
ಚನ್ನರಾಯಪಟ್ಟಣ: ಪಟ್ಟಣದಲ್ಲಿ ₹10 ಕೋಟಿ ವೆಚ್ಚದಲ್ಲಿ ಸುಸಜ್ಜಿತ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಪುರಸಭೆಯ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಯಿತು.
ಪುರಸಭಾಧ್ಯಕ್ಷ ಸಿ.ಎನ್. ಮೋಹನ್ ಅದ್ಯಕ್ಷತೆಯಲ್ಲಿ ಬುಧವಾರ ಏರ್ಪಡಿಸಿದ್ದ ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಯಿತು.
‘ನೆಲಮಳಿಗೆ ಸೇರಿ ನಾಲ್ಕು ಅಂತಸ್ತು ಕಟ್ಟಡ ನಿರ್ಮಾಣ ಮಾಡಲಾಗುವುದು. ಮೊದಲನೇ ಹಂತದಲ್ಲಿ ₹5 ಕೋಟಿ ಎರಡನೇ ಹಂತದಲ್ಲಿ ಮತ್ತೆ ₹5 ಕೋಟಿ ವ್ಯಯಮಾಡಿ ಸುಸಜ್ಜಿತ ವಾಣಿಜ್ಯ ಸಂಕೀರ್ಣ ನಿರ್ಮಿಸಲಾಗುವುದು. ಪುರಸಭೆಯ ತೆರಿಗೆ ಹಣದಲ್ಲಿ ಕಟ್ಟಡ ನಿರ್ಮಿಸಲಾಗುವುದು. ನ. 7ಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುವುದು. ಒಂದೂವರೆ ವರ್ಷದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ’ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಹೇಳಿದರು.
ಪುರಸಭಾಧ್ಯಕ್ಷ ಸಿ.ಎನ್. ಮೋಹನ್ ಮಾತನಾಡಿ, ‘ಹೇಮಾವತಿ ನಾಲೆ ಬಳಿ ಇರುವ ಎರಡು ಉದ್ಯಾನ, ಕೋಟೆ ಪ್ರದೇಶದಲ್ಲಿ ಪುನೀತ್ ರಾಜ್‍ಕುಮಾರ್ ಒಂದು ಉದ್ಯಾನ, ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿರುವ ಎರಡು ಮತ್ತು ವೆಂಕಟೇಶ್ವರ ಬಡಾವಣೆಯಲ್ಲಿರುವ ಒಂದು ಉದ್ಯಾನ ಸೇರಿ ಒಟ್ಟು 6 ಉದ್ಯಾನವನ್ನು ತಲಾ ₹6 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು. ಜಿಮ್ನಾಸ್ಟಿಕ್ ಸಲಕರಣೆ ಮತ್ತು ಮಕ್ಕಳ ಆಟಿಕೆಗಳನ್ನು ಅಳವಡಿಸಲಾಗುವುದು. ಇದರಿಂದ ಸಾರ್ವಜನಿಕರಿಗೆ ವಾಯುವಿಹಾರಕ್ಕೆ ಮತ್ತು ಮಕ್ಕಳಿಗೆ ಆಟವಾಡಲು ಅನುಕೂಲವಾಗಲಿದೆ. ಅದೇ ರೀತಿ ಚಾಮುಂಡೇಶ್ವರಿ ಬಡವಣೆಯಲ್ಲಿ ರಸ್ತೆ ನಿರ್ಮಾಣ, ಚರಂಡಿ ಮತ್ತು ಒಳಚರಂಡಿ, ಕುಡಿಯುವ ನೀರು ಒದಗಿಸುವುದು ಸೇರಿ ಮೂಲಸೌಕರ್ಯ ಒದಗಿಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು’ ಎಂದರು.
ಪುರಸಭೆಯ ಉಪಾಧ್ಯಕ್ಷೆ ಕವಿತಾ, ಸ್ಥಾಯಿಸಮಿತಿ ಅಧ್ಯಕ್ಷ ಎಸ್.ಎಗಣೇಶ್, ಮುಖ್ಯಾಧಿಕಾರಿ ಆರ್.ಯತೀಶ್ ಕುಮಾರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.