ADVERTISEMENT

ಹಾಸನ | ಒಂದೇ ದಿನ 53 ಮಂದಿಗೆ ಕೋವಿಡ್‌

ಇಬ್ಬರ ಸಾವು, ಸೋಂಕಿತರ ಸಂಖ್ಯೆ 845ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2020, 14:42 IST
Last Updated 18 ಜುಲೈ 2020, 14:42 IST
   

ಹಾಸನ: ಜಿಲ್ಲೆಯಲ್ಲಿ ಒಂದೇ ದಿನ 53 ಮಂದಿ ಕೋವಿಡ್‌ ಪೀಡಿತರಾಗಿರುವುದು ಹಾಗೂ ಸೋಂಕಿತರಲ್ಲಿ ಇಬ್ಬರು
ಮೃತಪಟ್ಟಿರುವುದು ಶನಿವಾರ ದೃಢಪಟ್ಟಿದೆ. ಇದರಿಂದಾಗಿ ಒಟ್ಟು ಸೋಂಕಿತರ ಸಂಖ್ಯೆ 845, ಮೃತರ ಸಂಖ್ಯೆ 27ಕ್ಕೆ ತಲುಪಿದೆ.

544 ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರೆ. 275 ಸಕ್ರಿಯ ಪ್ರಕರಣಗಳಿವೆ. 16 ಮಂದಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.‌

ಹೊಸದಾಗಿ ಪತ್ತೆಯಾದ 53 ಪ್ರಕರಣಗಳಲ್ಲಿ ಹಾಸನ ತಾಲ್ಲೂಕು 21, ಆಲೂರು 2, ಅರಸೀಕೆರೆ 6, ಬೇಲೂರು 7, ಚನ್ನರಾಯಪಟ್ಟಣ 6, ಸಕಲೇಶಪುರ 5 , ಹೊಳೆನರಸೀಪುರ 4 ಹಾಗೂ ಅರಕಲಗೂಡಿನ ಇಬ್ಬರಿಗೆ ಸೋಂಕು ತಗುಲಿದೆ.

ADVERTISEMENT

ಮುಂಬೈ ಹಾಗೂ ಬಿಹಾರದಿಂದ ಮರಳಿದ್ದ ಚನ್ನರಾಯಪಟ್ಟಣದ ಇಬ್ಬರು, ಕೊಡಗು ಜಿಲ್ಲೆಗೆ ಪ್ರಯಾಣ ಬೆಳೆಸಿದ ಹಿನ್ನೆಲೆ
ಸಕಲೇಶಪುರ ವ್ಯಕ್ತಿ, ಗುಜರಾತ್‌ನಿಂದ ಮರಳಿದ್ದ ಆಲೂರಿನ ವ್ಯಕ್ತಿ, ಹಾಸನದ ಆರೋಗ್ಯ ಕೇಂದ್ರದ ಸಹಾಯಕ, ಹಾಸನ ಮತ್ತು ಹೊಳೆನರಸೀಪುರ ತಾಲ್ಲೂಕಿನ ಬಿಎಂಟಿಸಿ ಚಾಲಕರು, ಕಂಟೈನ್‌ಮೆಂಟ್ ವಲಯದ ಸಂಪರ್ಕ ಹಾಗೂ ಚಿಕ್ಕಮಗಳೂರಿಗೆ ಪ್ರವಾಸ ಬೆಳೆಸಿದ ಬೇಲೂರಿನ ಇಬ್ಬರು ಮತ್ತು ಬೆಂಗಳೂರಿನಿಂದ ಮರಳಿದ್ದ ಅರಕಲಗೂಡು ವ್ಯಕ್ತಿಗೆ ಸೋಂಕು ತಗುಲಿದೆ. ಉಳಿದಂತೆ ಶೀತ ಜ್ವರ ಮಾದರಿಯ ಅನಾರೋಗ್ಯ (ಐಎಲ್‌ಐ) ಮತ್ತು ಸೊಂಕಿತರ ಪ್ರಾಥಮಿಕ ಸಂಪರ್ಕದಿಂದ 20 ಜನರಿಗೆ ಕೊರೊನಾ ಪಾಸಿಟಿವ್‌ ಬಂದಿದೆ.

ಡಾ.ಸತೀಶ್‌ ಕುಮಾರ್

ಉಸಿರಾಟ, ಮಧುಮೇಹ, ರಕ್ತದೊತ್ತಡದಿಂದ ಬಳಲುತ್ತಿದ್ದ ಹಾಸನ ತಾಲ್ಲೂಕಿನ 75 ವರ್ಷದ ವ್ಯಕ್ತಿ ಕೋವಿಡ್‌ ಆಸ್ಪತ್ರೆಗೆ
ದಾಖಲಾಗಿದ್ದರು. 48 ವರ್ಷದ ಮತ್ತೊಬ್ಬ ಪುರುಷ ಸಹ ಮಧುಮೇಹ, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಇಬ್ಬರೂ ಚಿಕಿತ್ಸೆಗೆ ಸ್ಪಂದಿಸಲಿಲ್ಲ. ಸರ್ಕಾರದ ನಿರ್ದೇಶನದಂತೆ ಅಂತ್ಯಕ್ರಿಯೆ ನೆರವೇರಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್‌ ಕುಮಾರ್‌ ತಿಳಿಸಿದರು.

ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಾರ್ವಜನಿಕರು ಸರ್ಕಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಸಭೆ, ಸಮಾರಂಭಗಳಿಂದ ದೂರ ಇರಬೇಕು. ತುರ್ತು ಕೆಲಸಗಳಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಬರಬೇಕು. ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್‌ ಧರಿಸಿ ಅಂತರ ಪಾಲನೆ ಮಾಡಬೇಕು. ಪದೇ ಪದೇ ಕೈ ತೊಳೆಯಬೇಕು. ಉಸಿರಾಟದ ತೊಂದರೆ, ಶೀತ, ಕೆಮ್ಮು, ಜ್ವರ ಲಕ್ಷಣಗಳು ಇದ್ದರೆ ಹತ್ತಿರದ ಆಸ್ಪತ್ರೆಗೆ ತೆರಳಿ ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಸತೀಶ್‌ ಕುಮಾರ್ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.