ಸಕಲೇಶಪುರ: ಇಂದಿರಾ ಕ್ಯಾಂಟೀನ್ ಅವ್ಯವಸ್ಥೆ ಹಾಗೂ ಬಡವರ ಅನ್ನದ ಹೆಸರಿನಲ್ಲಿ ಹಣ ದುರುಪಯೋಗ ಆರೋಪ ಕುರಿತು ‘ಪ್ರಜಾವಾಣಿ’ ‘ಇಂದೀರಾ ಕ್ಯಾಂಟೀನ್: ಬಡವರ ಅನ್ನಕ್ಕೆ ಕನ್ನ’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು. ಅದರ ಪರಿಣಾಮ, 5 ತಿಂಗಳಿಂದ ಉಳಿಸಿಕೊಂಡಿದ್ದ ವಿದ್ಯುತ್ ಬಿಲ್ ಬಾಕಿಯನ್ನು ಗುತ್ತಿಗೆದಾರ ಸೆಸ್ಕ್‌ಗೆ ಪಾವತಿ ಮಾಡಿದ್ದಾರೆ. ಇದೀಗ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.
ಅಕ್ಕಿ ಹಾಗೂ ದಿನಸಿ ದಾಸ್ತಾನು ವ್ಯವಸ್ಥೆ ಮಾಡಲಾಗಿದೆ. ಉಸ್ತುವಾರಿ ನೋಡಿಕೊಳ್ಳುತ್ತಿದ್ದವರನ್ನು ಬದಲಾವಣೆ ಮಾಡಿ, ಈ ಹಿಂದೆ ಇದ್ದ ನಿಶ್ಚಯ ಎಂಬುವವರನ್ನು ನೇಮಕ ಮಾಡಲಾಗಿದೆ. ಮೂವರು ಸಿಬ್ಬಂದಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಪುರಸಭೆಯಿಂದ ನೀರಿನ ಸಂಪರ್ಕಕ್ಕೆ ಪೈಪ್ ಅಳವಡಿಸಲಾಗಿದೆ.
ಉಪವಿಭಾಗಾಧಿಕಾರಿ ಡಾ.ಶ್ರುತಿ ಕ್ಯಾಂಟೀನ್‌ಗೆ ಭೇಟಿ ನೀಡಿ ಅವ್ಯವಸ್ಥೆ ಪರಿಶೀಲಿಸಿದ್ದು, ವ್ಯವಸ್ಥೆ ಸರಿಪಡಿಸುವಂತೆ ಗುತ್ತಿಗೆದಾರರಿಗೆ ನೋಟಿಸ್ ನೀಡಿದ್ದಾರೆ. ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಅವರು ಪುರಸಭೆ ಮುಖ್ಯಾಧಿಕಾರಿಯನ್ನು ಕಚೇರಿಗೆ ಕರೆಯಿಸಿ ಇಂದಿರಾ ಕ್ಯಾಂಟೀನ್ ಅವ್ಯವಸ್ಥೆ ವಿರುದ್ಧ ಎಚ್ಚರಿಕೆ ನೀಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.