ADVERTISEMENT

ಹಾಸನ ಟಿಕೆಟ್‌: ಜೆಡಿಎಸ್‌ನಲ್ಲಿ ಹೆಚ್ಚಿದ ಕುತೂಹಲ

ಕ್ಷೇತ್ರದಲ್ಲಿ ಭವಾನಿ ರೇವಣ್ಣ ಓಡಾಟ l ಸ್ವರೂಪ್‌ ಬೆಂಬಲಿಗರಿಂದಲೂ ಬೇಡಿಕೆ

ಚಿದಂಬರ ಪ್ರಸಾದ್
Published 8 ಸೆಪ್ಟೆಂಬರ್ 2022, 19:41 IST
Last Updated 8 ಸೆಪ್ಟೆಂಬರ್ 2022, 19:41 IST
ಭವಾನಿ ರೇವಣ್ಣ ಮತ್ತು  ಎಚ್‌.ಪಿ.ಸ್ವರೂಪ್‌
ಭವಾನಿ ರೇವಣ್ಣ ಮತ್ತು ಎಚ್‌.ಪಿ.ಸ್ವರೂಪ್‌   

ಹಾಸನ: ಜಿಲ್ಲೆಯ ಜಿದ್ದಾಜಿದ್ದಿನ ಕ್ಷೇತ್ರವಾಗಿರುವ ಹಾಸನ ವಿಧಾನಸಭಾ ಕ್ಷೇತ್ರವನ್ನು ಮತ್ತೆ ವಶಕ್ಕೆ ಪಡೆಯಲು ಮುಂದಾಗಿರುವ ಜೆಡಿಎಸ್‌, ಯಾರಿಗೆ ಟಿಕೆಟ್‌ ನೀಡಲಿದೆ ಎನ್ನುವ ಕುತೂಹಲ ಹೆಚ್ಚಾಗುತ್ತಿದೆ. ಭವಾನಿ ರೇವಣ್ಣ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಒಂದೆಡೆ ಕೇಳಿ ಬರುತ್ತಿವೆ. ಇನ್ನೊಂದೆಡೆ, ಮಾಜಿ ಶಾಸಕ ಎಚ್‌.ಎಸ್‌. ಪ್ರಕಾಶ್‌ ಅವರ ಪುತ್ರ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಚ್‌.ಪಿ.ಸ್ವರೂಪ್‌ ಅವರಿಗೇ ಟಿಕೆಟ್‌ ನೀಡಬೇಕೆಂಬ ಒತ್ತಾಯವೂ ಕೇಳಿ
ಬರುತ್ತಿದೆ.

ಸದ್ಯ ಹಾಸನದಲ್ಲಿ ಬಿಜೆಪಿಯ ಪ್ರೀತಂ ಗೌಡ ಶಾಸಕರಾಗಿದ್ದು, ಈ ಬಾರಿ ಜೆಡಿಎಸ್‌ನಿಂದ ಪ್ರಬಲ ಪೈಪೋಟಿ ಎದುರಿಸುವ ಸಾಧ್ಯತೆ ಇದೆ. ಕ್ಷೇತ್ರದಲ್ಲಿ ಹೇಗಾದರೂ ಮಾಡಿ, ಮತ್ತೊಮ್ಮೆ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂಬ ಲೆಕ್ಕಾಚಾರ ಜೆಡಿಎಸ್
ಮುಖಂಡರದ್ದು.

ಅದಕ್ಕಾಗಿಯೇ ಭವಾನಿ ರೇವಣ್ಣ ಇತ್ತೀಚೆಗೆ ಹಾಸನ ನಗರದಲ್ಲಿ ಸಂಚರಿಸಿ, ಗಣೇಶ ಪೆಂಡಾಲ್‌ಗಳಿಗೆ ಭೇಟಿ ನೀಡಿದ್ದಾರೆ. ಜನರೊಂದಿಗೆ ಮಾತುಕತೆ ನಡೆಸಿದ್ದಾರೆ. ಕ್ಷೇತ್ರದಲ್ಲಿ ಮಹಿಳೆಯೊಬ್ಬರಿಗೆ ಟಿಕೆಟ್‌ ನೀಡಿದರೆ, ಗೆಲುವಿಗೆ ಸುಲಭವಾಗಲಿದೆ. ಮಹಿಳಾ ಮತದಾರರು ಜೆಡಿಎಸ್‌ಗೆ ಬೆಂಬಲ ನೀಡಲಿದ್ದಾರೆ ಎನ್ನುವ ಲೆಕ್ಕಾಚಾರವೂ ಇದೆ.

ADVERTISEMENT

ಕೆಲ ತಿಂಗಳ ಹಿಂದೆ ಜಿಲ್ಲೆಗೆ ಬಂದಿದ್ದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು ಎಚ್.ಪಿ. ಸ್ವರೂಪ್‌ ಅವರಿಗೆ ಸಿದ್ಧತೆ ಮಾಡಿಕೊಳ್ಳುವಂತೆ ಪರೋಕ್ಷ ಸೂಚನೆ ನೀಡಿದ್ದರು. ಅದರಂತೆ ಅವರೂ ಬೆಂಬಲಿಗರೊಂದಿಗೆ ಸಿದ್ಧತೆಯಲ್ಲಿ ತೊಡಗಿದ್ದಾರೆ. ಈ ಮಧ್ಯೆ ಭವಾನಿ ರೇವಣ್ಣ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಸ್ವರೂಪ್ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿದೆ.

ನಗರದಲ್ಲಿ ಇತ್ತೀಚೆಗೆ ನಡೆದ ಜೆಡಿಎಸ್‌ ಕಾರ್ಯಕರ್ತರ
ಸಭೆಯಲ್ಲೂ ಆಕ್ರೋಶ ಮಾರ್ದನಿಸಿದೆ. ‘ಸ್ವರೂಪ್‌ ಅವರಿಗೇ ಟಿಕೆಟ್‌ ನೀಡಬೇಕು’ ಎಂದು ಬೆಂಬಲಿಗರು ಆಗ್ರಹಿಸಿದ್ದಕ್ಕೆ ಎಚ್‌.ಡಿ. ರೇವಣ್ಣ ಕೆಂಡಾಮಂಡಲರಾಗಿದ್ದರು. ಆ ಹಿನ್ನೆಲೆಯಲ್ಲೇ, ‘ಪಕ್ಷ ಮತ್ತೆ ಕುಟುಂಬ ರಾಜಕಾರಣವನ್ನೇ ಮಾಡುತ್ತಿದೆ’ ಎಂದು ಕಾರ್ಯಕರ್ತರು
ಆರೋಪಿಸುತ್ತಿದ್ದಾರೆ.

ಹಾಸನದತ್ತಲೇ ರೇವಣ್ಣ ಚಿತ್ತ

ಇತ್ತೀಚಿನ ಕೆಲದಿನಗಳಲ್ಲಿ ಶಾಸಕ ಎಚ್‌.ಡಿ. ರೇವಣ್ಣ ಅವರು ಹಾಸನ ಕ್ಷೇತ್ರದ ಸಮಸ್ಯೆಗಳ ಬಗ್ಗೆಯೇ ಹೆಚ್ಚು ಪ್ರಸ್ತಾಪಿಸುತ್ತಿದ್ದು, ಈ ಬಾರಿ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಪ್ರಬಲ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಇರಾದೆಯಲ್ಲಿ ಇದ್ದಂತೆ ತೋರುತ್ತಿದೆ ಎಂದು ಹೇಳಲಾಗುತ್ತಿದೆ.

ಇದು ಶಾಸಕ ಪ್ರೀತಂ ಗೌಡರ ಅಸಮಾಧಾನಕ್ಕೂ ಕಾರಣವಾಗಿದೆ. ‘ದಿನ ಬೆಳಗಾದರೆ ಹಾಸನ ಕ್ಷೇತ್ರದ ಕುರಿತು ಪತ್ರಿಕಾಗೋಷ್ಠಿ ನಡೆಸುವ ರೇವಣ್ಣ ಅವರಿಂದ ಕಿರಿಕಿರಿ ಆಗುತ್ತಿದೆ. ಅವರಿಗೆ ಈ ಕ್ಷೇತ್ರದ ಬಗ್ಗೆ ಆಸಕ್ತಿ ಇದ್ದರೆ ನನ್ನ ವಿರುದ್ಧ ಸ್ಪರ್ಧಿಸಿ ಗೆಲ್ಲಲಿ’ ಎಂದು ಆಹ್ವಾನವನ್ನೂ ನೀಡಿದ್ದಾರೆ.

***

ಹಾಸನ ಕ್ಷೇತ್ರದ ಟಿಕೆಟ್‌ ಬಗ್ಗೆ ಚರ್ಚೆಯಾಗಿಲ್ಲ. ನನಗಂತೂ ಗೊತ್ತಿಲ್ಲ. ಅದನ್ನು ವರಿಷ್ಠರು ನೋಡಿಕೊಳ್ಳುತ್ತಾರೆ. ಹಾಸನಕ್ಕೆ ನಿರಂತರವಾಗಿ ಬರುತ್ತಿರುತ್ತೇನೆ.


ಭವಾನಿ ರೇವಣ್ಣ, ಜಿ.ಪಂ. ಮಾಜಿ ಸದಸ್ಯೆ

ಚುನಾವಣೆಯಲ್ಲಿ ಪ್ರತಿ ಪಕ್ಷದವರೂ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸುವ ಲೆಕ್ಕಾಚಾರ ಮಾಡುವುದು ಸಹಜ. ಆದರೆ, ಮತದಾರರ ನಿರ್ಣಯವೇ ಅಂತಿಮ
– ಪ್ರೀತಂ ಗೌಡ, ಹಾಸನ ಶಾಸಕ


ಟಿಕೆಟ್‌ ಕುರಿತು ಪಕ್ಷದ ವರಿಷ್ಠರು ತೀರ್ಮಾನಿಸಲಿದ್ದಾರೆ. ಹಿರಿಯರಾದ ಎಚ್‌.ಡಿ.ರೇವಣ್ಣ ಅವರ ನೇತೃತ್ವದಲ್ಲಿ ಪಕ್ಷ ಸಂಘಟನೆ ಮಾಡುತ್ತಿದ್ದೇನೆ.

– ಎಚ್‌.ಪಿ.ಸ್ವರೂಪ್‌, ಜಿ.ಪಂ. ಮಾಜಿ ಉಪಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.