ADVERTISEMENT

ಬ್ರಹ್ಮ ರಥೋತ್ಸವ: ದೇಗುಲದ ಮೆಟ್ಟಿಲು ಬಳಿ ಕುರಾನ್ ಪಠಿಸಿದ ಮೇದೂರು ಖಾಜಿ

ವಿಜೃಂಭಣೆಯ ಚನ್ನಕೇಶವ ಸ್ವಾಮಿ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2023, 6:50 IST
Last Updated 4 ಏಪ್ರಿಲ್ 2023, 6:50 IST
   

ಬೇಲೂರು (ಹಾಸನ): ಇಲ್ಲಿನ ಚನ್ನಕೇಶವ ಸ್ವಾಮಿ ದೇವಸ್ಥಾನದ ಬ್ರಹ್ಮ ರಥೋತ್ಸವ ಮಂಗಳವಾರ ವಿಜೃಂಭಣೆಯಿಂದ ಜರುಗಿತು. ಸಂಪ್ರದಾಯದಂತೆ ದೇವಸ್ಥಾನದ ಮೆಟ್ಟಿಲು ಬಳಿ ಮೇದೂರು ಖಾಜಿ ಸಾಹೇಬರಿಂದ ದೇವರಿಗೆ ವಂದನೆ (ಕುರಾನ್ ಪಠಣ) ಸಲ್ಲಿಸಲಾಯಿತು.

ಬೆಳಿಗ್ಗೆ ಚನ್ನಕೇಶವಸ್ವಾಮಿ ದೇಗುಲದಲ್ಲಿ ಪೂಜಾ ವಿಧಿವಿಧಾನಗಳನ್ನು ಪೂರೈಸಿ, ರಥದ ನಾಲ್ಕು ಚಕ್ರಗಳಿಗೆ ಅನ್ನಬಲಿ ನೀಡಿ ನಂತರ ದೇಗುಲದ ಒಳಗೆ ಯಾತ್ರಾದಾನ ಸೇವೆ ನಡೆಯಿತು. ನಂತರ ಸೌಮ್ಯನಾಯಕಿ, ರಂಗನಾಯಕಿ ಸಮೇತ ದೇವರ ಉತ್ಸವ ಮೂರ್ತಿಯನ್ನು ದೇಗುಲದ ಗೋಪುರದ ಬಾಗಿಲಿನಿಂದ ಹೊರ ತಂದು ದೇಗುಲದ ಸುತ್ತ ಪ್ರದಕ್ಷಿಣೆ ಹಾಕಿಸಲಾಯಿತು. ಕೇಸರಿ ಮಂಟಪದಡಿ ಸೇವೆ ಸಲ್ಲಿಸಿ ರಥದಲ್ಲಿ ಕೂರಿಸಲಾಯಿತು. ನಂತರ ರಥ ನಿರೀಕ್ಷೆ, ಸಂಪ್ರೋಕ್ಷಣೆ, ಮಂಗಳಾರತಿ ನಡೆಸಿ, ರಥ ಮುಂಭಾಗ ಇರಿಸಿದ್ದ ಬಾಳೆಕಂದನ್ನು ಕತ್ತರಿಸಿ ರಥಕ್ಕೆ ಬಲಿ ಕೊಡಲಾಯಿತು.

ಸಂಪ್ರದಾಯದಂತೆ ದೊಡ್ಡಮೇದೂರಿನ ಮೌಲ್ವಿ ಸೈಯದ್ ಸಜ್ಜಾದ್ ಬಾಷಾ ಉರ್ದು ಭಾಷೆಯಲ್ಲಿ ದೇವರಿಗೆ ವಂದನೆ ಸಲ್ಲಿಸಿದರು. ರಥವನ್ನು ಮೂಲಸ್ಥಾನದಿಂದ ಎಳೆದು ಗೋಪುರದ ಆಗ್ನೇಯ(ಭಸ್ಮಾಸುರ ಮೂಲೆ) ದಿಕ್ಕಿನಲ್ಲಿರುವ ಬಯಲು ರಂಗಮಂದಿರದ ಬಳಿ ತಂದು ನಿಲ್ಲಿಸಲಾಯಿತು.

ADVERTISEMENT

ದೂರದ ಊರುಗಳಿಂದ ಬಂದಿದ್ದ ಸಹಸ್ರಾರು ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾದರು. ರಥಕ್ಕೆ ಬಾಳೆಹಣ್ಣು ಅರ್ಪಿಸಿದರು. ಜನರ ಸಂಖ್ಯೆ ಹೆಚ್ಚಾಗಿದ್ದು, ರಥ ಸಾಗುತ್ತಿದ್ದಂತೆಯೇ ಜೈಕಾರ ಮುಗಿಲು ಮುಟ್ಟಿತು.

ರಥದ ಮುಂದೆ ಕುರಾನ್ ಪಠಣಕ್ಕೆ ಅವಕಾಶ ನೀಡದಂತೆ ವಿಶ್ವ ಹಿಂದೂ ಪರಿಷತ್ ಒತ್ತಾಯಿಸಿತ್ತು. ನಂತರ ಧಾರ್ಮಿಕ ದತ್ತಿ ಇಲಾಖೆಯಿಂದ ಆಗಮ ಪಂಡಿತರು ಬಂದು ದಾಖಲೆಗಳನ್ನು ಪರಿಶೀಲಿಸಿದ್ದರು.‌ ಅವರ ವರದಿಯ ಆಧಾರದಲ್ಲಿ ದೇವಸ್ಥಾನದ ಮೆಟ್ಟಿಲುಗಳ ಬಳಿ ಕುರಾನ್ ಪಠಣಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.

ದೇಗುಲದ ವತಿಯಿಂದ, ಸಂಘ ಸಂಸ್ಥೆಗಳಿಂದ ಹಾಗೂ ಖಾಸಗಿ ವ್ಯಕ್ತಿಗಳಿಂದ ಮಜ್ಜಿಗೆ, ಪಾನಕ, ಉಪಾಹಾರವನ್ನು ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.