
ಬೇಲೂರು: ಇಲ್ಲಿನ ಬಸ್ ನಿಲ್ದಾಣಕ್ಕೆ ಸಾರಿಗೆ ಬಸ್‌ಗಳು ಸಮಯಕ್ಕೆ ಸರಿಯಾಗಿ ಬಾರದ ಕಾರಣ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಬಸ್ ನಿಲ್ದಾಣದಲ್ಲಿ ಬಸ್‌ಗಳನ್ನು ತಡೆದು ಶುಕ್ರವಾರ ಪ್ರತಿಭಟನೆ ನಡೆಸಿದರು.
‘ಬೇಲೂರಿನಲ್ಲಿ ಬಸ್ ಡಿಪೊ ಇದ್ದರೂ ಸಮಯಕ್ಕೆ ಸರಿಯಾಗಿ ಬಸ್‌ಗಳಿಲ್ಲ. ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಗೆ ಉನ್ನತ ವ್ಯಾಸಂಗ ಮಾಡಲು ಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದು, ಬೆಳಿಗ್ಗೆ 7 ರಿಂದ 8 ಗಂಟೆ ಸಮಯದವರೆಗೆ ಸರಿಯಾದ ಬಸ್ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ವಿಭಾಗೀಯ ಅಧಿಕಾರಿಗಳು ನಮಗೆ ಬಸ್ ಕೊರತೆ ಇದೆ ನಿಮಗೆ ಬೇಕಾದ ಸಮಯದಲ್ಲಿ ಬಸ್ ಗಳನ್ನು ನೀಡಲು ಅವಕಾಶ ಇಲ್ಲ ಎಂದು ಉಡಾಫೆಯಿಂದ ವರ್ತಿಸುವುದರ ಜೊತೆಗೆ ಕೆಲ ಬಸ್‌ಗಳಲ್ಲಿ ಬಸ್ ಪಾಸ್ ಇರುವ ವಿದ್ಯಾರ್ಥಿಗಳನ್ನು ಕೆಳಗೆ ಇಳಿಸಿರುವ ಹಲವಾರು ಉದಾಹರಣೆಗಳಿವೆ. ನಮ್ಮ ತೊಂದರೆಗಳನ್ನು ಕೇಳುವರು ಯಾರು ಇಲ್ಲ. ಇದು ಒಂದು ದಿನದ ಗೋಳಲ್ಲ. ಇದು ಪ್ರತಿನಿತ್ಯದ ಗೋಳಾಗಿದೆ’ ಎಂದು ವಿದ್ಯಾರ್ಥಿಗಳಾದ ಹೇಮಂತ್, ವೇದಮೂರ್ತಿ, ವಿಕಾಸ್ ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳಾದ ಸೃಷ್ಟಿ, ಯಶ್ವಂತ್, ಶರತ್, ರಾಘು ,ಆರೀಫ್, ಡಾ. ರಾಜ್ಕುಮಾರ್ ಅಭಿಮಾನಿಗಳ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸಂಘದ ತೀರ್ಥಂಕರ್, ಸಾಮಾಜಿಕ ಹೋರಾಟಗಾರ ವೆಂಕಟೇಶ್ ಸೇರಿದಂತೆ ಇತರರು ಇದ್ದರು.
Cut-off box - ಅಧಿಕಾರಿಗಳು ತರಾಟೆಗೆ ಬೆಂಗಳೂರಿನಲ್ಲಿದ್ದ ಶಾಸಕ ಎಚ್. ಕೆ. ಸುರೇಶ್ ಅವರಿಗೆ ವಿಷಯ ತಿಳಿದು ದೂರವಾಣಿ ಮೂಲಕ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು. ‘ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕೂಡಲೆ ಬಸ್‌ಗಳ ವ್ಯವಸ್ಥೆ ಆಗಬೇಕು. ಪ್ರತಿನಿತ್ಯ ಎರಡು ಜಿಲ್ಲೆಗಳಿಗೆ ಬೆಳಿಗ್ಗೆ 7 ರಿಂದ 8 ಗಂಟೆಯವರೆಗೆ ಬಸ್ ವ್ಯವಸ್ಥೆ ಕಲ್ಪಿಸಬೇಕು. ಇಲ್ಲದಿದ್ದರೆ ನಿಮ್ಮ ವಿರುದ್ಧ ಸಾರಿಗೆ ಸಚಿವರಿಗೆ ದೂರು ಸಲ್ಲಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು. ಇದರ ಬೆನ್ನಲ್ಲೇ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಎರಡು ಬಸ್‌ಗಳನ್ನು ಕಲ್ಪಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.