ADVERTISEMENT

ಹಾಸನ | ಕಾಯ್ದೆಯಂತೆ ಗೋಹತ್ಯೆ ತಡೆಯಿರಿ: ಪ್ರಮೋದ್‌ ಮುತಾಲಿಕ್‌

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2025, 5:47 IST
Last Updated 28 ನವೆಂಬರ್ 2025, 5:47 IST
ಪ್ರಮೋದ್‌ ಮುತಾಲಿಕ್‌
ಪ್ರಮೋದ್‌ ಮುತಾಲಿಕ್‌   

ಹಾಸನ: ‘ರಾಜ್ಯ ಸೇರಿದಂತೆ ಜಿಲ್ಲೆಯಲ್ಲಿಯೂ ಗೋ ಹತ್ಯೆ, ಗೋ ಮಾಂಸ ಮಾರಾಟ ಮತ್ತು ಸಾಗಣೆ ಅವ್ಯಾಹತವಾಗಿ ನಡೆಯುತ್ತಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಒತ್ತಾಯಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ಗೋಹತ್ಯೆ, ಮಾಂಸ ಮಾರಾಟ ಹೆಚ್ಚಾಗಿ ನಡೆಯುತ್ತಿದೆ. ಸರ್ಕಾರದ ಗೋ ಹತ್ಯೆ ನಿಷೇಧ ಕಾಯ್ದೆಗೂ ಬೆಲೆ ಇಲ್ಲದಂತಾಗಿದ್ದು, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ಈ ಅಕ್ರಮದ ಮಾಹಿತಿ ಇಲ್ಲವೇ? ನಾವೇನಾದರೂ ಗೋ ಕಳ್ಳ ಸಾಗಣೆ ತಡೆದರೆ ಗಲಭೆ ಪ್ರಕರಣ ದಾಖಲಿಸುತ್ತಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಜಿಲ್ಲೆಯ 4–5 ದನಗಳ ಸಂತೆಯಿಂದ ಕಂಟೇನರ್‌ನಲ್ಲಿ ಗೋವುಗಳನ್ನು ತುಂಬಿ ಸಾಗಾಟ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕಾಯ್ದೆ ಪ್ರಕಾರ ಇದನ್ನು ತಡೆಯದೇ ಇದ್ದಲ್ಲಿ ಹೋರಾಟ ನಡೆಸಲಾಗುವುದು’ ಎಂದರು.

ADVERTISEMENT

‘ಜಿಲ್ಲೆಯ ಚನ್ನರಾಯಪಟ್ಟಣ, ಹಿರೀಸಾವೆ, ರಾಮನಾಥಪುರ, ದುದ್ಧ ಮೂಲಕ ಕೇರಳಕ್ಕೆ ಗೋವುಗಳನ್ನು ಸಾಗಾಟ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇದನ್ನು ಸಂಪೂರ್ಣವಾಗಿ ನಿಯಂತ್ರಿಸಬೇಕು. ಇದನ್ನು ತಡೆಯುವ ನಿಟ್ಟಿನಲ್ಲಿ ಗಲಭೆಗಳು ನಡೆದರೆ ಜಿಲ್ಲಾಡಳಿತವೇ ನೇರ ಹೊಣೆಯಾಗಲಿದೆ’ ಎಂದು ಎಚ್ಚರಿಸಿದರು.

‘ಬಹುತೇಕ ಕ್ರಿಶ್ಚಿಯನ್ ಶಾಲಾ ಆಡಳಿತ ಮಂಡಳಿಯಲ್ಲಿ ಶೇ 99 ರಷ್ಟು ಹಿಂದೂ ಸಿಬ್ಬಂದಿಗಳೇ ಇರುತ್ತಾರೆ. ಹಿಂದೂ ವಿದ್ಯಾರ್ಥಿಗಳೂ ಶಿಕ್ಷಣ ಪಡೆಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ 10 ದಿನ ಕ್ರಿಸ್ಮಸ್‌ ರಜೆ ನೀಡುವುದರಲ್ಲಿ ಅರ್ಥವಿಲ್ಲ. ಇದು ಬ್ರಿಟಿಷರ ಗುಲಾಮಗಿರಿಯ ಹೇರಿಕೆಯಾಗಿದ್ದು, ಸರ್ಕಾರ ಇದನ್ನು ರದ್ದು ಮಾಡಬೇಕು’ ಎಂದು ಒತ್ತಾಯಿಸಿದರು.

‘ರಾಜ್ಯದಲ್ಲಿ ದಸರಾ ಹಬ್ಬ ಸಂದರ್ಭದಲ್ಲಿ 15 ದಿನ ರಜೆ ನೀಡಲಾಗುತ್ತದೆ. ಆದರೆ ಕ್ರಿಶ್ಚಿಯನ್ ಶಾಲೆಗಳು ವಿದ್ಯಾರ್ಥಿಗಳಿಗೆ ರಜೆ ನೀಡದೇ ಆ ಸಂದರ್ಭದಲ್ಲಿ ಪರೀಕ್ಷೆ ನಡೆಸುತ್ತವೆ. ಇದರಿಂದ ಹಿಂದೂ ವಿದ್ಯಾರ್ಥಿಗಳಿಗೆ ತೊಂದರೆ ನೀಡಿದಂತಾಗಿದ್ದು, ಸರ್ಕಾರದ ನಿಯಮದಂತೆ ಅಧಿಕೃತವಾಗಿ ಕ್ರಿಸ್ಮಸ್ ಹಬ್ಬಕ್ಕೆ ಒಂದು ದಿನ ರಜೆ ನೀಡಲಿ’ ಎಂದರು.

‘ಕ್ರಿಶ್ಚಿಯನ್ ಸಮುದಾಯದವರು ಬೇಕಿದ್ದರೆ ತಮ್ಮ ಮನೆಗಳಲ್ಲಿ 10 ದಿನಗಳವರೆಗೂ ಹಬ್ಬ ಆಚರಿಸಲು ನಮ್ಮ ಅಭ್ಯಂತರವಿಲ್ಲ. ಮುಂದಿನ ತಿಂಗಳಲ್ಲಿ ಸರ್ಕಾರ ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಬೇಕು ಇಲ್ಲವಾದರೆ ಹೋರಾಟ ತೀವ್ರಗೊಳಿಸಲಾಗುವುದು’ ಎಂದು ಎಚ್ಚರಿಸಿದರು.

ಸುಂದರೇಶ್, ಪರಶುರಾಮ್, ರಮೇಶ್, ಮೋಹನ್, ಜಾನೇಕೆರೆ ಹೇಮಂತ್, ಧರ್ಮನಾಯಕ್ , ಪುನೀತ್ ಕಾಳೇನಹಳ್ಳಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.