ಹಾಸನ: ವಸತಿ ಯೋಜನೆ ಅನುಷ್ಠಾನ ವೇಳೆ ನಡೆದಿರುವ ಹಗರಣದಲ್ಲಿ ನನ್ನ ಹಸ್ತಕ್ಷೇಪವಿದೆ ಎಂದು ಆರೋಪಿಸಿ, ಜನಪ್ರತಿನಿಧಿಗಳ ಗೌರವಕ್ಕೆ ಧಕ್ಕೆ ತಂದಿರುವ ಜೆಡಿಎಸ್ ಮುಖಂಡ ಎನ್.ಆರ್. ಸಂತೋಷ್ ವಿರುದ್ಧ ಸೋಮವಾರ ರಾಜ್ಯ ಹೈಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ರಾಜ್ಯ ಗೃಹ ಮಂಡಳಿ ಅಧ್ಯಕ್ಷ, ಶಾಸಕ ಕೆ.ಎಂ. ಶಿವಲಿಂಗೇಗೌಡ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭೆ ಚುನಾವಣೆ ಸಂದರ್ಭದಿಂದ ಎನ್.ಆರ್. ಸಂತೋಷ್ ನನ್ನ ವಿರುದ್ಧ ನಾನಾ ಆರೋಪಗಳನ್ನು ಮಾಡುತ್ತ ತೇಜೋವಧೆ ಮಾಡುತ್ತಿದ್ದಾರೆ. ರಾಗಿ ಕಳ್ಳ, ಮನೆ ಕಳ್ಳ ಎಂದು ಆರೋಪಿಸಿ ಮಾಧ್ಯಮಗಳಲ್ಲಿ ಸುಳ್ಳು ಆರೋಪ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಸಂಬಂಧ ವಿಡಿಯೋ ಹರಿಬಿಟ್ಟು ಕ್ಷೇತ್ರದ ಶಾಸಕ, ಜನಪ್ರತಿನಿಧಿಯಾದ ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ದೂರಿದರು.
ವಸತಿ ಯೋಜನೆ ಅನುಷ್ಠಾನ ಸಂಬಂಧ ಬಾಣಾವರ ಗ್ರಾಮ ಪಂಚಾಯಿತಿಯಲ್ಲಿ ಹಗರಣ ನಡೆದಿದೆ ಎಂದು ಈ ಹಿಂದೆ ನಾನೇ ಪತ್ರಿಕಾಗೋಷ್ಠಿ ನಡೆಸಿದ್ದು, ತಪ್ಪಿತಸ್ಥರ ವಿರುದ್ಧ ಅಗತ್ಯ ಕಾನೂನು ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ ಎಂದು ತಿಳಿಸಿದ್ದೆ. ಬಾಣಾವರ ಪಂಚಾಯಿತಿ ಪಿಡಿಒ ಕುಮಾರಸ್ವಾಮಿ ಹಾಗೂ ಇಒ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದೇನೆ ಎಂದರು.
ಈ ಪ್ರಕರಣ ಸಂಬಂಧ ಪಿಡಿಒ ಕುಮಾರಸ್ವಾಮಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಆತನನ್ನು ಅಮಾನತು ಮಾಡಲಾಗುತ್ತದೆ. ಆದರೆ ಇದರಲ್ಲಿ ನನ್ನ ಹೆಸರು ಪ್ರಸ್ತಾಪಿಸುವ ಮೂಲಕ ಹಗರಣದಲ್ಲಿ ನನ್ನ ಪಾತ್ರ ಇದೆ ಎಂದು ಇಲ್ಲಸಲ್ಲದ ದಾಖಲೆಗಳನ್ನು ತೋರಿಸಿ ಜನರಿಗೆ ತಪ್ಪು ಸಂದೇಶ ನೀಡಲಾಗುತ್ತಿದೆ ಎಂದು ಆರೋಪಿಸಿದರು.
ಕ್ಷೇತ್ರದಲ್ಲಿ ಆಡಳಿತ ಸರಿಯಾಗಿ ಇಲ್ಲ ಎಂದರೆ ವಿರೋಧ ಪಕ್ಷದವರು ಸತ್ಯ ವಿಷಯದ ಕುರಿತು ಹೋರಾಟ ಮಾಡಲಿ. ಆದರೆ ಸಂತೋಷ್ ಒಮ್ಮೆ ಜೆಡಿಎಸ್ ಎನ್ನುತ್ತಾರೆ. ಮತ್ತೊಮ್ಮೆ ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಜೊತೆಗೆ ಕಾಣಿಸಿಕೊಳ್ಳುತ್ತಾರೆ. ಹೀಗಿರುವಾಗ ತಮ್ಮ ನಿಲುವು ಏನೆಂಬುದನ್ನು ಅವರು ಮೊದಲು ಸ್ಪಷ್ಟಪಡಿಸಲಿ ಎಂದರು.
ನನ್ನ ಚರಿತ್ರೆ ಕುರಿತು ಮಾತನಾಡಿದ್ದಾರೆ. ಅರಸೀಕೆರೆ ವಿಧಾನಸಭಾ ಕ್ಷೇತ್ರದ 36 ಪಂಚಾಯಿತಿ ನನ್ನ ಹಿಡಿತದಲ್ಲಿದ್ದು, ಪಂಚಾಯಿತಿಯಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ಸಂತೋಷ್ ಆರೋಪ ಮಾಡಿದ್ದು, ಪಂಚಾಯಿತಿಯ ಅಧ್ಯಕ್ಷರೆಲ್ಲ ಈತನ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಜಾತಿಗಳ ನಡುವೆ ಎತ್ತಿ ಕಟ್ಟುವ ಕೆಲಸವನ್ನು ಸಂತೋಷ್ ಮಾಡುತ್ತಿದ್ದು, ಇದನ್ನು ಕ್ಷೇತ್ರದ ಜನರು ಸಹಿಸುವುದಿಲ್ಲ ಎಂದರು.
ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ರಾಗಿ ಕಳ್ಳ ಎಂಬುದನ್ನು ಸಾಬೀತುಪಡಿಸಲು ಬಹಿರಂಗ ಸವಾಲು ಹಾಕಿದ್ದರು. ಆ ಸಂದರ್ಭದಲ್ಲಿ ಧರ್ಮಸ್ಥಳಕ್ಕೆ ತೆರಳಿ, ಆಣೆ ಪ್ರಮಾಣ ಮಾಡಿದ್ದೆ. ಅಂದು ಸಂತೋಷ್ ಧರ್ಮಸ್ಥಳಕ್ಕೆ ಬರಲೇ ಇಲ್ಲ. ಈಗ ಮಾನ ಮರ್ಯಾದೆ ಇಲ್ಲದೇ ಬಾಯಿಗೆ ಬಂದಂತೆ ನನ್ನ ವಿರುದ್ಧ ಆರೋಪ ಮಾಡುತ್ತಿರುವುದು ಎಷ್ಟು ಸರಿ ಎಂದು ಕಿಡಿಕಾರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.