ADVERTISEMENT

ಚನ್ನರಾಯಪಟ್ಟಣ ಗಣೇಶೋತ್ಸವ: ಸಾಂಸ್ಕೃತಿಕ ಸಂಭ್ರಮ, ಕಲೆಗಳ ರಸದೌತಣ

ಪ್ರಜಾವಾಣಿ ವಿಶೇಷ
Published 11 ಅಕ್ಟೋಬರ್ 2025, 4:40 IST
Last Updated 11 ಅಕ್ಟೋಬರ್ 2025, 4:40 IST
ಶ್ರೀಕ್ಷೇತ್ರ ಧರ್ಮಸ್ಥಳದ ಮಾದರಿಯ ಮಂಟಪದಲ್ಲಿ ವಿರಾಜ ಮಾನವಾಗಿರುವ ಗಣಪತಿ
ಶ್ರೀಕ್ಷೇತ್ರ ಧರ್ಮಸ್ಥಳದ ಮಾದರಿಯ ಮಂಟಪದಲ್ಲಿ ವಿರಾಜ ಮಾನವಾಗಿರುವ ಗಣಪತಿ   

ಚನ್ನರಾಯಪಟ್ಟಣ: ರಾಜ್ಯದಲ್ಲಿಯೇ ಮನೆ ಮಾತಾಗಿರುವ ಪಟ್ಟಣದ ಪ್ರಸನ್ನ ಗಣಪತಿ ಆಸ್ಥಾನ ಮಂಟಪದಲ್ಲಿ, ವಿರಾಜಮಾನವಾಗಿರುವ 10 ಅಡಿ ಎತ್ತರದ ಚೌತಿ ಗಣಪತಿ ಮೂರ್ತಿ ಭಕ್ತರನ್ನು ಆಕರ್ಷಿಸುತ್ತಿದೆ.

ರಾತ್ರಿ ವೇಳೆ ವಿದ್ಯುತ್ ದೀಪಾಲಂಕಾರದಿಂದ ಪೆಂಡಾಲ್ ಕಂಗೊಳಿಸುತ್ತಿದೆ. ರವೀಂದ್ರ ನೇತೃತ್ವದ ಕಲಾವಿದರಿಂದ ಮೂಡಿಬಂದಿರುವ ವಿಶಿಷ್ಟ ಮಾದರಿ ಮಂಟಪದ ಅಲಂಕಾರ ಗಮನ ಸೆಳೆಯುತ್ತಿದೆ. ಗಣಪತಿ ವಿಸರ್ಜನೆಯ ಸಂದರ್ಭದಲ್ಲಿಯೂ, ಮೂರ್ತಿ ಪ್ರತಿಷ್ಠಾಪಿಸುವ ವಾಹನಕ್ಕೆ ವಿಶೇಷ ಅಲಂಕಾರ ಮಾಡಿ ಮೆರವಣಿಗೆ ನಡೆಸಲಾಗುತ್ತದೆ.

74 ನೇ ವರ್ಷದ ಗಣಪತಿ ಮಹೋತ್ಸವದಲ್ಲಿ 48 ದಿನಗಳ ಕಾಲ ಗಣಪತಿ ಪ್ರತಿಷ್ಠಾಪಿಸಲಾಗುತ್ತಿದೆ. ಪ್ರತಿವರ್ಷದಂತೆ ಕಲೆ, ಸಂಗೀತ, ಸಾಹಿತ್ಯ, ಸಂಸ್ಕೃತಿಗೆ ಪೂರಕ ಕಾರ್ಯಕ್ರಮ ರೂಪಿಸಲಾಗಿದೆ. ಕಲೆಯ ರಸದೌತಣದ ಜೊತೆಗೆ ಸಮಾಜಮುಖಿ ಕಾರ್ಯಕ್ರಮಕ್ಕೆ ಪ್ರಸನ್ನ ಗಣಪತಿ ಆಸ್ಥಾನ ಮಂಟಪ ಸಾಕ್ಷಿಯಾಗಿದೆ.

ADVERTISEMENT

ನಿತ್ಯ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರಾಯೋಜಕತ್ವವನ್ನು ವಿವಿಧ ಸಂಘ, ಸಂಸ್ಥೆಗಳು ವಹಿಸಿಕೊಂಡಿವೆ. 11 ವರ್ಷಗಳಿಂದ ನಿತ್ಯ ಮುಂಜಾನೆ 5.30 ರಿಂದ 7ಗಂಟೆಯವರೆಗೆ ಉಚಿತ ಯೋಗಾಸನ, ಪ್ರಾಣಾಯಾಮ ಮತ್ತು ಧ್ಯಾನ ಹೇಳಿಕೊಡಲಾಗುತ್ತಿದೆ. ಬೇಲೂರಿನ ಚೇತನ್ ಗುರೂಜಿ, ನಾಗಮಂಗಲದ ಲಕ್ಷ್ಮಣ್ ಗುರೂಜಿ ತರಬೇತಿ ನೀಡುತ್ತಿದ್ದಾರೆ. ಇದರ ಪ್ರಯೋಜನವನ್ನು ಜನತೆ ಪಡೆದುಕೊಂಡಿದ್ದಾರೆ.

ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿದ್ದು, ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಮೂರು ವರ್ಷದಿಂದ ಗಣಪತಿ ಮಹೋತ್ಸವದ ಅಂಗವಾಗಿ ನಿತ್ಯ ದಾಸೋಹ ಏರ್ಪಡಿಸುತ್ತಿರುವುದು ವಿಶೇಷ. ಅನೇಕ ಸಂಘ, ಸಂಸ್ಥೆಗಳ ನೆರವಿನಿಂದ ದಾಸೋಹ ಕೈಗೊಳ್ಳಲಾಗುತ್ತಿದೆ. ಈ ವರ್ಷವೂ 48 ದಿನ ದಾಸೋಹ ಇರಲಿದೆ. ಮುಸ್ಲಿಮರು ದಾಸೋಹ ಏರ್ಪಡಿಸಿ ಭಾವೈಕ್ಯ ಮೆರೆದಿದ್ದಾರೆ.

ಅಕ್ಟೋಬರ್ 11 ರಂದು ಮಕ್ಕಳ ಸಾಹಿತ್ಯ ಪರಿಷತ್‌ ವತಿಯಿಂದ ಮಕ್ಕಳಿಗಾಗಿ ವೇಷಭೂಷಣ ಸ್ಪರ್ಧೆ ಇದೆ. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ. ಅ.12 ರಂದು ಬೆಳಿಗ್ಗೆ ಗಣಪತಿ ಹೋಮ ಮತ್ತು ಧಾರ್ಮಿಕ ಕಾರ್ಯಕ್ರಮ ನೆರವೇರಲಿದೆ. ಸಂಜೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಚಲನಚಿತ್ರ ಕಲಾವಿದರು ಪಾಲ್ಗೊಳ್ಳುವರು. ಧಾರವಾಡದ ಕಲಾವಿದರಿಂದ ಮಲ್ಲಕಂಬ ಪ್ರದರ್ಶನ ಇದೆ.

ಪ್ರತಿ ವರ್ಷ ಪರಿಸರ ಸ್ನೇಹಿ ಗಣಪತಿ ಪ್ರತಿಷ್ಠಾಪಿಸಲಾಗುತ್ತದೆ. ಕಲಾವಿದ ಸಿ.ವಿ. ಪ್ರಸನ್ನ, ಈ ವರ್ಷ ಚೌತಿ ಗಣಪತಿ ತಯಾರಿಸಿದ್ದಾರೆ. ಬಾಲಕೃಷ್ಣ ಭಟ್ ನೇತೃತ್ವದಲ್ಲಿ ಅರ್ಚಕರು ನಿತ್ಯ ಪೂಜೆ ನೆರವೇರಿಸುತ್ತಿದ್ದಾರೆ.

ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿರುವ ಚನ್ನರಾಯಪಟ್ಟಣದ ಗಣಪತಿ ಪೆಂಡಾಲ್

ಧರ್ಮಸ್ಥಳ ಕ್ಷೇತ್ರದ ಮಾದರಿ ಮಂಟಪ

ನಾಡಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಧರ್ಮಸ್ಥಳದ ಮಾದರಿಯಲ್ಲಿ ಚನ್ನರಾಯಪಟ್ಟಣದಲ್ಲಿ ಮಂಟಪ ನಿರ್ಮಿಸಿ ಅದರಲ್ಲಿ ಗಣಪತಿ ಪ್ರತಿಷ್ಠಾಪಿಸಲಾಗಿದೆ. ನೋಡುಗರ ಗಮನ ಸೆಳೆಯುತ್ತಿರುವ ವಿಶಿಷ್ಟ ಮಂಟಪದ ಮಾದರಿ ರವೀಂದ್ರ ನೇತೃತ್ವದಲ್ಲಿ 6-8 ಕಲಾವಿದರ ತಂಡದಿಂದ ಸುಂದರವಾಗಿ ಮೂಡಿಬಂದಿದೆ. ಇದಕ್ಕಾಗಿ ಕಲಾವಿದರು 10 ದಿನ ಶ್ರಮ ವಹಿಸಿದ್ದಾರೆ. ಮುಂದಿನ ವರ್ಷದಿಂದ ಗಣಪತಿ ಪ್ರತಿಷ್ಠಾಪಿಸುವ ದಿನದಿಂದಲೇ ವಿಶಿಷ್ಟ ಮಂಟಪದ ಅಲಂಕಾರ ಮಾಡುವ ಮೂಲಕ ನೋಡುಗರಿಗೆ ಅವಕಾಶ ಕಲ್ಪಿಸಬೇಕು ಎಂಬ ಅಭಿಪ್ರಾಯ ಜನರದ್ದು.

ಅ.13 ರಂದು ಆನೆ ಸೇರಿ ಜಾನಪದ ಕಲಾ ತಂಡಗಳ ವೈಭವದೊಂದಿಗೆ ಮುಂಜಾನೆಯಿಂದ ಸಂಜೆವರೆಗೆ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಅದ್ದೂರಿ ಮೆರವಣಿಗೆ ನಡೆಸಿ ಅಮಾನಿಕೆರೆಯಲ್ಲಿ ಗಣಪತಿ ವಿಸರ್ಜಿಸಲಾಗುವುದು
–ಸಿ.ಎನ್. ಅಶೋಕ್, ಪ್ರಸನ್ನ ಗಣಪತಿ ಸೇವಾ ಸಮಿತಿಯ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.