ADVERTISEMENT

ಕನ್ನಡ ಬಾವುಟಕ್ಕೆ ಬೆಂಕಿ, ರಾಯಣ್ಣ ಪ್ರತಿಮೆ ವಿರೂಪಕ್ಕೆ ಕಸಾಪ ಖಂಡನೆ

ಕಿಡಿಗೇಡಿಗಳ ಬಂಧನಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2021, 15:51 IST
Last Updated 20 ಡಿಸೆಂಬರ್ 2021, 15:51 IST
ಮಲ್ಲೇಶಗೌಡ
ಮಲ್ಲೇಶಗೌಡ   

ಹಾಸನ: ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಿರುವ ಮತ್ತು ಸಂಗೋಳ್ಳಿ ರಾಯಣ್ಣ ಪ್ರತಿಮೆ ವಿರೂಪಗೊಳಿಸಿರುವ ಕಿಡಿಗೇಡಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳದಿದ್ದರೆ ಕನ್ನಡ ಪರ ಸಂಘಟನೆಗಳನ್ನು ಒಗ್ಗೂಡಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಲ್. ಮಲ್ಲೇಶ ಗೌಡ ಎಚ್ಚರಿಸಿದರು.

ನಾಡಿನ ನೆಲ, ಜಲ, ಸಂಸ್ಕೃತಿ, ಅಸ್ಮಿತೆಗೆ ಧಕ್ಕೆ ಉಂಟಾದಾಗ ರಕ್ಷಣೆಗೆ ನಿಲ್ಲುವುದು ಪರಿಷತ್ತಿನ ಕರ್ತವ್ಯ. ಕನ್ನಡದ ಬಾವುಟ ಈ ನೆಲದ ಗೌರವದ ಸಂಕೇತ. ಅಂತಹ ಬಾವುಟಕ್ಕೆ ಬೆಂಕಿ ಹಚ್ಚಿರುವುದು ಖಂಡನೀಯ. ಇದು ಕನ್ನಡಿಗರ ಗೌರವಕ್ಕೆ ತುಂಬ ಅಘಾತ ಉಂಟು ಮಾಡಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.

ಸಂಗೋಳಿ ರಾಯಣ್ಣ ಕೇವಲ ಒಂದು ರಾಜ್ಯಕ್ಕೆ ಸೀಮಿತವಾದವರಲ್ಲ. ಬ್ರಿಟಿಷರ ವಿರುದ್ಧ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರ. ರಾಯಣ್ಣ ಪ್ರತಿಮೆ ವಿರೂಪಗೊಳಿಸಿರುವುದು ಇಡೀ ದೇಶಕ್ಕೆ ಮಾಡಿದ ಅಪಮಾನ. ಇದು ನಿಜವಾಗಿಯೂ ದೇಶ ದ್ರೋಹದ ಕೆಲಸ ಎಂದರು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು ಒಂದಾಗಿ ಗಟ್ಟಿಯಾದ ನಿಲುವು ತಾಳಬೇಕು. ಕನ್ನಡಿಗರ, ಕನ್ನಡಪರ ಹೋರಾಟಗಾರರ ಬೆನ್ನಿಗೆ ನಿಲ್ಲಬೇಕು. ಕೇವಲ ವೋಟ್ ಬ್ಯಾಂಕ್‌ ರಾಜಕಾರಣಕ್ಕಾಗಿ ಯಾರ ಬಗ್ಗೆಯೂ ಮೃದು ಧೋರಣೆ ತೋರುವುದು ಸರಿಯಲ್ಲ.ಪ್ರತಿಭಟನೆಯ ಹೆಸರಿನಲ್ಲಿ ಸಾರ್ವಜನಿಕ ಆಸ್ತಿ– ಪಾಸ್ತಿಗಳಿಗೆ ಹಾನಿ ಉಂಟು ಮಾಡುವುದು ತಪ್ಪು. ಕನ್ನಡ ಬಾವುಟ ಸುಡುವುದು, ರಾಯಣ್ಣ ಪ್ರತಿಮೆ ವಿರೂಪ ಹಾಗೂ ಶಿವಾಜಿ ಪ್ರತಿಮೆಗೆ ಮಸಿ ಬಳಿದಿರುವುದೂ ಖಂಡನೀಯ ಎಂದು ಹೇಳಿದರು.

ಎಂ.ಇ.ಎಸ್‌ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿರುವ ಮರಾಠಿಗರಿಗೆ, ಗಡಿನಾಡಿನ ಕನ್ನಡಿಗರಿಗೆ ಹಾಗೂ ಬೆಳಗಾವಿಯಲ್ಲಿ ಹೋರಾಟ ನಡೆಸುತ್ತಿರುವ ಕನ್ನಡಪರ ಸಂಘಟನೆಗಳಿಗೆ ರಾಜ್ಯ ಸರ್ಕಾರ ಸೂಕ್ತ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲೆಯ ಕನ್ನಡಪರ ಸಂಘಟನೆಗಳ ತುರ್ತು ಸಭೆ ಕರೆದು ಜಿಲ್ಲೆಯಲ್ಲಿ ಹೋರಾಟ ರೂಪಿಸುವ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಈ ಬಗ್ಗೆ ಸರ್ಕಾರ ಶೀಘ್ರವಾಗಿ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಜಾನಪದ ವಿದ್ವಾಂಸ ಹಂಪನಹಳ್ಳಿ ತಿಮ್ಮೇಗೌಡ, ಮಮತೇಶ್, ದೇವರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.