ADVERTISEMENT

ವಿಧಾನ ಪರಿಷತ್‌ ಚುನಾವಣೆ: ಉದ್ಯಮಿ ಶಂಕರ್‌ಗೆ ಒಲಿದ ಅದೃಷ್ಟ

ಹಿಂದೆ ಸರಿದ ಎಂ.ಎ. ಗೋಪಾಲಸ್ವಾಮಿ, ಹೊಸ ಮುಖಕ್ಕೆ ಕಾಂಗ್ರೆಸ್‌ ಅವಕಾಶ

ಕೆ.ಎಸ್.ಸುನಿಲ್
Published 15 ನವೆಂಬರ್ 2021, 16:55 IST
Last Updated 15 ನವೆಂಬರ್ 2021, 16:55 IST
ಎಂ.ಶಂಕರ್‌
ಎಂ.ಶಂಕರ್‌   

ಹಾಸನ: ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಚನ್ನರಾಯಪಟ್ಟಣ ಎಪಿಎಂಸಿ ನಿರ್ದೇಶಕ, ಉದ್ಯಮಿ ಎಂ.ಶಂಕರ್‌ ಕಣಕ್ಕಿಳಿಯುವುದು ಖಚಿತವಾಗಿದೆ.

ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಸಂಸದ ಡಿ.ಕೆ.ಸುರೇಶ್‌, ಎಸ್‌.ಆರ್.ಪಾಟೀಲ್‌ ಅವರು ಭಾನುವಾರ ನಡೆಸಿದ ಸಭೆಯಲ್ಲಿ ಎಂ.ಶಂಕರ್‌, ಎಂ.ಎ. ಗೋಪಾಲಸ್ವಾಮಿ ಹಾಗೂ ಸಕಲೇಶಪುರ ತಾಲ್ಲೂಕಿನ ಕಾಫಿ ಬೆಳೆಗಾರ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬೈರಮುಡಿ ಚಂದ್ರು ಅವರ ಹೆಸರು ಚರ್ಚೆಗೆ ಬಂತು.

ಜಿಲ್ಲಾ ಘಟಕದ ಅಧ್ಯಕ್ಷ ಜಾವಗಲ್‌ ಮಂಜುನಾಥ್‌, ಮುಖಂಡ ಬಾಗೂರು ಮಂಜೇಗೌಡ, ಶಂಕರ್‌ ಮತ್ತು ಗೋಪಾಲಸ್ವಾಮಿ ಅವರೊಂದಿಗೆ ಚರ್ಚಿಸಿದ ರಾಜ್ಯ ನಾಯಕರು, ಅಂತಿಮವಾಗಿ ಶಂಕರ್‌ ಅವರಿಗೆ ಮಣೆ ಹಾಕಿದ್ದಾರೆ.

ADVERTISEMENT

ಶಂಕರ್‌ ಅವರ ಹೆಸರನ್ನು ದೆಹಲಿಯ ಎಐಸಿಸಿಗೆ ಕಳುಹಿಸಲಾಗಿದ್ದು, ಎರಡು, ಮೂರು ದಿನಗಳಲ್ಲಿ ಹೈಕಮಾಂಡ್‌ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಿದೆ.

ಕಳೆದ ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಎಂ.ಎ.ಗೋಪಾಲಸ್ವಾಮಿ ಅವರು ಶ್ರವಣಬೆಳಗೊಳಕ್ಷೇತ್ರದಿಂದ ಸ್ಪರ್ಧಿಸುವ ಆಕಾಂಕ್ಷೆ ಹೊಂದಿದ್ದಾರೆ. ಹಾಗಾಗಿ ಈ ಬಾರಿ ವರಿಷ್ಠರು ಕಣಕ್ಕಿಳಿಯುವಂತೆ ವರಿಷ್ಠರುನೀಡಿದ ಸೂಚನೆಯನ್ನು ನಿರಾಕರಿಸಿದ ಕಾರಣ ಶಂಕರ್‌ ಅವರಿಗೆ ಅದೃಷ್ಟ ಒಲಿದಿದೆ.

ಮೂರು ದಶಕಗಳಿಂದ ಪಕ್ಷದಲ್ಲಿ ಸಕ್ರಿಯರಾಗಿ ಸೇವೆ ಸಲ್ಲಿಸುತ್ತಿರುವ ಶಂಕರ್‌ ಅವರು, ಹಿಂದೆ ಕಸಬಾ ಜಿಲ್ಲಾ ಪಂಚಾಯಿತಿ ಕ್ಷೇತ್ರದಿಂದ ಸ್ಪರ್ಧಿಸಿ,ಜೆಡಿಎಸ್‌ನ ಸಿ.ಎನ್‌.ಬಾಲಕೃಷ್ಣ ವಿರುದ್ಧ ಪರಾಭವಗೊಂಡಿದ್ದರು. ಪತ್ನಿ ಮಂಜುಳಾ ಅವರು ಕಳೆದ ಬಾರಿ ಗೌಡಗೆರೆ ಜಿಲ್ಲಾ ಪಂಚಾಯಿತಿ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಹಾಲಿ ಶಂಕರ್ ಅವರು ಎಪಿಎಂಸಿ ಹಾಗೂ ಪಿಕಾರ್ಡ್‌ ಬ್ಯಾಂಕ್‌ ನಿರ್ದೇಶಕರಾಗಿ ದ್ದಾರೆ. ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಸ್ಥಾನಕ್ಕೂ ಸ್ಪರ್ಧಿಸಿದ್ದಾರೆ.

ಒಕ್ಕಲಿಗ ಸಮುದಾಯಕ್ಕೆ ಸೇರಿದ ಅವರು ಆರ್ಥಿಕವಾಗಿಯೂ ಪ್ರಬಲರಾಗಿದ್ದಾರೆ. ಹಲವು ವರ್ಷಗ ಳಿಂದ ಕಾಂಗ್ರೆಸ್‌ನಲ್ಲಿ ಸಕ್ರಿಯರಾಗಿದ್ದು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆಗೆ ಯತ್ನಿಸಿದ್ದರೂ ಸಫಲರಾಗಿ ರಲಿಲ್ಲ. ಆರ್ಥಿಕ ಸಂಪನ್ಮೂಲ ಪ್ರಮುಖ ಆದ್ಯತೆಯಾಗಿ ಬಿಂಬಿತ ಆಗುತ್ತಿರುವುದರಿಂದ ಜೆಡಿಎಸ್‌ಗೆ ಶಂಕರ್ ಪ್ರಬಲ ಪೈಪೋಟಿ ನೀಡ ಬಲ್ಲರು ಎಂಬುದು ಕಾಂಗ್ರೆಸ್‌ ಲೆಕ್ಕಾಚಾರವಾಗಿದೆ.

‘ಹಲವು ವರ್ಷಗಳಿಂದ ಕಾಂಗ್ರೆಸ್‌ ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಕೊಂಡು ಕೆಲಸ ಮಾಡಿದ್ದು, ಅನೇಕ ಚುನಾವಣೆಗಳನ್ನು ಎದುರಿಸಿದ್ದೇನೆ. ವಿಧಾನ ಪರಿಷತ್‌ ಚುನಾವಣೆಗೆ ಸ್ಪರ್ಧಿಸಬೇಕು ಎನ್ನುವುದು ನಾಯಕರು ಹಾಗೂ ಕಾರ್ಯಕರ್ತರ ಆಶಯ. ದೊರೆತ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುತ್ತೇನೆ. ಹೈಕಮಾಂಡ್‌ ತೀರ್ಮಾನಕ್ಕೆ ಬದ್ಧ’ ಎಂದು ಕಾಂಗ್ರೆಸ್‌ ಮುಖಂಡ ಎಂ.ಶಂಕರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.