ಹಾಸನ: ‘ಏ.18ರಂದು ನಡೆದ ಲೋಕಸಭೆ ಚುನಾವಣೆಯಲ್ಲಿ ಸಚಿವ ಎಚ್.ಡಿ.ರೇವಣ್ಣ ನಕಲಿ ಮತದಾನ ಮಾಡಿಸಿದ್ದಾರೆ’ ಎಂಬ ಆರೋಪ ಹಿನ್ನೆಲೆಯಲ್ಲಿ ಜಿಲ್ಲಾ ಚುನಾವಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು ದೂರುದಾರರ ಸಮ್ಮುಖದಲ್ಲಿ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ವೀಕ್ಷಿಸಿದರು.
ಪೋಲಿಂಗ್ ಏಜೆಂಟ್ ಆಗಿದ್ದ, ಹೊಳೆನರಸೀಪುರ ತಾಲ್ಲೂಕು ಮಾರಗೋಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಂ.ಎನ್.ರಾಜು ಮತ್ತು ಮಾಯಣ್ಣ ಎಂಬುವರು, ‘ಅಕ್ರಮ ಮತದಾನ ನಡೆದಿದೆ’ ಎಂದು ದೂರು ನೀಡಿದ್ದರು.
‘ಹೊಳೆನರಸೀಪುರ ತಾಲ್ಲೂಕು ಪಡುವಲಹಿಪ್ಪೆ ಮತಗಟ್ಟೆ ಸಂಖ್ಯೆ 244 ರಲ್ಲಿ ರೇವಣ್ಣ ಅವರ ಸೂಚನೆಯಂತೆ 20ಕ್ಕೂ ಹೆಚ್ಚು ಮಂದಿ ನಕಲಿ ಮತದಾನ ಮಾಡಿದ್ದಾರೆ. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರೂ ಯಾರೊಬ್ಬರೂ ತಲೆ ಕೆಡಿಸಿಕೊಂಡಿಲ್ಲ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದ್ದರು.
ಈ ಹಿನ್ನೆಲೆಯಲ್ಲಿ ಶನಿವಾರ ತಮ್ಮ ಕಚೇರಿಗೆ ಸಿಸಿಟಿವಿ ದೃಶ್ಯಾವಳಿ ತರಿಸಿಕೊಂಡ ಚುನಾವಣಾಧಿಕಾರಿ, ದೂರುದಾರರ ಸಮ್ಮುಖದಲ್ಲಿ ಕೂಲಂಕಷ ಅವಲೋಕನ ನಡೆಸಿದರು. ಈ ವೇಳೆ ಯಾರಾರು ಅರ್ಧ ಗಂಟೆ ಮತಗಟ್ಟೆಯಲ್ಲಿದ್ದರು. ಯಾರಿಂದ ಅಕ್ರಮ ಮತದಾನ ನಡೆದಿದೆ ಎಂಬುದನ್ನು ದೂರುದಾರರು ಮಾಹಿತಿ ನೀಡಿದರು.
ಇದಾದ ಬಳಿಕ ಪೊಲೀಸ್ ವರಿಷ್ಠಾಧಿಕಾರಿಗೂ ದೂರು ನೀಡಿರುವ ರಾಜು ಮತ್ತು ಮಾಯಣ್ಣ, ‘ಕೆಲವರಿಗೆ ಹೊಳೆನರಸೀಪುರ ಪುರಸಭೆ ವ್ಯಾಪ್ತಿಯಲ್ಲಿ ಓಟರ್ ಐಡಿ ಇದ್ದರೂ, ಪಡುವಲಹಿಪ್ಪೆಗೆ ಬಂದು ಅಕ್ರಮ ಮತದಾನ ಮಾಡಿದ್ದಾರೆ. ಹೀಗಿದ್ದರೂ, ಅಲ್ಲಿದ್ದ ಅಧಿಕಾರಿ ಯಾವುದೇ ಕ್ರಮ ಜರುಗಿಸಿಲ್ಲ. ಈ ಬಗ್ಗೆ ಸಿಸಿಟಿವಿ ದೃಶ್ಯಾವಳಿಯನ್ನು ಡಿಸಿ ಅವರು ಪರಿಶೀಲಿಸಿದ್ದಾರೆ. ಅಕ್ರಮ ಮತದಾನ ಮಾಡಿದ ಹಾಗೂ ಅಧಿಕಾರ ದುರುಪಯೋಗ ಪಡಿಸಿಕೊಂಡಿರುವ ಚುನಾವಣಾ ಅಧಿಕಾರಿಗಳ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು’ ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.