ADVERTISEMENT

ಚನ್ನರಾಯಪಟ್ಟಣ | ಗ್ರಂಥಾಲಯಗಳು ಜ್ಞಾನದ ಸಂಕೇತ: ಶಾಸಕ ಬಾಲಕೃಷ್ಣ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2025, 6:50 IST
Last Updated 21 ನವೆಂಬರ್ 2025, 6:50 IST
ಚನ್ನರಾಯಪಟ್ಟಣದಲ್ಲಿ ಗುರುವಾರ ಏರ್ಪಡಿಸಿದ್ದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಶಾಸಕ ಸಿ. ಎನ್. ಬಾಲಕೃಷ್ಣ ಮಾತನಾಡಿದರು. ಎನ್. ಕುಮಾರ್, ಪುಟ್ಟಣ್ಣ ಇದ್ದಾರೆ
ಚನ್ನರಾಯಪಟ್ಟಣದಲ್ಲಿ ಗುರುವಾರ ಏರ್ಪಡಿಸಿದ್ದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಶಾಸಕ ಸಿ. ಎನ್. ಬಾಲಕೃಷ್ಣ ಮಾತನಾಡಿದರು. ಎನ್. ಕುಮಾರ್, ಪುಟ್ಟಣ್ಣ ಇದ್ದಾರೆ   

ಚನ್ನರಾಯಪಟ್ಟಣ: ಗ್ರಂಥಾಲಯಗಳು ಜ್ಞಾನದ ಸಂಕೇತ. ಎಲ್ಲರೂ ಗ್ರಂಥಾಲಯದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.

ಪಟ್ಟಣದಲ್ಲಿ ಸಾರ್ವಜನಿಕ ಗ್ರಂಥಾಲಯದಲ್ಲಿ ಗುರುವಾರ ಏರ್ಪಡಿಸಿದ್ದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಜ್ಞಾನ ವೃದ್ಧಿಸಲು ಗ್ರಂಥಾಲಯಗಳು ಸಹಕಾರಿಯಾಗಿವೆ. ವಿದ್ಯಾರ್ಥಿಗಳ ಅಧ್ಯಯನಕ್ಕೆ ಸೂಕ್ತ ವಾತಾವರಣ ಒದಗಿಸುತ್ತವೆ. ಪುಸ್ತಕಗಳು ಅತ್ಯಂತ ಅಮೂಲ್ಯ ಸಂಪತ್ತು. ಶಿಕ್ಷಣ ಮತ್ತು ಸಂಶೋಧನೆಗೆ ಪ್ರಯೋಜನವಾಗುತ್ತವೆ. ತಾಲ್ಲೂಕಿನ ಹಲವು ಗ್ರಾಮ ಪಂಚಾಯಿತಿಗಳಲ್ಲಿ ಡಿಜಿಟಲ್ ಗ್ರಂಥಾಲಯದ ಅನುಕೂಲ ಕಲ್ಪಿಸಲಾಗಿದೆ ಎಂದರು.

ಗ್ರಂಥಾಲಯಗಳು ದೇವಸ್ಥಾನಕ್ಕೆ ಸಮಾನ. ವಿದ್ಯಾರ್ಥಿಗಳು ಅಧ್ಯಯನ ವಿಸ್ತರಿಸಲು ಮತ್ತು ಮಹತ್ವದ ಮಾಹಿತಿ ಪಡೆಯಲು ಗ್ರಂಥಾಲಯ ನೆರವಾಗುತ್ತವೆ. ಉತ್ತಮ ವಾಕ್‍ಪಟುವಾಗಿಸಲು, ಚರ್ಚಾಸ್ಪರ್ಧೆಯಲ್ಲಿ ಭಾಗವಹಿಸಲು, ಸಂಪನ್ಮೂಲ ವ್ಯಕ್ತಿಯನ್ನಾಗಿ ರೂಪಿಸಲು ಪುಸ್ತಕಗಳು ಕೊಡುಗೆ ನೀಡುತ್ತವೆ. ಉತ್ತಮ ಪುಸ್ತಕಗಳು ಒಳ್ಳೆಯ ಸ್ನೇಹಿತರಿದ್ದಂತೆ. ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿ ಸಾಕಷ್ಟು ಪುಸ್ತಕಗಳು ಚನ್ನರಾಯಪಟ್ಟಣದ ಸಾರ್ವಜನಿಕ ಗ್ರಂಥಾಲಯದಲ್ಲಿ ಲಭ್ಯ ಇವೆ. ಸ್ಪರ್ಧಾತ್ಮಕ ಪರೀಕ್ಷೆಗೆ ಗ್ರಂಥಾಲಯದಲ್ಲಿ ಓದಿ ಸಾಕಷ್ಟು ಮಂದಿ ಸರ್ಕಾರಿ ಉದ್ಯೋಗ ಪಡೆದಿದ್ದಾರೆ ಎಂದು ತಿಳಿಸಿದರು.

ADVERTISEMENT

ರಾಜ್ ಕುಮಾರ್ ಅಭಿಮಾನಿಗಳ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಪುಟ್ಟಣ್ಣ ಮಾತನಾಡಿ, ಜ್ಞಾನವನ್ನು ಹೆಚ್ಚಿಸಲು ಗ್ರಂಥಾಲಯಗಳು ವಿಶ್ವವಿದ್ಯಾಲಯ ಇದ್ದಂತೆ. ಯುವಜನತೆ ಗ್ರಂಥಾಲಯಗಳಲ್ಲಿ ಓದುವ ಪರಿಪಾಠ ಹೆಚ್ಚು ರೂಢಿಸಿಕೊಳ್ಳಬೇಕು. ಈ ಬಗ್ಗೆ ಅವರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದರು.

ಡಿವೈಎಸ್‌ಪಿ ಕುಮಾರ್, ಸಾಹಿತಿ ವಸುಮತಿ ಮಾತನಾಡಿದರು. ಗ್ರಂಥಪಾಲಕ ದೇವರಾಜು ಭಾಗವಹಿಸಿದ್ದರು.

ಸಾಹಿತಿ ಜಯಂತಿ ರಚಿಸಿದ ಸಕ್ರೆ ಬಟ್ಲು ಕಥಾಸಂಕಲನವನ್ನು ಶಾಸಕ ಬಾಲಕೃಷ್ಣ ಬಿಡುಗಡೆ ಮಾಡಿದರು.

ರಸಪ್ರಶ್ನೆ, ಜಾನಪದ ಗೀತೆ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಪ್ರತಿವರ್ಷದಂತೆ ಗ್ರಂಥಾಲಯದಲ್ಲಿ ಓದುವ ಕೋಡಿಹಳ್ಳಿಯ ಸಂದೀಪ್, ಅಡಗೂರು ಗ್ರಾಮದ ಎ.ಎಚ್. ನಿತಿನ್ ಅವರಿಗೆ ಉತ್ತಮ ಓದುಗ ಪ್ರಶಸ್ತಿ ನೀಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.