ಚನ್ನರಾಯಪಟ್ಟಣ: ರಾಷ್ಟ್ರೀಯ ಅರೋಗ್ಯ ಅಭಿಯಾನದಡಿ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ 43 ಅರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳನ್ನು ನಿರ್ಮಾಣ ಮಾಡುವ ಉದ್ದೇಶದಿಂದ ನಿವೇಶನಗಳನ್ನು ಗುರುತಿಸಬೇಕಿದ್ದು, ಕಂದಾಯ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಅಧಿಕಾರಿಗಳ ಸಭೆ ಕರೆದು ನಿವೇಶನ ಕಾಯ್ದಿರಿಸುವ ಕೆಲಸ ಮಾಡಲಾಗಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.
‘ಪ್ರಧಾನಮಂತ್ರಿ ಅಯುಷ್ಮಾನ್ ಭಾರತ್ ಮೂಲಸೌಕರ್ಯ ಮಿಷನ್’ ಯೋಜನೆಯಡಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಅರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳ ನಿರ್ಮಾಣಕ್ಕೆ ಸರ್ಕಾರಿ ಜಾಗದ ಮಾಹಿತಿ ಪಡೆಯಲು ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಈಚೆಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
‘ತಾಲ್ಲೂಕಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಲಿರುವ ಅರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳಿಗೆ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮ ಠಾಣಾ ಜಾಗ ಅಥವಾ ಕಂದಾಯ ಜಾಗವನ್ನು ಗುರುತಿಸುವ ಕೆಲಸ ಆಗಬೇಕಿದೆ. ಇದಕ್ಕಾಗಿ ಎರಡು ಇಲಾಖೆಗಳ ಅಧಿಕಾರಿಗಳ ಸಭೆಯನ್ನು ಕರೆದು ಚರ್ಚಿಸಿದ್ದು, ತಾಲ್ಲೂಕಿನಲ್ಲಿ ನಿರ್ಮಾಣವಾಗಲಿರುವ 43 ಉಪಕೇಂದ್ರಗಳಿಗೂ ಜಾಗ ಅಂತಿಮಗೊಳಿಸಿ ಅಗತ್ಯ ದಾಖಲೆಗಳನ್ನು ಕಂದಾಯ ಇಲಾಖೆ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗಳು ಅರೋಗ್ಯ ಇಲಾಖೆಗೆ ಒದಗಿಸಬೇಕು’ ಎಂದು ತಿಳಿಸಿದರು.
‘ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ ಅರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರ ನಿರ್ಮಾಣ ಮಾಡಲು ಕೇಂದ್ರ ಮುಂದಾಗಿದ್ದು, ತಾಲ್ಲೂಕು ಆಡಳಿತ ನೀಡಿದ ಜಾಗದಲ್ಲಿ ₹65 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣವಾಗಲಿದೆ. ಈಗಾಗಲೇ ಹುಲ್ಲೇನಹಳ್ಳಿ ಮತ್ತು ಸಬ್ಬನಹಳ್ಳಿ ಗ್ರಾಮಗಳಲ್ಲಿ ಜಾಗ ಅಂತಿಮಗೊಳಿಸಿ, ಟೆಂಡರ್ ಪ್ರಕ್ರಿಯೆ ಮುಗಿದು ಕಟ್ಟಡದ ಕಾಮಗಾರಿ ಪ್ರಗತಿಯಲ್ಲಿದೆ. ಉಳಿದ 12 ಕಡೆ ಜಾಗ ಅಂತಿಮಗೊಳಿಸಿ ಟೆಂಡರ್ ಪ್ರಕ್ರಿಯೆ ಹಂತದಲ್ಲಿವೆ. ಬಾಕಿ ಇರುವ 29 ಜಾಗಗಳನ್ನು ಗುರುತಿಸುವ ಕೆಲಸವಾಗಿದೆ’ ಎಂದರು.
ತಹಶೀಲ್ದಾರ್ ಜಿ.ಎಸ್. ಶಂಕರಪ್ಪ, ತಾಲ್ಲೂಕು ಪಂಚಾಯಿತಿ ಇಒ ಜಿ.ಆರ್. ಹರೀಶ್, ತಾಲ್ಲೂಕು ಅರೋಗ್ಯಾಧಿಕಾರಿ ಡಾ. ತೇಜಸ್ವಿನಿ, ಯೋಜನೆಯ ನೋಡಲ್ ಅಧಿಕಾರಿ ಪುಟ್ಟಸ್ವಾಮಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.