ADVERTISEMENT

ಹಾಸನ: ಮೊದಲ ದಿನ 477 ಮಂದಿಗೆ ಲಸಿಕೆ

ಕೋವಿಡ್‌ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ, ಡಿ ಗ್ರೂಪ್‌ ನೌಕರ ಯಶ್ವಂತ್‌ಗೆ ಮೊದಲ ಚುಚ್ಚುಮದ್ದು

​ಪ್ರಜಾವಾಣಿ ವಾರ್ತೆ
Published 16 ಜನವರಿ 2021, 13:40 IST
Last Updated 16 ಜನವರಿ 2021, 13:40 IST
ಹಾಸನದ ಹಿಮ್ಸ್‌ ಆಸ್ಪತ್ರೆಯಲ್ಲಿ ಗ್ರೂಪ್‌ ಡಿ ನೌಕರ ಯಶ್ವಂತ್‌ ಜಿಲ್ಲೆಯಲ್ಲಿ ಮೊದಲಿಗರಾಗಿ ಲಸಿಕೆ ಪಡೆದರು.
ಹಾಸನದ ಹಿಮ್ಸ್‌ ಆಸ್ಪತ್ರೆಯಲ್ಲಿ ಗ್ರೂಪ್‌ ಡಿ ನೌಕರ ಯಶ್ವಂತ್‌ ಜಿಲ್ಲೆಯಲ್ಲಿ ಮೊದಲಿಗರಾಗಿ ಲಸಿಕೆ ಪಡೆದರು.   

ಹಾಸನ: ‌ಜಿಲ್ಲೆಯ ಹತ್ತು ಕೇಂದ್ರಗಳಲ್ಲಿ ಕೋವಿಡ್‌ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ
ನೀಡಲಾಯಿತು.

ಆರೋಗ್ಯ ಇಲಾಖೆಯ ಡಿ ಗ್ರೂಪ್‌ ನೌಕರ ಯಶ್ವಂತ್‌ ಮೊದಲಿಗರಾಗಿ ಲಸಿಕೆ ಪಡೆದರು. ಈ ವೇಳೆ ಹಾಜರಿದ್ದ
ವೈದ್ಯರು, ಸಿಬ್ಬಂದಿ ಚಪ್ಪಾಳೆ ತಟ್ಟಿ ಸಂತಸ ವ್ಯಕ್ತಪಡಿಸಿದರು. ಫಲಾನುಭವಿಗಳ ಎಡಗೈಗೆ ಚುಚ್ಚುಮದ್ದು ನೀಡಿದನಂತರ ಆರೋಗ್ಯ ಕಾರ್ಯಕರ್ತರ ನಿಗಾವಣೆಯಲ್ಲಿ ಅರ್ಧ ಗಂಟೆ ವಿಶ್ರಾಂತಿ ಪಡೆದುಕೊಂಡರು. ಅರ್ಧ ತಾಸಿನನಂತರ ಫಲಾನುಭವಿಗಳ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬರಲಿಲ್ಲ.

ನೋಂದಾಯಿಸಿಕೊಂಡಿದ್ದ 100 ಮಂದಿಗೆ ಹಿಮ್ಸ್‌ ಆಸ್ಪತ್ರೆಯಲ್ಲಿ ಕೋವ್ಯಾಕ್ಸಿನ್‌ ನೀಡಲಾಯಿತು. ಲಸಿಕೆ
ಪಡೆದವರಿಂದ ಒಪ್ಪಿಗೆ ಪತ್ರಕ್ಕೆ ಸಹಿ ಮಾಡಿಸಿಕೊಳ್ಳಲಾಯಿತು. ಬಳಿಕ ಹಿಮ್ಸ್‌ ನಿರ್ದೇಶಕ ಡಾ.ಬಿ.ಸಿ
ರವಿಕುಮಾರ್‌, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಕೃಷ್ಣಮೂರ್ತಿ ಕೊವ್ಯಾಕ್ಸಿನ್‌ ಲಸಿಕೆ ಹಾಕಿಸಿಕೊಂಡರು.

ADVERTISEMENT

ಹಿಮ್ಸ್‌ ಆಸ್ಪತ್ರೆಯನ್ನು ಹೂವು, ಮಾವಿನ ತೋರಣಗಳಿಂದ ಸಿಂಗರಿಸಿ, ರಂಗೋಲಿ ಚಿತ್ತಾರ ಬಿಡಿಸಲಾಗಿತ್ತು,
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿ.ಭಾರತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ
ಕಲ್ಯಾಣಾಧಿಕಾರಿ ಡಾ. ಸತೀಶ್‌, ಹಿಮ್ಸ್‌ ನಿರ್ದೇಶಕ ಡಾ.ಬಿ.ಸಿ. ರವಿಕುಮಾರ್‌, ಜಿಲ್ಲಾ ಶಸ್ತ್ರ ಚಿಕಿತ್ಸಕ
ಡಾ.ಕೃಷ್ಣಮೂರ್ತಿ ಹಾಗೂ ಪೌರಕಾರ್ಮಿಕರು ಟೇಪ್‌ ಕತ್ತರಿಸಿ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಶನಿವಾರ 943 ಜನರಿಗೆ ಲಸಿಕೆ ನೀಡಲು ಗುರಿ ನಿಗದಿ ಮಾಡಲಾಗಿತ್ತು. ಸಂಜೆ 6 ಗಂಟೆ ವೇಳೆಗೆ 477 ಮಂದಿಗೆ ಲಸಿಕೆ ನೀಡಲಾಯಿತು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್‌ ಮಾತನಾಡಿ, ಒಟ್ಟು 18,156 ಜನ
ಲಸಿಕೆ ಪಡೆಯಲು ನೋಂದಾಯಿಸಿಕೊಂಡಿದ್ದು, ಒಂದು ಕೇಂದ್ರದಲ್ಲಿ 100 ಜನರಿಗೆ ಲಸಿಕೆ ನೀಡಲು ಗುರಿ
ನೀಡಲಾಗಿದೆ. ಜಿಲ್ಲೆಗೆ 10,500 ಡೋಸ್‌ ಕೋವಿಶಿಲ್ಡ್‌ ಹಾಗೂ 3526 ಕೊವ್ಯಾಕ್ಸಿನ್‌ ಬಂದಿದೆ. ಲಸಿಕೆ
ಕಾರ್ಯ ನಿರಂತರವಾಗಿ ನಡೆಯಲಿದೆ ಎಂದು ತಿಳಿಸಿದರು.

ಫಲಾನುಭವಿಗಳಿಗೆ ಹಿಂದಿನ ದಿನವೇ ಕೌನ್ಸಲಿಂಗ್‌ ಮಾಡಿ ಆತಂಕಕ್ಕೆ ಒಳಗಾಗದಂತೆ ಧೈರ್ಯ ತುಂಬಲಾಗಿದೆ.
ಯಾವುದೇ ಸಮಸ್ಯೆ ಉಂಟಾಗಿಲ್ಲ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.