ADVERTISEMENT

ಸ್ವಾಭಿಮಾನಿ ಸಮಾವೇಶಕ್ಕೆ ಹೈಕಮಾಂಡ್‌ ಬಲ: ಗೌಡರ ಕೋಟೆಯಲ್ಲಿ ‘ಕೈ’ ಶಕ್ತಿ ಪ್ರದರ್ಶನ

ಚಿದಂಬರಪ್ರಸಾದ್
Published 2 ಡಿಸೆಂಬರ್ 2024, 7:28 IST
Last Updated 2 ಡಿಸೆಂಬರ್ 2024, 7:28 IST
ಸಚಿವರಾದ ಡಾ.ಎಚ್.ಸಿ. ಮಹದೇವಪ್ಪ, ವೆಂಕಟೇಶ್‌, ಕೆ.ಎನ್. ರಾಜಣ್ಣ ನೇತೃತ್ವದಲ್ಲಿ ಸಮಾವೇಶದ ಸಿದ್ಧತಾ ಸಭೆ ನಡೆಯಿತು
ಸಚಿವರಾದ ಡಾ.ಎಚ್.ಸಿ. ಮಹದೇವಪ್ಪ, ವೆಂಕಟೇಶ್‌, ಕೆ.ಎನ್. ರಾಜಣ್ಣ ನೇತೃತ್ವದಲ್ಲಿ ಸಮಾವೇಶದ ಸಿದ್ಧತಾ ಸಭೆ ನಡೆಯಿತು   

ಹಾಸನ: ಜೆಡಿಎಸ್‌ ಭದ್ರಕೋಟೆ ಎಂದೇ ಖ್ಯಾತವಾಗಿರುವ ಜಿಲ್ಲೆಯಲ್ಲಿ ಇದೀಗ ಕಾಂಗ್ರೆಸ್‌ ವತಿಯಿಂದ ಸಮಾವೇಶ ನಡೆಸಲಾಗುತ್ತಿದೆ. ಶೋಷಿತ ಸಮುದಾಯಗಳ ಸಂಘಟನೆಗಳ ಒಕ್ಕೂಟದ ಸಹಯೋಗದಲ್ಲಿ ನಡೆಯುತ್ತಿರುವ ಸ್ವಾಭಿಮಾನಿ ಸಮಾವೇಶಕ್ಕೆ ಕಾಂಗ್ರೆಸ್‌ ಹೈಕಮಾಂಡ್‌ ಕೂಡ ಹಸಿರು ನಿಶಾನೆ ತೋರಿಸಿದ್ದು, ಕಾಂಗ್ರೆಸ್‌ ಮುಖಂಡರ ಉತ್ಸಾಹ ಇಮ್ಮಡಿಯಾಗಿದೆ.

ಸಮಾವೇಶದ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಾಯಕತ್ವವನ್ನು ಬಿಂಬಿಸುವುದು ಒಂದೆಡೆಯಾದರೆ, ಕಾಂಗ್ರೆಸ್‌ ಸರ್ಕಾರದ ಸಾಧನೆಗಳನ್ನೂ ತಿಳಿಸುವ ಉದ್ದೇಶ ಹೊಂದಲಾಗಿದೆ.

ಆರಂಭದಲ್ಲಿ ಶೋಷಿತ ಸಮುದಾಯಗಳ ಸಂಘಟನೆಗಳ ಒಕ್ಕೂಟದ ವತಿಯಿಂದ ಸ್ವಾಭಿಮಾನಿ ಸಮಾವೇಶ ಆಯೋಜಿಸಲು ನಿರ್ಧರಿಸಲಾಗಿತ್ತು. ಕಾಂಗ್ರೆಸ್‌ ಪಕ್ಷವನ್ನು ಹೊರತುಪಡಿಸಿ ಸಮಾವೇಶ ನಡೆಸುತ್ತಿರುವುದಕ್ಕೆ ಅಪಸ್ವರಗಳೂ ಕೇಳಿ ಬಂದವು. ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ ಕಾಂಗ್ರೆಸ್ ಹೈಕಮಾಂಡ್‌, ಪ್ರದೇಶ ಕಾಂಗ್ರೆಸ್‌ ಸಮಿತಿ ಹಾಗೂ ಶೋಷಿತ ಸಮುದಾಯಗಳ ಸಂಘಟನೆಗಳ ಒಕ್ಕೂಟದ ಆಶ್ರಯದಲ್ಲಿ ಸಮಾವೇಶ ಆಯೋಜಿಸಲು ಸೂಚನೆ ನೀಡಿದ್ದು, ಕಾಂಗ್ರೆಸ್ಸಿಗರ ಹುಮ್ಮಸ್ಸನ್ನು ಇಮ್ಮಡಿಗೊಳಿಸಿದೆ.

ADVERTISEMENT

ಇದೀಗ ಶೋಷಿತ ಸಮುದಾಯಗಳ ಸಂಘಟನೆಗಳೂ ಸಮಾವೇಶಕ್ಕೆ ಸಿದ್ಧತೆ ಆರಂಭಿಸಿದ್ದರೆ, ಇನ್ನೊಂದೆಡೆ ಕಾಂಗ್ರೆಸ್‌ ಮುಖಂಡರೂ ಸಮಾವೇಶದ ಯಶಸ್ಸಿಗೆ ಸಿದ್ಧತೆಗಳನ್ನು ಚುರುಕಾಗಿಸಿದ್ದಾರೆ. ಈಗಾಗಲೇ ಉಪ ಚುನಾವಣೆಯಲ್ಲಿ 3 ಸ್ಥಾನಗಳನ್ನು ಗೆದ್ದು ಬೀಗಿರುವ ಕಾಂಗ್ರೆಸ್‌, ಇದೀಗ ಸಮಾವೇಶದ ಮೂಲಕ ಮತ್ತೊಮ್ಮೆ ತನ್ನ ಪ್ರಾಬಲ್ಯವನ್ನು ತೋರಿಸುವ ಪ್ರಯತ್ನದಲ್ಲಿದೆ.

2 ಲಕ್ಷ ಜನ: ನಗರದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಚಿಕ್ಕಮಗಳೂರು, ಹಾಸನ, ಮಂಡ್ಯ, ಕೊಡಗು ಜಿಲ್ಲೆಗಳ ಸುಮಾರು 2 ಲಕ್ಷಕ್ಕೂ ಅಧಿಕ ಜನರು ಸೇರುವ ನಿರೀಕ್ಷೆ ಇದೆ ಎನ್ನುತ್ತಾರೆ ಕಾಂಗ್ರೆಸ್‌ ಮುಖಂಡರು.

ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಿಂದಲೂ ಮುಖಂಡರು ಕಾರ್ಯಕರ್ತರನ್ನು ಕರೆತರಲು ಈಗಿನಿಂದಲೇ ಸಿದ್ಧತೆ ಆರಂಭಿಸಿದ್ದಾರೆ. ಈಗಾಗಲೇ ಆಯಾ ಕ್ಷೇತ್ರಗಳಲ್ಲಿ ಪೂರ್ವಭಾವಿ ಸಭೆಗಳು ಆರಂಭವಾಗಿದ್ದು, ಡಿ.5 ರಂದು ಹಾಸನದಲ್ಲಿ ಕಾಂಗ್ರೆಸ್‌ನ ಶಕ್ತಿ ಪ್ರದರ್ಶನ ಮಾಡಲು ಎಲ್ಲ ಬಗೆಯ ಸಿದ್ಧತೆಗಳನ್ನು ಮಾಡಲಾಗುತ್ತಿದೆ.

ನಗರದ ಅರಸೀಕೆರೆ ರಸ್ತೆಯ ಎಸ್‌.ಎಂ.ಕೆ. ನಗರದಲ್ಲಿ ಬೃಹತ್‌ ಪೆಂಡಾಲ್‌ ನಿರ್ಮಾಣ ಆರಂಭಿಸಲಾಗಿದೆ. ಸಚಿವರಾದ ಡಾ.ಎಚ್.ಸಿ. ಮಹದೇವಪ್ಪ, ವೆಂಕಟೇಶ್‌, ಕೆ.ಎನ್‌. ರಾಜಣ್ಣ, ಶಾಸಕ ಕೆ.ಎಂ. ಶಿವಲಿಂಗೇಗೌಡ, ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಅವರು ಎರಡು ಬಾರಿ ನಗರಕ್ಕೆ ಭೇಟಿ ನೀಡಿ, ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ.

ಹಾಸನದ ಎಸ್‌ಎಂಕೆ ನಗರದಲ್ಲಿ ನಡೆಯುವ ಸ್ವಾಭಿಮಾನಿ ಸಮಾವೇಶಕ್ಕೆ ನಿರ್ಮಿಸುತ್ತಿರುವ ಬೃಹತ್‌ ಪೆಂಡಾಲ್‌
ಸಮಾವೇಶಕ್ಕೆ ಕೇಂದ್ರದ ಕೆಲ ನಾಯಕರನ್ನೂ ಮುಖ್ಯಮಂತ್ರಿ ಸಿದ್ದರಾಮಯ್ಯ ಆಹ್ವಾನಿಸಿದ್ದು ಎಲ್ಲರೂ ಪಾಲ್ಗೊಳ್ಳುವ ನಿರೀಕ್ಷೆ ಇದೆ. ನಮ್ಮಲ್ಲಿ ಭಿನ್ನಾಭಿಪ್ರಾಯದ ಪ್ರಶ್ನೆಯೇ ಇಲ್ಲ
ಡಾ.ಎಚ್.ಸಿ. ಮಹದೇವಪ್ಪ ಸಮಾಜ ಕಲ್ಯಾಣ ಸಚಿವ
ಮೈಸೂರಿನಲ್ಲಿ ಬಹಳಷ್ಟು ಕಾರ್ಯಕ್ರಮ ಮಾಡಿದ್ದೇವೆ. ಈ ಬಾರಿ ಹಾಸನ ಮಂಡ್ಯದಲ್ಲಿ ಮಾಡೋಣ ಎಂದು ಹೇಳಿದ್ದೆವು. ಈಗ ಹಾಸನದಲ್ಲಿ ಸಮಾವೇಶ ಆಯೋಜಿಸಲಾಗಿದೆ
ವೆಂಕಟೇಶ್‌ ಪಶು ಸಂಗೋಪನಾ ಸಚಿವ
ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಸುಳ್ಳು ಪ್ರಕರಣ ದಾಖಲಿಸಿ ಸಿದ್ದರಾಮಯ್ಯ ವಿರುದ್ಧ ಮಸಿ ಬಳಿಯುವ ಕೆಲಸ ಮಾಡುತ್ತಿದ್ದು ಸಮಾವೇಶ ಮೂಲಕ ಉತ್ತರ ನೀಡುತ್ತಿದ್ದೇವೆ
ಕೆ.ಎಂ. ಶಿವಲಿಂಗೇಗೌಡ ಶಾಸಕ
ಕಾಂಗ್ರೆಸ್‌ ಪಕ್ಷ ಪ್ರಥಮ ನಂತರ ಹಿಂದುಳಿದ ಶೋಷಿತ ವರ್ಗಗಳ ಒಕ್ಕೂಟ. ಆದರೆ ಪ್ರತಿಪಕ್ಷಗಳು ಅಪಪ್ರಚಾರ ಮಾಡುತ್ತಿದ್ದು ಸಮಾವೇಶದ ಮೂಲಕ ತಕ್ಕ ಉತ್ತರ ನೀಡುತ್ತೇವೆ
ಕೆ.ಎನ್‌. ರಾಜಣ್ಣ ಜಿಲ್ಲಾ ಉಸ್ತುವಾರಿ ಸಚಿವ
ಅಹಿಂದ ಚಳವಳಿ ಸಂಪೂರ್ಣ ಬೆಂಬಲ
ಮುಖ್ಯಮಂತ್ರಿ ಸಿದ್ದರಾಮಯ್ಯ ಮುಖಂಡತ್ವದಲ್ಲಿ ಕಾಂಗ್ರೆಸ್ ಪಕ್ಷ ಮತ್ತು ಶೋಷಿತ ಸಮುದಾಯಗಳ ಒಕ್ಕೂಟದಿಂದ ನಡೆಯುತ್ತಿರುವ ಸ್ವಾಭಿಮಾನಿ ಸಮಾವೇಶಕ್ಕೆ ಅಹಿಂದ ಚಳವಳಿಯ ಸಂಘಟನೆಯಿಂದ ಸಂಪೂರ್ಣ ಬೆಂಬಲ ಇದೆ ಎಂದು ಅಹಿಂದ ಚಳವಳಿ ರಾಜ್ಯ ಜಂಟಿ ಸಂಚಾಲಕ ಟಿ.ಡಿ. ಜಗದೀಶ್ ತಿಳಿಸಿದರು. ಅಹಿಂದ ಚಳವಳಿಯ ರಾಜ್ಯ ಸಂಸ್ಥಾಪಕ ಎಸ್. ಮೂರ್ತಿ ಮಾರ್ಗದರ್ಶನದಂತೆ ಜಿಲ್ಲೆಯಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಮಾವೇಶ ನಡೆಯುತ್ತಿದ್ದು ಇದರಲ್ಲಿ ಭಾಗವಹಿಸುವ ಮೂಲಕ ಎಲ್ಲ ಸದಸ್ಯರು ಬೆಂಬಲ ಸೂಚಿಸುವುದಾಗಿ ಹೇಳಿದರು. ದೇಶದ ಸಂಪತ್ತು ಅಥವಾ ಆರ್ಥಿಕ ಶಕ್ತಿಗಳನ್ನು ಸಮಾನವಾಗಿ ಹಂಚಿಕೆ ಮಾಡುವುದು ಸಮಸಮಾಜ ನಿರ್ಮಾಣ ಮಾಡುವುದು ರಾಷ್ಟ್ರದಲ್ಲಿ ಸಮಾನತೆ ತರುವುದು ನಮ್ಮ ಸಂಘಟನೆಯ ಮುಖ್ಯ ಉದ್ದೇಶ ಎಂದರು. ರಾಜ್ಯದಲ್ಲಿ ಸಮಾನತೆಗಾಗಿ ಜನಾಭಿಪ್ರಾಯಗಳನ್ನು ರೂಪಿಸಲು ಅಹಿಂದ ಚಳವಳಿ ಸಂಘಟನೆಯನ್ನು ಸ್ಥಾಪನೆ ಮಾಡಲಾಗಿದ್ದು ಈ ಸಂಘಟನೆಯು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಸಕ್ರಿಯವಾಗಿದೆ. ಈ ಮೂಲಕ ಅಹಿಂದ ಶೋಷಿತ ಸಮುದಾಯಗಳಿಗೆ ಸೂಕ್ತ ನ್ಯಾಯ ಒದಗಿಸುವುದೇ ನಮ್ಮ ಮುಖ್ಯ ಧ್ಯೇಯವಾಗಿದೆ ಎಂದರು. ರಾಜ್ಯ ಜಂಟಿ ಸಂಚಾಲಕ ದಿನೇಶ್ ಹಾಸನ ಹರೀಶ್ ಉಳುವಾರೆ ಫ್ರಾನ್ಸಿಸ್ ಕ್ಸೇವಿಯರ್ ಎಂ.ವಿ ಗೋವಿಂದರಾಜು ಮಹಮ್ಮದ್ ನೇಮನ್ ಸುರೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.