ADVERTISEMENT

ನಗರಸಭೆಯಲ್ಲಿ ದೇವೇಗೌಡರ ಭಾವಚಿತ್ರ ತೆರವು: ಸದಸ್ಯರ ಧರಣಿ

ಜೆಡಿಎಸ್‌-ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2021, 14:41 IST
Last Updated 19 ಆಗಸ್ಟ್ 2021, 14:41 IST
ಹಾಸನ ನಗರಸಭೆ ಸಾಮಾನ್ಯ ಸಭೆಯಲ್ಲಿ ಜೆಡಿಎಸ್‌ ಸದಸ್ಯರು ಧರಣಿ ನಡೆಸಿದರು.
ಹಾಸನ ನಗರಸಭೆ ಸಾಮಾನ್ಯ ಸಭೆಯಲ್ಲಿ ಜೆಡಿಎಸ್‌ ಸದಸ್ಯರು ಧರಣಿ ನಡೆಸಿದರು.   

ಹಾಸನ: ನಗರಸಭೆ ಅಧ್ಯಕ್ಷರ ಕೊಠಡಿಯಲ್ಲಿದ್ದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಭಾವಚಿತ್ರ ತೆರವು ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಜೆಡಿಎಸ್‌ ಮತ್ತು ಬಿಜೆಪಿ ಸದಸ್ಯರ ನಡುವೆ ವಾಕ್ಸಮರ ನಡೆದು, ಕೈ ಕೈ ಮಿಲಾಯಿಸುವ ಹಂತ ತಲುಪಿತ್ತು.

ನಗರದ ಅಭಿವೃದ್ಧಿ ಮತ್ತು ಸಮಸ್ಯೆಗಳ ಕುರಿತು ಚರ್ಚಿಸಬೇಕಾದ ಸಾಮಾನ್ಯ ಸಭೆ ಸದಸ್ಯರ ಕೂಗಾಟದಿಂದ ಗೊಂದಲ ಗೂಡಾಗಿ ಮಾರ್ಪಾಡಾಯಿತು. ಕೊನೆಗೆ ಅಧ್ಯಕ್ಷರು ಸಭೆಯನ್ನು ಮಧ್ಯಾಹ್ನಕ್ಕೆ ಮುಂದೂಡಿದರು.

ನಗರಸಭೆ ಕುವೆಂಪು ಸಭಾಂಗಣದಲ್ಲಿ ಗುರುವಾರ ಸಾಮಾನ್ಯ ಸಭೆ ಆರಂಭವಾಗುತ್ತಿದ್ದಂತೆ ವಿಷಯಪ್ರಸ್ತಾಪಿಸಿದ ಜೆಡಿಎಸ್‌ ಸದಸ್ಯ ಶಂಕರ್‌, ‘ಯಾವ ಕಾರಣಕ್ಕೆ ದೇವೇಗೌಡರ ಭಾವಚಿತ್ರತೆರವು ಮಾಡಲಾಗಿದೆಸಭೆಗೆ ಸರಿಯಾದ ಕಾರಣ ನೀಡಬೇಕು. ಗೌಡರು ಜಿಲ್ಲೆ, ರಾಜ್ಯ ಮತ್ತು ದೇಶಕ್ಕೆ ಕೊಡುಗೆ ನೀಡಿದ್ದಾರೆ.ಅಂತಹವರ ಭಾವಚಿತ್ರ ತೆಗೆದು ಹಾಕಲು ಕಾರಣವೇನು? ಇದರ ಹಿಂದೆ ಯಾರಿದ್ದಾರೆ?. ಭಾವಚಿತ್ರಹಾಕುವವರೆಗೂ ಸಭೆ ನಡೆಸಲು ಬಿಡುವುದಿಲ್ಲ’ ಎಂದು ಪಟ್ಟು ಹಿಡಿದರು.

ADVERTISEMENT

ಇದಕ್ಕೆ ದನಿಗೂಡಿಸಿದ ಇತರೆ ಸದಸ್ಯರು, ದೇವೇಗೌಡರ ಭಾವಚಿತ್ರ ತೆರವುಗೊಳಿಸಿ ಅಪಮಾನಮಾಡಲಾಗಿದೆ. ಕೂಡಲೇ ಅವರ ಭಾವಚಿತ್ರ ಹಾಕಬೇಕು. ಇಲ್ಲದಿದ್ದರೆ ಹೋರಾಟ ಮಾಡಲಾಗುವುದು’ಎಚ್ಚರಿಸಿದರು.

ಜೆಡಿಎಸ್ ಸದಸ್ಯರಾದ ಗಿರೀಶ್, ಅಮೀರ್ ಜಾನ್, ಕ್ರಾಂತಿ ಚಂದ್ರಪ್ರಸಾದ್ ತ್ಯಾಗಿ ಸೇರಿದಂತೆ ಇತರೆ ಸದಸ್ಯರು ಕಾರಣ ನೀಡುವಂತೆ ಅಧ್ಯಕ್ಷರನ್ನು ಆಗ್ರಹಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸದಸ್ಯ ಚಂದ್ರಶೇಖರ್ , ಒಂದೇ ವಿಷಯದ ಕುರಿತು ಎಲ್ಲಾ ಸದಸ್ಯರುಭಾಷಣ ಮಾಡಿದರೆ ಸಮಯ ವ್ಯರ್ಥವಾಗಲಿದೆ. ಅಧ್ಯಕ್ಷರಿಗೆ ಉತ್ತರಿಸಲು ಅವಕಾಶ ನೀಡಬೇಕು’ಎಂದು ಹೇಳುತ್ತಿದ್ದಂತೆ ಜೆಡಿಎಸ್‌ ಸದಸ್ಯರು ಅವರ ಆಸನದತ್ತ ತೆರಳಿ,ಕ್ಷಮೆಯಾಚಿಸುವಂತೆ ಆಗ್ರಹಿಸಿದರು.

ಬಿಜೆಪಿ ಸದಸ್ಯೆ ಶಿಲ್ಪಾ ಮಾತನಾಡಿ, ವಾರ್ಡ್‌ ನಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಇದರ ಬಗ್ಗೆ ಚರ್ಚೆನಡೆಸುತ್ತಿಲ್ಲ. ಜನರಿಗೆ ಏನು ಉತ್ತರ ಕೊಡಬೇಕು ಎಂದು ಪ್ರಶ್ನಿಸಿದರು.

ಜೆಡಿಎಸ್‌ ಮತ್ತು ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಸಭೆ ಗೊಂದಲದಗೂಡಾಯಿತು. ಪರಸ್ಪರ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋದರು. ಯಾರು ಏನು ಮಾತನಾಡುತ್ತಿದ್ದಾರೆ ಎಂಬುದು ಗೊತ್ತಾಗಲಿಲ್ಲ. ಹಲವು ಸದಸ್ಯರು ಮಾಸ್ಕ್‌ ಸಹ ಧರಿಸರಿಲಿಲ್ಲ.

ಅಧ್ಯಕ್ಷ ಆರ್‌.ಮೋಹನ್ ಮಾತನಾಡಿ, ‘ಅಧ್ಯಕ್ಷರ ಕೊಠಡಿಗೆ ಬಣ್ಣ ಬಳಿಸುವ ಸಲುವಾಗಿ ದೇವೇಗೌಡರಫೋಟೋವನ್ನು ತೆರವುಗೊಳಿಸಲಾಗಿತ್ತು. ಮೂರು ನಾಲ್ಕು ದಿನ ಸಮಯ ನೀಡಿ ಅವರ ಭಾವಚಿತ್ರದಜೊತೆಗೆ ಪ್ರಧಾನಿ ಮೋದಿ ಅವರ ಭಾವಚಿತ್ರವನ್ನು ಹಾಕುತ್ತೇನೆ’ ಎಂದರು.

ಅಧ್ಯಕ್ಷರ ಉತ್ತರದಿಂದ ಸಮಾಧಾನವಾದ ಸದಸ್ಯರು, ಅವರಪೀಠದ ಎದುರು ಜೆಡಿಎಸ್‌ ಸದಸ್ಯರು ಕುಳಿತು ಧರಣಿ ನಡೆಸಿದರು. ಬೇಕೆ ಬೇಕೆ ನ್ಯಾಯ ಬೇಕು, ಅಧ್ಯಕ್ಷರಿಗೆ ಧಿಕ್ಕಾರ ಎಂಬ ಘೋಷಣೆ ಕೂಗಿದರು. ಅಧ್ಯಕ್ಷರು ಸುಮ್ಮನಿರುವಂತೆ ಹಲವುಬಾರಿ ಮನವಿ ಮಾಡಿದರೂ ಸದಸ್ಯರು ಕೇಳಲಿಲ್ಲ.

ಸದಸ್ಯವಾಸು ಮಾತನಾಡಿ, ‘ಬಣ್ಣ ಬಳಿದು ಮೂರು ತಿಂಗಳಾಗಿದೆ. ಬೇರೆ ನಾಯಕರ ಭಾವಚಿತ್ರ ಹಾಕಲಾಗಿದೆ.ಆದರೆ ದೇವೇಗೌಡರ ಭಾವಚಿತ್ರವನ್ನು ಮಾತ್ರ ಯಾಕೆ ತೆಗೆದಿದ್ದಾರೆ ಗೊತ್ತಿಲ್ಲ. ಅದಕ್ಕೆಸರಿಯಾದ ಉತ್ತರ ಸಹ ನೀಡುತ್ತಿಲ್ಲ. ಗೌಡರು ಜಿಲ್ಲೆಗೆ ಮಾತ್ರವಲ್ಲದೇದೇಶಕ್ಕೆ ಅವರ ಕೊಡುಗೆ ಅಪಾರ’ ಎಂದರು.

ಗದ್ದಲ ಮುಂದುವರಿದ ಕಾರಣ ಅರ್ಧ ಗಂಟೆ ಸಭೆಯನ್ನು ಮುಂದೂಡಲಾಯಿತು.ಮಧ್ಯಾಹ್ನದ ಬಳಿಕ ಸಭೆಆರಂಭಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.