ADVERTISEMENT

ಒಂಟಿ ಸಲಗ ದಾಳಿಗೆ ಮಹಿಳೆ, ಎರಡು ಹಸು ಬಲಿ

​ಪ್ರಜಾವಾಣಿ ವಾರ್ತೆ
Published 19 ಜೂನ್ 2019, 10:54 IST
Last Updated 19 ಜೂನ್ 2019, 10:54 IST
ಒಂಟಿ ಸಲಗ ದಾಳಿಗೆ ಬಲಿಯಾದ ಹಸು.
ಒಂಟಿ ಸಲಗ ದಾಳಿಗೆ ಬಲಿಯಾದ ಹಸು.   

ಹಾಸನ: ಹಳೇಬೀಡು ಸಮೀಪ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ದೇವರಹಳ್ಳಿ ಗ್ರಾಮದ ಪುಷ್ಪಾ ಬಾಯಿ (40) ಎಂಬುವರ ಮೇಲೆ ಒಂಟಿ ಸಲಗ ಏಕಾಏಕಿ ದಾಳಿ ಮಾಡಿ ಸಾಯಿಸಿದೆ.

ಪತಿಯ ಜೊತೆಗೆ ಜಮೀನಿನಲ್ಲಿ ಕೆಲಸ ಮಾಡಲು ಹೋಗಿದ್ದಾಗ, ಪ್ರತ್ಯಕ್ಷವಾದ ಸಲಗ ಕಂಡು ಪುಷ್ಪಾ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಆದರೆ, ಬೆನ್ನಟ್ಟಿದ ಗಜ, ಸೊಂಡಿಲಿನಿಂದ ಬೀಳಿಸಿ ನಂತರ ತುಳಿದು ಸಾಯಿಸಿದೆ.

ಮೃತ ಮಹಿಳೆ ಪತಿ ಠಾಕೂರ್‌ ಸಿಂಗ್‌, ಕೂದಲೆಳೆ ಅಂತರದಲ್ಲಿ ಸಾವಿನ ದವಡೆಯಿಂದ ಪಾರಾಗಿದ್ದಾರೆ.

ADVERTISEMENT

ಈ ದೃಶ್ಯಾವಳಿಯನ್ನು ಅನತಿ ದೂರದಲ್ಲಿದ್ದ ಪತಿ ಹಾಗೂ ಗ್ರಾಮದ ಕೆಲವರು ಕಣ್ಣಾರೆ ಕಂಡುಕಿರುಚಿಕೊಂಡಿದ್ದಾರೆ.

ಇದಕ್ಕೂ ಮುನ್ನ ಸಲಗ ಕೋಡಿಹಳ್ಳಿಯಲ್ಲಿ ರಂಗೇಗೌಡರ ತೋಟದ ಮನೆಯಲ್ಲಿ ಕಟ್ಟಿಹಾಕಿದ್ದ ಎರಡೂ ಹಸುವಿನ ಮೇಲೂ ದಾಳಿ ನಡೆಸಿ ತುಳಿದು ಸಾಯಿಸಿದೆ.

ಸಮೀಪದ ಶುಂಠಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಕೃಷ್ಣೇಗೌಡರ ಮೇಲೂ ದಾಳಿ ನಡೆಸಲು ಯತ್ನಿಸಿದಾಗ, ಅವರು ಅಲ್ಲಿಂದ ಓಡಿ ಹೋಗಿದ್ದಾರೆ.

‘ಸಲಗನನ್ನು ಮರಳಿ ಚಿಕ್ಕಮಗಳೂರು ಕಡೆಗೆ ಓಡಿಸಲು ಪ್ರಯತ್ನ ಮಾಡಲಾಗುವುದು, ಇಲ್ಲವಾದರೆ ರೇಡಿಯೊ ಕಾಲರ್ ಅಳವಡಿಸಿ, ಬಯಲು ಸೀಮೆ ಭಾಗದಲ್ಲೂ ಓಡಾಡುವ ಆನೆಗಳ ಚಲನ-ವಲನ ಅಧ್ಯಯನ ಮಾಡಲಾಗುವುದು’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಂ ಬಾಬು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.