ ಜೀವನೋಪಾಯಕ್ಕಾಗಿ ಆಟೊ ಚಾಲನೆ ಆರಂಭಿಸಿದ್ದೇವೆ. ಆದರೆಕ ಈಗ ಓಲಾ, ಊಬರ್, ರಾಪಿಡೋ ಮುಂತಾದ ಕಂಪನಿಗಳು ನಮ್ಮ ದುಡಿಮೆಗೆ ಕುತ್ತು ತಂದಿವೆ’ ಎಂದರು.
‘ಇತ್ತೀಚಿನ ದಿನಗಳಲ್ಲಿ ಈ ಅಗ್ರಿಗೇಟರ್ ಕಂಪನಿಗಳು ಆನ್‌ಲೈನ್ ಆಪ್ ಮೂಲಕ ಆಟೊ ಹಾಗೂ ಬೈಕ್ ಟ್ಯಾಕ್ಸಿ ಸೇವೆಗಳನ್ನು ನಡೆಸುತ್ತಿದ್ದು, ಇದರಿಂದ ಸ್ಥಳೀಯ ಆಟೊ ಚಾಲಕರ ಆದಾಯಕ್ಕೆ ನಷ್ಟ ಉಂಟಾಗಿದೆ. ಪ್ರತಿದಿನದ ಇಂಧನ ಖರ್ಚು, ವಾಹನ ಸಾಲ, ಮಕ್ಕಳ ಶಿಕ್ಷಣ ವೆಚ್ಚ, ಇವೆಲ್ಲವನ್ನು ಪೂರೈಸಲಾಗದೆ ಅನೇಕ ಚಾಲಕರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ಹೈಕೋರ್ಟ್ ಹಾಗೂ ರಾಜ್ಯ ಸರ್ಕಾರ ಈ ರೀತಿಯ ಖಾಸಗಿ ಸಂಸ್ಥೆಗಳ ಸೇವೆಗಳನ್ನು ನಿಷೇಧಿಸುವಂತೆ ಆದೇಶ ನೀಡಿದ್ದರೂ ಸಹ, ಓಲಾ, ಊಬರ್, ರಾಪಿಡೋ ಮುಂತಾದ ಕಂಪನಿಗಳು ಮಧ್ಯವರ್ತಿಗಳಂತೆ ಕಾರ್ಯನಿರ್ವಹಿಸುತ್ತಿವೆ. ಚಾಲಕರಿಗೆ ಹಣದ ಆಮಿಷ ತೋರಿಸಿ ಅಪ್ ಡೌನ್‌ಲೋಡ್ ಮಾಡಿಸಿ, ಸಾರ್ವಜನಿಕರ ನಡುವೆ ವೈಮನಸ್ಸು ಉಂಟುಮಾಡುವ ಪ್ರಯತ್ನ ನಡೆಯುತ್ತಿದೆ’ ಎಂದು ಆರೋಪಿಸಿದರು.
ಈ ಹಿಂದೆಯೂ ಮನವಿ ಸಲ್ಲಿಸಿದರೂ ಯಾವುದೇ ಕ್ರಮವಾಗಿಲ್ಲ. ಈಗಲಾದರೂ ಅಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಆಪ್ ಕಂಪನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಆಟೊ ಚಾಲಕರ ಮಜ್ದೂರ್ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜಾನ್, ಉಪಾಧ್ಯಕ್ಷ ಎನ್. ಕುಮಾರ್, ಎಂ.ಆನಂದ್, ಪ್ರಧಾನ ಕಾರ್ಯದರ್ಶಿ ಎಂ.ಸಿ.ಯಶ್ವಂತ್, ರಮೇಶ್, ಪವನ್, ರವಿ, ಹರೀಶ್, ಮಂಜು, ಹೆಚ್.ಕೆ. ಪ್ರದೀಪ್, ಕೆ.ಆರ್. ಶಮಂತ್, ಮೋಹನ್ ಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.